ಬೇಲೂರು: ತಾಲೂಕಿನ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರ ಮಂಜೂರು ಮಾಡಿದ್ದ 120 ಕೋಟಿ ರೂ. ಅನುದಾನವನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿದ್ದು ಇದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಹಲವಾರು ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು.
ಪುರಸಭೆ ಸಭಾಂಗಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರವಾಸಿ ಕೇಂದ್ರವಾದ ಬೇಲೂರು ಪಟ್ಟಣದ ಅಭಿವೃದ್ಧಿಗೆ ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ 8 ಕೋಟಿ ರೂ. ಬಿಡುಗಡೆ ಮಾಡಿದ್ದರು. ತಾಲೂಕಿನ ವಿವಿಧ ಅಭಿವೃದ್ಧಿಗೆ 120 ಕೋಟಿ ರೂ. ಅನುದಾನ ಬಿಡುಗಡೆ ಗೊಂಡಿತ್ತು. ಆದರೆ ಬಿಜೆಪಿ ನೇತೃತ್ವದ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲೆಗೆ ಬಿಡುಗಡೆಯಾದ ಎಲ್ಲಾ ಅನುದಾನ ತಡೆಹಿಡಿದಿದ್ದು ಮುಖ್ಯಮಂತ್ರಿಗಳಲ್ಲಿ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿಗೆ ಸಹಕರಿಸಲು ಮನವಿ ಮಾಡಲಾಗುವುದು ಎಂದರು.
ಪೌರ ಕಾರ್ಮಿಕರ ಪರಿಶ್ರಮ: ಪಟ್ಟಣದ ಸ್ವಚ್ಛತೆ ಗೆ ಪೌರಕಾರ್ಮಿಕರು ಶ್ರಮಪಡುತ್ತಿದ್ದು ಪ್ರವಾಸಿ ಕೇಂದ್ರದಲ್ಲಿ ದಿನ ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಿದ್ದು, ದೇವಾಲಯ ಸುತ್ತಾ ಸೇರಿದಂತೆ ಪಟ್ಟಣದ ಸ್ವತ್ಛತೆಗೆ ಅಧ್ಯತೆ ನೀಡಿರುವ ಪೌರಕಾರ್ಮಿಕರಿಗೆ ನಿವೇಶನ ಮತ್ತು ಕಾಯಂ ಆಗದ ನೌಕರರಿಗೆ ಕಾಯಂ ಮಾಡುವ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಪೌರ ಕಾರ್ಮಿಕರಿಗೆ ಸೌಲಭ್ಯ ನೀಡಿ: ಪುರಸಭೆ ಮಾಜಿ ಅಧ್ಯಕ್ಷ ಶಾಂತಕುಮಾರ್ ಮಾತನಾಡಿ, ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಪಟ್ಟಣದ 23 ಸಾವಿರ ಜನರ ಆರೋಗ್ಯ ಕಾಪಾಡಲು ಮುಂದಾಗುತ್ತಾರೆ. ಅದರೆ ಅವರಿಗೆ ಸೌಲಭ್ಯ ನೀಡುವಲ್ಲಿ ಸರ್ಕಾರ ಮುಂದಾಗಬೇಕು ಎಂದರಲ್ಲದೇ ಸರ್ಕಾರ 750 ಜನರಿಗೆ ಒಬ್ಬ ಪೌರನೌಕರರನ್ನು ನೇಮಕ ಮಾಡಿದೆ. ಅದರೆ ಪ್ರವಾಸಿ ಕೇಂದ್ರವಾದ ಬೇಲೂರಿಗೆ ಹೆಚ್ಚಿನ ನೌಕರರ ಅಗತ್ಯವಿದ್ದು, ಶಾಸಕರು ಈ ಬಗ್ಗೆ ಚಿಂತನೆ ಮಾಡುವಂತೆ ಅವರು ಒತ್ತಾಯಿಸಿದರು.
ಭರವಸೆ ಈಡೇರಿಲ್ಲ: ಮಾಜಿ ಅಧ್ಯಕ್ಷ ಟಿ.ಎ. ಶ್ರೀನಿಧಿ ಮಾತನಾಡಿ, ಕಳೆದ ನಮ್ಮ ಆಡಳಿತಲ್ಲಿ ಪೌರ ಕಾರ್ಮಿಕರಿಗೆ ನೀಡಿರುವ ಭರವಸೆ ಯನ್ನು ಈಡೇರಿಸಲಾಗಿಲ್ಲ. ಬಹು ಮುಖ್ಯ ವಾಗಿ ಮನೆ ಹಕ್ಕು ಪತ್ರ, ನಿವೇಶನಗಳನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದು, ಇವು ಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ ಶಾಸಕರು ಈ ಬಗ್ಗೆ ಗಮನಹರಿಸಿ ಪೌರ ಕಾರ್ಮಿಕರಿಗೆ ಸೌಲತ್ತು ನೀಡುವಂತೆ ಮನವಿ ಮಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಬಿ.ಗಿರೀಶ್ ಮಾತನಾಡಿ, ಬೇಲೂರು ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ಪಟ್ಟಣದ ಜನತೆಗೆ ಮೂಲ ಸೌಕರ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಕಳೆದ 20 ವರ್ಷಗಳಿಂದ ಬಡವರಿಗೆ ನಿವೇಶವ ಹಂಚಿಲ್ಲ. ಹಾಸನ ರಸ್ತೆಯಲ್ಲಿ ಸುಮಾರು 4.5 ಏಕರೆ ಸರ್ಕಾರಿ ಜಮೀನು ಗುರುತಿಸಿದ್ದು ಶಾಸಕರು ಸರ್ಕಾರದಿಂದ ಜಾಗ ಮಂಜೂರು ಮಾಡಿಸಿ ಪಟ್ಟಣದ ಬಡ ಜನತೆಗೆ ನಿವೇಶನ ವಿತರಿಸಲು ಕ್ರಮ ಕೈಗೊಳ್ಳವಂತೆ ತಿಳಿಸಿದರು. ಸಮಾರಂಭದಲ್ಲಿ ಮುಖ್ಯಾಧಿಕಾರಿ ಎಸ್. ಎಸ್.ಮಂಜುನಾಥ್, ಪರಿಸರ ಎಂಜಿನಿಯರ್ ಮಧುಸೂದನ್, ಅಧಿಕಾರಿ ಮಂಜೇಗೌಡ, ಮೊದಲಾದವರು ಇದ್ದರು