Advertisement

ಹಿರಿಯ ನಾಗರಿಕರಿಗಾಗಿ ಬಜೆಟ್‌ನಲ್ಲಿ ಅನುದಾನ

12:54 PM Feb 24, 2020 | Suhan S |

ಬೆಳಗಾವಿ: ಸಮಾಜದಲ್ಲಿರುವ ಹಿರಿಯ ನಾಗರಿಕರಿಗಾಗಿ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಲು ಪ್ರಯತ್ನ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ನಗರದ ಗಾಂಧಿ ಭವನದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ 5ನೇ ವಾರ್ಷಿಕೋತ್ಸವ ಹಾಗೂ ಪ್ರಥಮ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ನಾಗರಿಕರಿಗೆ ಅನೇಕ ಸವಲತ್ತು ಒದಗಿಸುವ ಕರ್ತವ್ಯ ನಮ್ಮದಾಗಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದರು.

ಸರ್ಕಾರದಿಂದ ಸಿಗಬೇಕಾದ ಎಲ್ಲ ರೀತಿಯ ನೆರವು-ಸವಲತ್ತು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಬದಲಾದ ಜಗತ್ತಿನಲ್ಲಿ ಸಂಬಂಧಗಳು ಹಿರಿಯರ ತೊಂದರೆ, ಸಮಸ್ಯೆ ಬಗೆಹರಿಸಲು ಸಂಘ ರಚಿಸಿಕೊಳ್ಳುತ್ತಿದ್ದಾರೆ. ಮಹಿಳೆ, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನ್ಯಾಯ ಒದಗಿಸಲಾಗುವುದು. ಹಿರಿಯರ ನಾಗರಿಕರ ಪ್ರಕರಣಗಳ ಬಗ್ಗೆ ಸಂಘದ ಪದಾಧಿಕಾರಿಗಳು ಗಮನಕ್ಕೆ ತಂದಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗೆ ವಿಶೇಷ ಚಿಕಿತ್ಸೆ ಕೊಡಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬದಲ್ಲಿ ಸಾಕಷ್ಟು ಅನನ್ಯತೆ ಇತ್ತು. ಆಗ ನಮ್ಮ ಮನೆಯ ಹಿರಿಯರು ಮಹಾನ್‌ ಪುರುಷರ ಭಾಷಣ ಹೇಳಿ ಭಾರತೀಯ ಸಂಸ್ಕೃತಿ ಬಗ್ಗೆ ತಿಳಿವಳಿಕೆ ನೀಡುತ್ತಿದ್ದರು. ಹಳೆ ಬೇರು ಹೊಸ ಚಿಗುರು ಎಲ್ಲವೂ ಆಗ ಬೇರೆಯುತ್ತಿತ್ತು. ಅವಿಭಕ್ತ ಕುಟುಂಬದಲ್ಲಿ ಹಿರಿಯರು ನೀಡುವ ಸಂಸ್ಕಾರವೇ ಒಂದು ಪಾಠವಾಗುತ್ತಿತ್ತು. ಆದರಿಂದು ಸಂಸ್ಕಾರ ಎಂದು ತಿಳಿಯುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸ ಸಂಗತಿ ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಮಾತನಾಡಿ, ಹಿರಿಯರ ಅನುಭವ ಹುಡುಕಾಡುತ್ತ ಹೋದರೆ ಯಾವ ಗ್ರಂಥಾಲಯದಲ್ಲೂ ಸಿಗಲ್ಲ. ಮನೆ ಹಾಗೂ ಸಮಾಜಕ್ಕೆ ಹಿರಿಯರ ಕೊಡುಗೆ ಅಪಾರವಾಗಿದೆ ಎಂದರು.

Advertisement

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಮಾತನಾಡಿ, ಎಲ್ಲರೂ ತಮ್ಮ ತಂದೆ-ತಾಯಂದಿರ ಸೇವೆ ಮಾಡಬೇಕು. ಇಂದಿನ ಸಮಾಜದಲ್ಲಿ ಹಿರಿಯ ಚೇತನರು ಸ್ವಾಭಿಮಾನ ಬದುಕು ಸಾಗಿಸುತ್ತಿದ್ದಾರೆ. ಅವರಿಗೆ ಅಗತ್ಯವಿರುವ ಸಹಾಯ-ಸಹಕಾರ ನೀಡಲು ತಾವು ಸದಾ ಸಿದ್ಧ ಎಂದು ಹೇಳಿದರು.

ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ, ರುದ್ರಾಕ್ಷಿಮಠದ ಡಾ| ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾಜಿ ಸಚಿವ ಎ.ಬಿ. ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ ಪಾಟೀಲ, ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಪ್ರಸಾದ ಹಿರೇಮಠ, ಸಂಸ್ಥಾಪಕ ಅಧ್ಯಕ್ಷ ಪ್ರಭಾಕರ ಕುಲಕರ್ಣಿ ಇತರರಿದ್ದರು. ಜಯಜಗದೀಶ್ವರಿ ಮಹಿಳಾ ಮಂಡಳದವರು ಪ್ರಾರ್ಥನೆ ನಡೆಸಿದರು. ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸುಮಿತ್ರಾ ಹಿರೇಮಠ ಸ್ವಾಗತ ಗೀತೆ ಹಾಡಿದರು.

ಡಾ|ಗುರುದೇವಿ ಹುಲ್ಲೆಪ್ಪನವಮಠ ಸ್ವಾಗತಿಸಿದರು. ಹಿರಿಯ ನಾಗರಿಕರ ಸಂಘದ ರಾಜ್ಯಾಧ್ಯಕ್ಷ ಎ.ವೈ. ಬೆಂಡಿಗೇರಿ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಡಾ| ಬಸವರಾಜ ಗೋಮಾಡಿ ವಂದಿಸಿದರು. ಅಶೋಕ ಮಳಗಲಿ, ಶ್ರೀಕಾಂತ ಶಾನವಾಡ ನಿರೂಪಿಸಿದರು. ಡಾ| ಬಸಲಿಂಗಯ್ಯ ಹಿರೇಮಠ ಅವರಿಂದ ಜಾನಪದ ಗೀತೆಗಳ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next