ಸುಬ್ರಹ್ಮಣ್ಯ: ಊರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಹಿರಿಯರ ಅಪೇಕ್ಷೆಯಂತೆ ಶಾಲೆಗಳನ್ನು ಆರಂಭಿಸಲಾಗಿದೆ. ಕ್ರಮೇಣ ಅವುಗಳಿಗೆ ಸರಕಾರದಿಂದ ಮಂಜೂರಾತಿ ದೊರೆತಿದೆ. ಇದೀಗ ಹಿರಿಯರು ಆರಂಭಿಸಿದ ಶಾಲೆಗಳನ್ನು ವಿವಿಧ ಅನುದಾನಗಳ ಮೂಲಕ ಅಭಿವೃದ್ಧಿಗೆ ಸರಕಾರ ಪೂರಕ ಕ್ರಮ ಕೈಗೊಂಡಿದೆ ಎಂದು ಸಚಿವ ಎಸ್. ಅಂಗಾರ ಹೇಳಿದರು.
ಅವರು ಕಡಬ ತಾಲೂಕಿನ ಕಡ್ಯ ಕೊಣಾಜೆ ಗ್ರಾಮದ ಕೊಣಾಜೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಕೊಠಡಿಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಮಾತನಾಡಿ, ಮುಂದಿನ ವರ್ಷಕ್ಕೆ ಬೇಕಾಗಿರುವ ಪಠ್ಯ ಪುಸ್ತಕಗಳ ಸರಬರಾಜು ಈಗಾಗಲೇ ಆರಂಭಗೊಂಡಿದೆ. ಎ. 1ರಿಂದ ಮಕ್ಕಳ ದಾಖಲಾತಿ ಆರಂಭವಾಗಲಿದೆ. ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರು ಮುಂದಾಗಬೇಕು ಎಂದ ಅವರು ಪುತ್ತೂರು- ಕಡಬ ತಾಲೂಕಿನಲ್ಲಿ ದುರಸ್ತಿಗಾಗಿ ಶಾಲೆಗಳ ಪಟ್ಟಿ ಮಾಡಲಾಗಿದೆ ಎಂದರು.
ಕಡ್ಯ ಕೊಣಾಜೆ ಗ್ರಾ.ಪಂ. ಅಧ್ಯಕ್ಷ ಶಿವಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷೆ ರುಕ್ಮಿಣಿ, ಸದಸ್ಯರಾದ ವನೀನ ಮನೆ ಜಾಲು, ಮೈತ್ರಿ ಜಿ., ಸರೋಜಿನಿ, ವಿದ್ಯಾರ್ಥಿ ನಾಯಕಿ ಪಿ.ವೀಣ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ರಾಮಕೃಷ್ಣ ಕೆ. ಸ್ವಾಗತಿಸಿದರು. ಸಿಆರ್‌ಪಿ ಕುಮಾರ್ ವಂದಿಸಿದರು. ಶಿಕ್ಷಕಿ ಪುಷ್ಪಾವತಿ ವರದಿ ವಾಚಿಸಿದರು. ಸಚಿವರು, ಶಿಕ್ಷಣಾಧಿಕಾರಿ ಸಹಿತ ಹಲವರನ್ನು ಗೌರವಿಸಲಾಯಿತು. ಶಾಲೆಗೆ ಕೊಡುಗೆ ಹಸ್ತಾಂತರ, ದತ್ತನಿಧಿ ಮೊತ್ತ ವಿತರಣೆ ಮಾಡಲಾಯಿತು.
ಇಲಾಖೆಗಳ ಸುಧಾರಣೆ
ಸರಕಾರಿ ಶಾಲೆಗಳನ್ನು ಉಳಿಸುವ ದೃಷ್ಟಿಯಿಂದ ಹಲವಾರು ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ ಸರಕಾರಿ ಶಾಲೆಗಳಿಗೂ ಹೆಚ್ಚಿನ ಮಕ್ಕಳು ಸೇರ್ಪಡೆಗೊಳ್ಳುವಂತೆ ಮಾಡಲಾಗಿದೆ. ಇಲಾಖೆಗಳಲ್ಲಿ ಸುಧಾರಣೆಗೆ ಕ್ರಮ ಕೈಗೊಂಡಿರುವ ಸರಕಾರ ಯೋಜನೆಗಳನ್ನು ಜನಸಾಮಾನ್ಯರ ಮನೆಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ ಎಂದ ಎಸ್.ಅಂಗಾರ ನಮ್ಮಲ್ಲಿರುವ ಋಣ ಸಂದಾಯ ಭಾವನೆಗಳಿಂದ ಪರಿವರ್ತನೆ ಸಾಧ್ಯ ಎಂದು ಹೇಳಿದರು.