“ಈ ಸಿನಿಮಾವನ್ನು ಕುಟುಂಬ ಸಮೇತರಾಗಿ ನೋಡಬೇಕು. ದಯವಿಟ್ಟು ಒಂದು ಒಳ್ಳೆಯ ಸಿನಿಮಾವನ್ನು ಮಿಸ್ ಮಾಡಿಕೊಳ್ಳಬೇಡಿ’
– ನಿರ್ದೇಶಕ ನಾಗರಾಜ್ ಪೀಣ್ಯ ಈ ಮಾತನ್ನು ಪದೇ ಪದೇ ಹೇಳುತ್ತಿದ್ದರು. ಅವರ ಮಾತಿಗೆ ವೇದಿಕೆಯಾಗಿದ್ದು “ಭೂತಯ್ಯನ ಮೊಮ್ಮಗ ಅಯ್ಯು’ ಚಿತ್ರ. ಇದು ನಾಗರಾಜ್ ನಿರ್ದೇಶನದ ಮೂರನೇ ಚಿತ್ರ. ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಚಿಕ್ಕಣ್ಣ ಈ ಚಿತ್ರದ ನಾಯಕ. ಸಹಜವಾಗಿಯೇ ಇದು ಕೇವಲ ಕಾಮಿಡಿ ಪ್ರಿಯರಿಗೆ ಸಿನಿಮಾ ಎಂಬ ಭಾವನೆ ಜನರಲ್ಲಿ ಮೂಡಬಹುದೆಂಬ ಕಾರಣಕ್ಕೋ ಏನೋ ನಾಗರಾಜ್ ಪೀಣ್ಯ, ಇದೊಂದು ಫ್ಯಾಮಿಲಿ ಸಿನಿಮಾ ಎಂದು ಹೇಳುತ್ತಿದ್ದರು.
ಸಿನಿಮಾದಿಂದ ಸಿನಿಮಾಕ್ಕೆ ಬೇರೆ ಬೇರೆ ಜಾನರ್‌ಗಳನ್ನು ಪ್ರಯತ್ನಿಸಬೇಕೆಂಬ ಕಾರಣಕ್ಕೆ ಮೂರು ಸಿನಿಮಾಗಳಲ್ಲೂ ಹೊಸ ಕಥೆಯನ್ನು ಹೇಳಿದ್ದಾಗಿ ಹೇಳಿಕೊಂಡರು. “ಭೂತಯ್ಯನ ಮಗ ಅಯ್ಯು’ ಸಿನಿಮಾದ ವಿಶೇಷತೆ ಏನೆಂದರೆ ಸಾವಿನ ಮನೆಯಲ್ಲಿ ನಗು ತರಿಸೋದು! ಸಾವಿನ ಮನೆಯಲ್ಲಿ ನಗುನಾ ಎಂದು ಕೇಳಬಹುದು. ಆದರೆ ನಾಗರಾಜ್ ಪೀಣ್ಯ ಯಾರ ಮನಸ್ಸಿಗೂ ನೋವಾಗದ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರಂತೆ. “ಪ್ರತಿ ಸಾವಿನ ಮನೆಯಲ್ಲೂ ಗೊತ್ತಿಲ್ಲದಂತೆ ಒಂದು ಹಾಸ್ಯ ಇರುತ್ತದೆ. ಅಂತಹ ಅಂಶಗಳನ್ನಿಟ್ಟುಕೊಂಡು ಕಥೆ ಮಾಡಿದ್ದೇನೆ. ಸಾವಿನ ಮನೆಗಳಿಗೂ ಭೇಟಿ ಕೊಟ್ಟು, ಅಲ್ಲಿನ ಸನ್ನಿವೇಶಗಳನ್ನು ನೋಡಿದ್ದೇನೆ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ. ಚಿತ್ರದ ರೀರೆಕಾರ್ಡಿಂಗ್ ಯಾವ ತರಹ ಇರಬೇಕೆಂಬುದಕ್ಕೆ 40 ದಿನ ತಲೆಕೆಡಿಸಿಕೊಂಡಿದ್ದಾಗಿಯೂ ಹೇಳಿಕೊಂಡರು ಪೀಣ್ಯ. ಇನ್ನು ಈ ಚಿತ್ರ ಮಕ್ಕಳಿಗೂ ತುಂಬಾ ಇಷ್ಟವಾಗುತ್ತದೆ ಎಂಬ ವಿಶ್ವಾಸ ಅವರಿಗಿದೆ. ಮಕ್ಕಳ ಬಾಲ್ಯದ ತುಂಟಾಟಗಳನ್ನು ಮಜವಾಗಿ ತೋರಿಸಿದ್ದಾರಂತೆ. ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದರ ದಂಡೇ ಇದೆ. ಚಿಕ್ಕಣ್ಣ, ಹೊನ್ನವಳ್ಳಿ ಕೃಷ್ಣ, ಬುಲೆಟ್ ಪ್ರಕಾಶ್, ತಬಲಾನಾಣಿ, ಶ್ರುತಿಹರಿಹರನ್, ಪ್ರಶಾಂತ್ ಸಿದ್ಧಿ, ಗಿರಿಜಾ ಲೋಕೇಶ್, ಕೀರ್ತಿರಾಜ್, ಉಮೇಶ್ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಏಳು ಮಂದಿ ಹಣ ತೊಡಗಿಸಿ ದ್ದಾರೆ. ವರಪ್ರಸಾದ್, ರವಿಶಂಕರ್, ಅನಿಲ್, ಸುನಿಲ್, ಹನುಮಂತ್‌ರಾಜು, ಹರೀಶ್, ವೆಂಕಟೇಶ್ ನಿರ್ಮಾಪಕರಾಗಿದ್ದಾರೆ ಎಂದು ಮಾಹಿತಿ ನೀಡಿದರು ನಾಗರಾಜ್. ಚಿತ್ರದಲ್ಲಿ ನಟಿಸಿದ ತಬಲಾ ನಾಣಿ ಕೂಡಾ ನಾಗರಾಜ್ ಪೀಣ್ಯ ಅವರ ಪ್ರತಿಭೆಯನ್ನು ಕೊಂಡಾಡಿದರು. ಚಿತ್ರದಲ್ಲಿ ನಾಣಿ, ನಾಯಕನ ಸೋದರ ಮಾವನಾಗಿ ಕಾಣಿಸಿ ಕೊಂಡಿದ್ದು, ಅಳಿಯನಿಗೆ ಹುಡುಗಿ ಹುಡುಕುವ ದೃಶ್ಯಗಳು ಪ್ರೇಕ್ಷಕರಿಗೆ ಖುಷಿಕೊಡುತ್ತವೆ ಎನ್ನಲು ಅವರು ಮರೆಯಲಿಲ್ಲ. ಅಂದಹಾಗೆ, ಚಿತ್ರವನ್ನು ವೆಂಕಟ್ ವಿತರಣೆ ಮಾಡುತ್ತಿದ್ದಾರೆ. ಇನ್ನು, ಚಿತ್ರದಲ್ಲಿನ ಒಂದೇ ಒಂದು ಹಾಡನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು. ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದೆ.