Advertisement

ಅಜಲಾಡಿ ಕೆರೆ ದುರಸ್ತಿಗೆ ಅನುದಾನ ಮರೀಚಿಕೆ?

10:04 PM Dec 17, 2019 | Team Udayavani |

ನರಿಮೊಗರು: ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಅಜಲಾಡಿ ಕಟ್ಟೆ ಕೆರೆ ದುರಸ್ತಿಗೆ ಅನುದಾನ ಮರೀಚಿಕೆಯಾಗಿಯೇ ಉಳಿದಿದೆ. ಬೇಸಗೆಯಲ್ಲಿ ನೆನಪಾಗುವ ಈ ಕೆರೆಯ ಅಭಿವೃದ್ಧಿ ಮಾತು ಮತ್ತೆ ಯಾವುದೇ ಪ್ರಗತಿ ಕಾಣುವುದಿಲ್ಲ. ಗ್ರಾಮದ ಹಿರಿಯ ಜೀವಗಳಿಗೆ ಈ ಕೆರೆಯ ಐತಿಹ್ಯದ ಬಗ್ಗೆಯೂ ಗೊತ್ತಿದೆ. ಅಂದಿನ ಕಾಲದಲ್ಲಿ ಇಡೀ ಊರಿಗೆ ನೀರಿನ ಆಶ್ರಯವಾಗಿದ್ದ ಅಜಲಾಡಿ ಕಟ್ಟೆ ಕೆರೆ ಇಂದು ಹೂಳು ತುಂಬಿ ಕೆರೆ ಮೈದಾನವಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿಗೆ ಬರ ಉಂಟಾದಾಗ ಈ ಕೆರೆಯ ನೆನಪಾಗುತ್ತದೆ. ಮತ್ತೆ ಮಳೆ ಬಂದಾಗ ಮರೆತುಬಿಡುತ್ತಾರೆ.

Advertisement

300 ವರ್ಷಗಳ ಇತಿಹಾಸ
ಅಜಲಾಡಿಕಟ್ಟೆ ಕೆರೆ ನೀರಿನ ದೊಡ್ಡ ಆಶ್ರಯ ಕೇಂದ್ರವಾಗಿತ್ತು. ಗ್ರಾಮದಲ್ಲಿ ಎಲ್ಲೂ ನೀರಿಲ್ಲದೇ ಇದ್ದರೂ ಅಜಲಾಡಿ ಕೆರೆಯಲ್ಲಿ ಧಾರಾಳ ನೀರು ಲಭ್ಯವಿರುತ್ತಿತ್ತು. ಸಾಧಾರಣ 300 ವರ್ಷಗಳ ಇತಿಹಾಸದ ಬಗ್ಗೆ ಹಿರಿಯರು ಹೇಳುತ್ತಿದ್ದರೂ ಅದಕ್ಕಿಂದತೂ ಹಿಂದೆಯೇ ಈ ಕೆರೆ ಇತ್ತು ಎಂದು ಹೇಳುವವರೂ ಇದ್ದಾರೆ. ಭತ್ತ ಕೃಷಿಯೇ ಮೂಲ ಬೇಸಾಯವಾಗಿದ್ದ ಕಾಲದಲ್ಲಿ ಬಹುತೇಕ ಗದ್ದೆಗಳಿಗೆ ಇದೇ ಕೆರೆಯಿಂದ ನೀರು ಹಾಯಿಸುತ್ತಿದ್ದರು. ಅಜಲಾಡಿ ಕೆರೆಯ ನೀರು ಕದಡಿದರೆ ಗ್ರಾಮದ ಗದ್ದೆಯ ನೀರು ಕದಡುತ್ತಿತ್ತು ಎಂಬ ಮಾತೇ ಚಾಲ್ತಿಯಲ್ಲಿತ್ತು. ಬಹಳ ಕಾಲದ ವರೆಗೆ ಈ ಕೆರೆಯನ್ನು ಹಿರಿಯರು ಸಂರಕ್ಷಣೆ ಮಾಡಿಕೊಂಡು ಬಂದಿದ್ದರು.

ಭತ್ತ ಕೃಷಿ ಮಾಡುತ್ತಿದ್ದವರು ಕಾಲಕ್ರಮೇಣ ಅಡಿಕೆಯತ್ತ ವಾಲಿದಾದ ಕೆರೆಯೂ ತನ್ನ ಅಸ್ತಿತ್ವನ್ನೇ ಕಳೆದುಕೊಳ್ಳಲು ಆರಂಭ ಮಾಡಿತ್ತು. ಹಲವು ವರ್ಷಗಳಿಂದ ನೀರನ್ನು ಬಳಸದೇ ಇರುವ ಕಾರಣ ಕೆರೆಯಲ್ಲಿ ಹೂಳು ತುಂಬಿಕೊಂಡಿದೆ. ಮುಕ್ಕಾಲು ಭಾಗ ಕೆರೆ ಹೂಳೇ ತುಂಬಿದೆ. ಬೇಸಗೆಯಲ್ಲೂ ನೀರುಣಿಸುತ್ತಿದ್ದ ಈ ಕೆರೆಯಲ್ಲಿ ಫೆಬ್ರವರಿ ತಿಂಗಳಲ್ಲಿಯೇ ನೀರು ಬತ್ತಿ ಹೋಗುತ್ತದೆ. ಬಳಿಕ ಕೆರೆ ಆಟದ ಮೈದಾನವಾಗಿ ಪರಿವರ್ತನೆಯಾಗುತ್ತಿದೆ.

ಕೆರೆಗೆ ಜೀವ ನೀಡಲು ಆಗ್ರಹ
ಐತಿಹಾಸಿಕ ಕೆರೆಗೆ ಮತ್ತೆ ಜೀವ ನೀಡುವ ಉದ್ದೇಶದಿಂದ ಸ್ಥಳೀಯರು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಗ್ರಾ.ಪಂ., ಜಿ.ಪಂ., ಶಾಸಕರು ಮತ್ತು ಸಂಸದರ ಮೂಲಕ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಐದು ವರ್ಷಗಳಿಂದ ಗ್ರಾಮಸ್ಥರು ಈ ಒತ್ತಾಯವನ್ನು ಮಾಡುತ್ತಿದ್ದರೂ ಇದುವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಕೆರೆಯ ಸುತ್ತ ಮುತ್ತ ಬೇಲಿ ನಿರ್ಮಿಸಲು ಜಿ.ಪಂ.ನಿಂದ 2 ಲಕ್ಷ ರೂ ಅನುದಾನ ಕಳೆದ ಬಾರಿ ಬಿಡುಗಡೆಯಾಗಿತ್ತು. ಕೆರೆಯನ್ನು ಅನ್ಯರು ಒತ್ತುವರಿ ಮಾಡದಿರಲಿ ಎಂದು ಸುತ್ತಲೂ ಬೇಲಿ ಹಾಕಿದ್ದಾರೆ. ಕುರಿಯ ಸರ್ವೆ ನಂಬರ್‌ 2ರಲ್ಲಿ 3.52 ಎಕ್ರೆ ವಿಸ್ತೀರ್ಣದಲ್ಲಿ ಕೆರೆ ವಿಶಾಲವಾಗಿ ಗೋಚರಿಸುತ್ತಿದೆ.

Advertisement

3 ಕೋಟಿ ರೂ. ಬೇಕು
ಹೂಳೆತ್ತಿ ಮತ್ತೆ ಕೆರೆಯ ರೂಪಕ್ಕೆ ಪರಿವರ್ತಿಸಬೇಕಾದಲ್ಲಿ 3 ಕೋಟಿ ರೂ. ಅನುದಾನ ಬೇಕಿದೆ ಎಂಬುದು ಸ್ಥಳೀಯರ ಮತ್ತು ತಜ್ಞರ ಲೆಕ್ಕಾಚಾರ. ಈಗಾಗಲೇ ಪ್ರಸ್ತಾವನೆ ಸರಕಾರದ ಹಂತದಲ್ಲಿದೆ ಎಂದಿರುವ ಶಾಸಕ ಸಂಜೀವ ಮಠಂದೂರು, ಕೆರೆಯನ್ನು ಉಳಿಸುವುದಾಗಿ ಗ್ರಾಮಸ್ಥರಿಗೆ ಭರವಸೆಯನ್ನು ನೀಡಿದ್ದಾರೆ.

ಸಾವಿರ ಎಕ್ರೆ ಕೃಷಿಗೆ ನೀರು
ಕೆರೆಯನ್ನು ದುರಸ್ತಿ ಮಾಡಿ ಅದರಲ್ಲಿ ನೀರು ಇಂಗಿಸಿದಲ್ಲಿ ಸ್ಥಳೀಯವಾಗಿ 1,000 ಎಕ್ರೆ ಕೃಷಿ ಭೂಮಿಗೆ ನೀರು ಬಳಸಬಹುದಾಗಿದೆ. ಕುಡಿಯುವ ನೀರಿಗೆ ಬಳಸುವುದರ ಜತೆಗೆ ಕೃಷಿಗೂ ಬಳಕೆ ಮಾಡಬಹುದಾಗಿದೆ. ಕೆರೆಯಲ್ಲಿ ನೀರು ಇಂಗುವ ಕಾರಣ ಸ್ಥಳೀಯ ಕೆರೆ ಮತ್ತು ಬಾವಿಯಲ್ಲೂ ನೀರಿನ ಒಳಹರಿವು ಹೆಚ್ಚಳವಾಗುವುದರಿಂದ ಗ್ರಾಮದಲ್ಲಿ ನೀರಿನ ಬರವನ್ನು ತಪ್ಪಿಸಬಹುದಾಗಿದೆ.

ಪ್ರಸ್ತಾವನೆ ಕಳುಹಿಸಿದ್ದೇವೆ
ಗ್ರಾ.ಪಂ.ನಿಂದಲೂ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಕೆರೆಯ ಸುತ್ತ ಬೇಲಿ ಹಾಕುವ ಕಾರ್ಯ ಮಾಡಲಾಗಿದೆ. ದುರಸ್ತಿಗೆ ಬೃಹತ್‌ ಮೊತ್ತ ಬೇಕಾಗಿರುವ ಕಾರಣ ಶಾಸಕರ ಮೂಲಕವೇ ಈ ಕಾರ್ಯ ಆಗಬೇಕಿದೆ. ಗ್ರಾಮಸ್ಥರ ಬೇಡಿಕೆಯನ್ನು ಜನಪ್ರತಿನಿ ಗಳ ಬೆಂಬಲದಿಂದ ಕಾರ್ಯರೂಪಕ್ಕೆ ತರಬೇಕಿದೆ. ದುರಸ್ತಿ ಮಾಡದೇ ಇದ್ದಲ್ಲಿ ಕೆಲವೇ ವರ್ಷಗಳಲ್ಲಿ ಕೆರೆ ನಾಶವಾಗಬಹುದು ಎಂಬ ಭಯವೂ ಇದೆ ಎಂದು ಆರ್ಯಾಪು ಗ್ರಾ.ಪಂ. ಉಪಾಧ್ಯಕ್ಷ ವಸಂತ ಶ್ರೀದುರ್ಗಾ ತಿಳಿಸಿದ್ದಾರೆ.

ಅನುದಾನದ ವಿಶ್ವಾಸ
3 ಕೋಟಿ ರೂ. ಅನುದಾನ ನೀಡುವಂತೆ ಶಾಸಕರಲ್ಲಿ ಮನವಿ ಮಾಡಿದ್ದೇವೆ. ದುರಸ್ತಿ ಮಾಡುವಂತೆ ವಿವಿಧ ಇಲಾಖೆಗಳಿಗೆ ಒತ್ತಾಯ ಮಾಡಿದ್ದೇವೆ. ದುರಸ್ತಿಯಾದಲ್ಲಿ ಸುತ್ತಮುತ್ತಲ ಗ್ರಾಮಗಳಿಗೂ ಪ್ರಯೋಜನವಿದೆ. ಶಾಸಕರು ಅನುದಾನವನ್ನು ಒದಗಿಸುವ ವಿಶ್ವಾಸವಿದೆ.
– ಬೂಡಿಯಾರ್‌ ರಾಧಾಕೃಷ್ಣ ರೈ, ನಿರ್ದೇಶಕರು, ಎಪಿಎಂಸಿ, ಪುತ್ತೂರು

ಪ್ರವೀಣ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next