ಜೇವರ್ಗಿ: ಪಟ್ಟಣದಲ್ಲಿರುವ ಮುಖ್ಯ ನಾಲಾಗೆ ಇಂಟರ್ ಸೆಪ್ಷನ್ ಮತ್ತು ಡೈರ್ವರ್ಶನ್ ವ್ಯವಸ್ಥೆ ಕಲ್ಪಿಸುವ ಮೂಲಕ ಮಲೀನ ನೀರನ್ನು ಶುದ್ಧೀಕರಿಸುವ ಕಾಮಗಾರಿಗೆ ರಾಜ್ಯ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ 16.43ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಡಾ| ಅಜಯಸಿಂಗ್ ಹೇಳಿದರು.
ಶನಿವಾರ ಪಟ್ಟಣದ ರಿಲಾಯನ್ಸ್ ಪೆಟ್ರೋಲ್ ಬಂಕ್ ಹತ್ತಿರ ನಿರ್ಮಿಸುತ್ತಿರುವ 5.83 ದಶಲಕ್ಷ ಲೀಟರ್ ನೀರು ಸಾಮರ್ಥ್ಯದ ಮಲೀನ ನೀರನ್ನು ಶುದ್ಧೀಕರಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, 11 ತಿಂಗಳ ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದಲ್ಲಿ ಒಳ ಚರಂಡಿ ಸಮಸ್ಯೆಯಿದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ನಾಲಾಗಳನ್ನು ದುರಸ್ತಿಗೊಳಿಸಬೇಕು. 1.5 ಎಕರೆ ಜಮೀನಿನಲ್ಲಿ ಕಾಮಗಾರಿ ನಿರ್ವಹಿಸಲಾಗುವುದು ಎಂದರು.
ಶುದ್ಧೀಕರಣ ಯೊಜನೆ ಕಾಮಗಾರಿಯನ್ನು ಬೀದರನ ಜೆ.ಎಂ. ಕನಸಟ್ರಕ್ಷನ್ ಕಂಪೆನಿಗೆ ವಹಿಸಲಾಗಿದೆ. ಮಲೀನ ನೀರು ಶುದ್ಧೀರಣ ಘಟಕದ ಹತ್ತಿರ ಸಿಸಿ ರಸ್ತೆ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅಗತ್ಯ ಅನುದಾನ ಬಿಡುಗಡೆಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.
2011ರ ಜನಗಣತಿಯಂತೆ ಪಟ್ಟಣದಲ್ಲಿ 25,686 ಜನಸಂಖ್ಯೆ ಹೊಂದಿದೆ. ಜನಸಂಖ್ಯೆಗೆ ಅನುಗುಣವಾಗಿ ಪಟ್ಟಣದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುವುದು. ಪುರಸಭೆ ವ್ಯಾಪ್ತಿಯಲ್ಲಿ ಹರಿಯುವ ನಾಲಾಗಳ ನೀರನ್ನು ಶುದ್ಧೀಕರಿಸಿದ ನಂತರ ಹಳ್ಳದ ಮುಖಾಂತರ ಭೀಮಾ ನದಿಗೆ ಸೇರಿಸಲಾಗುವುದು. ಮಲೀನ ನೀರು ಸಂಸ್ಕರಣಾ ಘಟಕಕ್ಕೆ ರಸ್ತೆ ನಿರ್ಮಾಣ, ಸುತ್ತುಗೋಡೆ ಹಾಗೂ ಬೇಲಿ ಅಳವಡಿಸುವ ಕಾಮಗಾರಿ ಪೂರ್ಣಗೊಳಿಸಲಾಗುವುದು. ನಂತರ ಐದು ವರ್ಷದ ಅವಧಿಗೆ ಕಾಮಗಾರಿಯ ನಿರ್ವಹಣೆ ಮತ್ತು ದುರಸ್ತಿಯನ್ನು ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ಅಧಿಕಾರಿಗಳು ನಿರ್ವಹಣೆ ಮಾಡಬೇಕು ಎಂದು ಹೇಳಿದರು.
ಜೇವರ್ಗಿ ಪುರಸಭೆ ಅಧ್ಯಕ್ಷೆ ಶರಣಮ್ಮ ಸಾಯಬಣ್ಣ ತಳವಾರ, ಉಪಾಧ್ಯಕ್ಷ ಗುರುಶಾಂತಯ್ಯ ಹಿರೇಮಠ, ಮುಖ್ಯಾಧಿಕಾರಿ ಶರಣಯ್ಯ ಹಿರೇಮಠ, ನಗರ ನೀರು ಸರಬುರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದಿಲೀಪಸಿಂಗ್, ಸಹಾಯಕ ಎಂಜಿನಿಯರ್ ಸಂಜುಕುಮಾರ, ಜಿ.ಪಂ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ, ರಾಜಶೇಖರ ಸೀರಿ, ಷಣ್ಮುಖಪ್ಪ ಹಿರೇಗೌಡ, ರಹಿಮಾನ್ ಪಟೇಲ್, ಶಿವಕುಮಾರ ಕಲ್ಲಾ, ಮರೆಪ್ಪ ಸರಡಗಿ, ನೀಲಕಂಠ ಅವಂಟಿ, ಮಹಿಮೂದ್ ನೂರಿ, ಸಲಿಂ ಕಣ್ಣಿ, ಶ್ರೀಮಂತ ಧನಕರ್, ರಾಜಶೇಖರ ಶಿಲ್ಪಿ, ರವಿ ಕೋಳಕೂರ, ಬಸಣ್ಣ ಸರ್ಕಾರ, ಮಲ್ಲಮ್ಮ ಕೊಬ್ಬಿನ್ ಹಾಗೂ ಪಟ್ಟಣದ ನಾಗರಿಕರು ಪಾಲ್ಗೊಂಡಿದ್ದರು.