ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಳೆದ 10 ವರ್ಷದಲ್ಲಿ ಬಿಡುಗಡೆಯಾದ ಅನುದಾನ, ಹಂಚಿಕೆ, ಕೈಗೊಂಡಿರುವ ಕಾಮಗಾರಿಗಳ ಸಮಗ್ರ ಮಾಹಿತಿಯುಳ್ಳ ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಜೆ. ಅಮಾನುಲ್ಲಾಖಾನ್ ಒತ್ತಾಯಿಸಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಪ್ರಥಮ ಅವಧಿಯಲ್ಲಿ ಬಿಜೆಪಿ, 2ನೇ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಿರುವ ಅವಧಿಯಲ್ಲಿ ಬಿಡುಗಡೆಯಾದ ಅನುದಾನ, ವಾರ್ಡ್‌ವಾರು ಹಂಚಿಕೆ ಕುರಿತು ಅಧಿಕೃತ ದಾಖಲೆಯ ಶ್ವೇತಪತ್ರ ವನ್ನು ದಾವಣಗೆರೆ ಜನರ ಮುಂದಿಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ(ಎಂ.ಜಿ.ಎನ್.ವಿ.ವೈ)ಯಡಿ ಸಮಾನವಾಗಿ ಅನುದಾನ ನಿಗದಿ ಪಡಿಸಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡಿದರೆ. ಎಲ್ಲಾ ಅನುದಾನವನ್ನ ಸರಿಯಾಗಿ ಹಂಚಿಕೆ ಮಾಡಲಾಗಿದೆ ಎಂದು ಬಿಜೆಪಿ ಪ್ರತಿಪಾದಿಸುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಕೂಡಿಕೊಂಡು ದಾವಣಗೆರೆ ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನೀ ಅತ್ತಂಗೆ ಮಾಡು..ನಾ ಸತ್ತಂಗೆ ಮಾಡ್ತೇನೆ… ಅನ್ನುವ ರೀತಿ ಆರೋಪ- ಪ್ರತ್ಯಾರೋಪ ಮಾಡುವ ಮೂಲಕ ಜನರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ 45 ವಾರ್ಡ್ ಗಳಿಗೆ ಯಾವ ರೀತಿ ಸಾಮಾಜಿಕ ನ್ಯಾಯದಡಿ ಅನುದಾನ ಹಂಚಿಕೆ ಮಾಡಲಾಗಿತ್ತು. ಅಭಿವೃದ್ಧಿ ಕೆಲಸ ಮಾಡಿದೆ ಎಂಬುದು ಜನರಿಗೆ ಗೊತ್ತಿದೆ. ದಾವಣಗೆರೆ ದಕ್ಷಿಣ ಭಾಗದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಬಿಡುಗಡೆಯಾಗಿದ್ದಂಯಹ 380 ಕೋಟಿ ಅನುದಾನದ ಕಾಮಗಾರಿಗಳನ್ನು ತಿರುಚಿ, ಉತ್ತರ ಭಾಗಕ್ಕೆ ತೆಗೆದುಕೊಂಡಾಗ ಕಾಂಗ್ರೆಸ್‌ನವರಿಗೆ ಸಾಮಾಜಿಕ ನ್ಯಾಯದ ಅರಿವು ಗೊತ್ತಾಗಲಿಲ್ಲವೇ ಎಂದು ಪ್ರಶ್ನಿಸಿದರು.
ಮಹಾನಗರ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಷ್ಟು ಸದಸ್ಯರ ಬಲವಿದ್ದರೂ ಬಿಜೆಪಿಗೆ ಅನಾಯಾಸವಾಗಿ ಅಧಿಕಾರ ಬಿಟ್ಟುಕೊಟ್ಟಂತಹ ಕಾಂಗ್ರೆಸ್‌ನವರು ಈಗ ಮೇಯರ್ ವಿರುದ್ಧವೇ ಮಾತನಾಡುತ್ತಿದ್ದಾರೆ. ಮೇಯರ್ ಅವರು ಮಾತೃಪಕ್ಷಕ್ಕಿಂತಲೂ ಹೆಚ್ಚಿನದ್ದಾಗಿ ಕಾಂಗ್ರೆಸ್‌ನವರಿಂದಲೇ ಸನ್ಮಾನ, ಊಟೋಪಚಾರ ಸ್ವೀಕರಿಸಿರುವುದನ್ನು ನೋಡಿದರೆ ಕಾಂಗ್ರೆಸ್‌ನವರ ಮೇಲೆಯೇ ಅನುಮಾನ ಮೂಡುತ್ತದೆ. ಕಾಂಗ್ರೆಸ್ ಮತ್ತು ಬಿಜೆಪಿಯವರು ಒಂದಾಗಿ ದಾವಣಗೆರೆ ಅಭಿವೃದ್ಧಿಯತ್ತ ಗಮನ ನೀಡಬೇಕು. ಜ್ವಲಂತ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಅಶೋಕ ಚಿತ್ರಮಂದಿರ ರೈಲ್ವೆ ಗೇಟ್‌ಗೆ ಕಂಡುಕೊಂಡಿರುವ ಪರಿಹಾರ ಶಾಶ್ವತವಾದುದಲ್ಲ. ಸಮಸ್ಯೆ ಇನ್ನೂ ಹೆಚ್ಚಾಗಲಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ನಿಲ್ಲಿಸಿ, ಅಲ್ಲಿಂದಲೇ ಕೆ.ಆರ್. ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಮೇಲ್ಸೇತುವೆ ನಿರ್ಮಾಣ ಮಾಡಬೇಕು. ರಿಂಗ್ ರಸ್ತೆಯಲ್ಲಿನ ಹೆಗಡೆ ನಗರದ ನಿವಾಸಿಗಳಿಗೆ ಆಶ್ರಯ ಸಮಿತಿ ವ್ಯಾಪ್ತಿಯಲ್ಲಿರುವ ಜಾಗಕ್ಕೆ ಸ್ಥಳಾಂತರಿಸಿ, ರಿಂಗ್ ರಸ್ತೆ ಅಭಿವೃದ್ಧಿಪಡಿಸುವ ಮೂಲಕ ನಿಜವಾಗಿಯೂ ಜನರ ಪರ ಕಾಳಜಿ ಇದೆ ಎಂಬುದನ್ನು ಸಾಬೀತುಪಡಿಸಬೇಕು ಎಂದು ಸವಾಲು ಹಾಕಿದರು.
ಪ್ರಧಾನ ಕಾರ್ಯದರ್ಶಿ ಖಾದರ್ ಬಾಷಾ, ಯು.ಎಂ. ಮನ್ಸೂರ್ ಅಲಿ, ಕೆ ದಾದಾಪೀರ್, ಅಬ್ದುಲ್ ಘನಿ, ಸುಲೇಮಾನ್ ಸುದ್ದಿಗೋಷ್ಠಿಯಲ್ಲಿದ್ದರು.