ಭಟ್ಕಳ: ಪುರಸಭಾ ವ್ಯಾಪ್ತಿಯ ನಗರೋತ್ಥಾನ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಕೆಲ ಸಣ್ಣಪುಟ್ಟ ಅಧ್ವಾನಗಳನ್ನು ಬಿಟ್ಟರೆ ಉಳಿದಂತೆ ಕಾಮಗಾರಿ ಉತ್ತಮವಾಗಿದೆ ಎನ್ನಲಾಗುತ್ತಿದೆ.
ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ ಒಟ್ಟೂ 637.50 ಲಕ್ಷದ ಕಾಮಗಾರಿಗೆ ಮೂರನೇ ಹಂತದ ನಗರೋತ್ಥಾನ ಯೋಜನೆಯಲ್ಲಿ ಕ್ರಿಯಾಯೋಜನೆ ತಯಾರಿದ್ದು ಮೂರನೇ ಹಂತದ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಯೋಜನೆಯಡಿ 90.48 ಲಕ್ಷದ ಕುಡಿಯುವ ನೀರಿನ ಕಾಮಗಾರಿಗೆ ಕ್ರಿಯಾಯೋಜನೆ ಮಾಡಿದ್ದು ಕಡವಿನಕಟ್ಟಾ ಪಂಪ್‌ಹೌಸ್‌ನಲ್ಲಿ 120 ಎಚ್.ಪಿ. ಸಾಮರ್ಥ್ಯದ ಹೊಸ ಪಂಪ್, ಮೋಟಾರ್, ಪ್ಯಾನಲ್ ಬೋರ್ಡ್ ಅಳವಡಿಕೆ, ಗೌಸಿಯಾ ಸ್ಟ್ರೀಟ್ ಒಳಚರಂಡಿ ಘಟಕದಲ್ಲಿ ಹೊಸ ಪಂಪ್ ಅಳವಡಿಸುವುದು, ಹಳೆಯ ನೀರು ಸರಬರಾಜು ಶುದ್ಧೀಕರಣ ಘಟಕದಲ್ಲಿ ಜಿಎಲ್ ಎಸ್‌ಆರ್ ದುರಸ್ತಿ ಮತ್ತು ಗೌಸಿಯಾ ಸ್ಟ್ರೀಟ್ ಭರಣಿಮಟ್ಟಿಯಲ್ಲಿ ಒಎಚ್‌ಟಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.
ಪರಿಶಿಷ್ಟ ಜಾತಿ (ಎಸ್‌ಸಿಪಿ) ಅನುದಾನ ಕಾಮಗಾರಿಗಳಲ್ಲಿ ಒಟ್ಟೂ 100.33 ಲಕ್ಷದ ಕಾಮಗಾರಿಗೆ ಕ್ರಿಯಾಯೋಜನೆ ಮಾಡಿದ್ದು ಪಜಾ ಜನರ ಕಾಳಿಕಾಭವಾನಿ ದೇವಸ್ಥಾನದ ರಸ್ತೆ ಅಭಿವೃದ್ಧಿ ಮತ್ತು ಪರಿಶಿಷ್ಟ ಜಾತಿಯ ಜನರು ವಾಸಿಸುವ ಪೌರ ಕಾರ್ಮಿಕರ ಕಾಲೋನಿಯಲ್ಲಿ ಹೊಸ ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ರಸ್ತೆಗೆ ಬದಿಗೋಡೆ ನಿರ್ಮಾಣ ಕಾಮಗಾರಿ ಮಾತ್ರ ಬಾಕಿ ಇದೆ.
ಪರಿಶಿಷ್ಟ ಪಂಗಡದ (ಟಿಎಸ್‌ಪಿ) ಅನುದಾನದ ಕಾಮಗಾರಿಗಳಲ್ಲಿ ಒಟ್ಟೂ 44.31 ಲಕ್ಷದ ಕಾಗಾರಿಗೆ ಕ್ರಿಯಾಯೋಜನೆ ಮಾಡಿದ್ದು ಗೊಂಡರಕೇರಿಯಿಂದ ಜಾಲಿ ಕ್ರಾಸ್‌ವರೆಗೆ ರಸ್ತೆ ಅಭಿವೃದ್ಧಿ, ಗೊಂಡರ ಕೇರಿ ರಸ್ತೆ ಗಟಾರ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಉಳಿದಂತೆ ಕಾಮಗಾರಿಗಳು ಹೆಚ್ಚಿನವು ರಸ್ತೆ ಡಾಂಬರೀಕರಣ, ಸಿಮೆಂಟ್ ರಸ್ತೆಗಳಾಗಿದ್ದು ಬಾಕಿ ಇರುವ ಕಾಮಗಾರಿಗಳಲ್ಲಿ ಮಣ್ಕುಳಿ ರಸ್ತೆಯಲ್ಲಿ 2 ಕಲ್ವರ್ಟ್ ನಿರ್ಮಾಣ, ಮಗ್ಧಂ ಕಾಲೋನಿ ಸಫಾ ಸ್ಟ್ರೀಟ್ ರಸ್ತೆ ಬದಿಯಲ್ಲಿ ಗೋಡೆ ನಿರ್ಮಾಣ, ಕಿದ್ವಾಯಿ ಅಡ್ಡರಸ್ತೆ ಇಂಟರ್‌ಲಾಕ್ ಅಳವಡಿಕೆ, ನೆಹರೂ ರಸ್ತೆ ಹೆಣ್ಣು ಮಕ್ಕಳ ಶಾಲೆಯ ಹಿಂದುಗಡೆ ಅಂಗನವಾಡಿಗೆ ಹೋಗುವ ರಸ್ತೆ ಇಂಟರ್ ಲಾಕ್ ಅಳವಡಿಕೆ, ಮುಸ್ಮಾ ಸ್ಟ್ರೀಟ್ ಕಾಂಕ್ರೀಟ್ ರಸ್ತೆ ನಿರ್ಮಾಣ, ಗೌಸಿಯಾ ಸ್ಟ್ರೀಟ್ ಕಾಂಕ್ರೀಟ್ ರಸ್ತೆ ನಿರ್ಮಾಣ, ಡಾರಂಟಾ ಹೊಳೆಗೆ ಬ್ರಿಡ್ಜ್ ಮತ್ತು ಪಿಚ್ಚಿಂಗ್ ನಿರ್ಮಾಣ, ಮಣ್ಕುಳಿ ರಸ್ತೆಯಲ್ಲಿ 2 ಕಲ್‌ವರ್ಟ ನಿರ್ಮಾಣ, ಡಾರಂಟಾ ಹೊಳೆಗೆ ಬ್ರಿಡ್ಜ್ ಮತ್ತು ಪಿಚ್ಚಿಂಗ್ ನಿರ್ಮಾಣ, ಸೆಂಟ್ರಲ್ ಲಾಡ್ಜ್ನಿಂದ ಪಟ್ಟಾ ಹಳ್ಳದವರೆಗೆ ಗಟಾರ ನಿರ್ಮಾಣ ಬಾರಾ ಬಲ್ಡಿಂಗ್ ಬಳಿಯ ರಸ್ತೆ, ಬಂದರ ಮುಖ್ಯ ರಸ್ತೆವರೆಗೆ ಗಟಾರ ನಿರ್ಮಾಣ ಮಾತ್ರ ಬಾಕಿ ಉಳಿದಿದ್ದು ಇವುಗಳನ್ನು ಶೀಘ್ರ ಪೂರ್ಣಗೊಳಿಸಬೇಕಾಗಿದೆ.
-ಆರ್ಕೆ, ಭಟ್ಕಳ