ಅದ್ಯಾಕೆ ಬೇಸಿಗೆ ಬಂದಾಗಲೇ ಅಜ್ಜನ ಮನೆಯೋ ಅಥವಾ ಅಜ್ಜಿಯ ಹಣ್ಣು ಹಣ್ಣು ಕೂದಲೋ ನೆನಪಾಗುತ್ತದೆ? ಅದ್ಯಾಕೆ ಯುಗಾದಿ ಬರುವಾಗ ಕಣ್ಣೊಳಗೆ ಹಬ್ಬವಾಗಿ ಮಾವಿನಹಣ್ಣು ಮಾತ್ರ ನೆನಪಾಗೋದಿಲ್ಲ, ಆ ಮಾವಿನ ಹಣ್ಣಿಗಿಂತಲೂ ಸಿಹಿಯಾಗಿ ಅಜ್ಜನ ನೆನಪೂ ಒತ್ತರಿಸಿ ಬರುತ್ತದಲ್ಲಾ ಯಾಕೆ? ಅಜ್ಜ ಅನ್ನೋ ತುಂಬು ತುಂಬು ಸಡಗರದಲ್ಲಿ, ಅಜ್ಜಿ ಅನ್ನೋ ಪ್ರೀತಿಯ ಆದ್ರì ಒರತೆಯಲ್ಲಿ, ಉಕ್ಕುತ್ತಲೇ, ರಸವಾಗುತ್ತಲೇ ಅಕ್ಷಯವಾಗುವ ಮಮತೆಯಲ್ಲಿ ಅಂತದ್ದೇನಿದೆ?! ಎಂದು ನನ್ನಂತೆಯೇ ಅಜ್ಜ ಅನ್ನೋ ನಿಗೂಢ ನಿಧಿಯನ್ನು ತಮ್ಮೊಳಗೆ ತುಂಬಿಕೊಂಡ ಯುವ ಮನಸ್ಸುಗಳು ಅಜ್ಜನ ನೆನಪಾದಾಗಲೆಲ್ಲಾ ಗುನುಗಿಕೊಳ್ಳುತ್ತಲೇ ಇರುತ್ತಾರೇನೋ ಅನ್ನಿಸುತ್ತದೆ. ಅಜ್ಜನ ಜೊತೆಗೆ ಅಜ್ಜಿ ಅನ್ನುವ ಸಿಹಿಹೋಳಿಗೆಯೂ, ಎಂದೂ ರುಚಿಗೆಟ್ಟು ಹೋಗದ ಉಪ್ಪಿಟ್ಟೂ ಬಂದುಬಿಡುತ್ತದೆ. ನೀವೂ ನನ್ನಂತೆ ಆಗಾಗ ಬೇಸಿಗೆ ರಜೆಗೆ ಅಜ್ಜನ ಮನೆಗೆ ಹೋಗಿ ಬಂದವರಾಗಿದ್ದರೆ, ಅಜ್ಜ ಅಜ್ಜಿಯ ಮುದಿತನದ ಕೈ ತುತ್ತಿನಲ್ಲಿ, ಸಿಹಿಯುಂಡವರಾಗಿದ್ದರೆ ಖಂಡಿತಾ ನಾನಿಲ್ಲಿ ಅಜ್ಜ ಅಜ್ಜಿ ಅಂತೆಲ್ಲಾ ಮಾತಾಡಿದಾಗ ನಿಮ್ಮಲ್ಲೂ ನಿಮ್ಮ ಅಜ್ಜನ ಕಣ್ಣುಗಳಲ್ಲಿನ ದೀವಟಿಗೆಯಂಥ ಅನನ್ಯ ಬೆಳಕು ಅರೆಕ್ಷಣ ಬಂದು ರಾಚೀತು. ನಾವಿನ್ನೂ ತರುಣರಾಗಿದ್ದರೂ, ನಾವು ಅನುಭವಿಸಿದಂತಹ ಬೇಸಿಗೆಯ ದಿನಗಳು ಮತ್ತು ಬಾಲ್ಯವನ್ನು ನಮಗಿಂತಲೂ ಕಿರಿಯರು ಅನುಭವಿಸುತ್ತಿಲ್ಲ ಅನ್ನಿಸುತ್ತದೆ. ನಮ್ಮ ಹಿರಿಯರು ಅನುಭವಿಸುತ್ತಿದ್ದಂತಹ ಬಾಲ್ಯವನ್ನೋ? ಯೌವ್ವನವನ್ನೋ? ನಾವು ಅನುಭವಿಸುತ್ತಿಲ್ಲ ಅನ್ನೋದೂ ನಿಜವೇ. ಆದರೂ ಆಗೆಲ್ಲಾ ಅಜ್ಜ ಅಜ್ಜಿ ಅನ್ನೋ ಜೀವಗಳಿಗಿರುತ್ತಿದ್ದ ಮರ್ಯಾದೆ, ಆ ಹೆಸರುಗಳನ್ನು ಬಾಯಲ್ಲಿಟ್ಟ ಕೂಡಲೇ ಉಕ್ಕುತ್ತಿದ್ದ ಅದಮ್ಯ ಉತ್ಸಾಹ, ಈಗಿನ ಮಕ್ಕಳಲಿಲ್ಲವೇನೋ ಅನ್ನಿಸಿ ಬೇಸರವೊಂದು ಆವರಿಸಿಕೊಳ್ಳುತ್ತದೆ. ನಿರಂತರ ಸಂಘರ್ಷದಿಂದಲೋ, ಸೆಣಸಾಟದಿಂದಲೋ, ಅಯ್ಯೋ ಆ ಮುದುಕನ ಹಂಗ್ಯಾಕೆ ಅನ್ನುವ ಅಸಡ್ಡೆಯಿಂದಲೋ? ಅಪ್ಪ ಅಮ್ಮನ ಜೊತೆಗೆ ಸಂಬಂಧ ಕಡಿದುಕೊಂಡು ಹಾಯಾಗಿರಬೇಕು ಅಂತ ಯಾವ್ಯಾವ ಊರಿನ ಪಾದಕ್ಕೋ ಸಲೀಸಾಗಿ ಸೇರಿಕೊಳ್ಳುತ್ತೇವೆ. ಮನಸ್ಸಾದರೆ ಮತ್ತೆ ತವರೂರಿಗೆ ಬಂದು ಮಕ್ಕಳನ್ನು ಅಜ್ಜ ಅಜ್ಜಿಗೆ, ಬೇಕೋ ಬೇಡವೋ ಅಂತ ತೋರಿಸಿ ನಿರುಮ್ಮಳರಾಗಿ ಬಿಡುತ್ತೇವೆ. ಪುಟ್ಟ ಮಕ್ಕಳ ಕಿರುಬೆರಳನ್ನೋ? ಕೆಂಚು ಕೆಂಚು ಹೆರಳನ್ನೋ ಖುಷಿಯಿಂದ ನೇವರಿಸುತ್ತ¤ ತಲ್ಲೀನರಾಗುವ ಅಜ್ಜಅಜ್ಜಿಯ ಪ್ರೀತಿಯ ಸ್ವತ್ಛಂದತೆ ನಮ್ಮಂತ ಮೂಢ ಮನಸ್ಸಿಗೆ ಅರ್ಥವಾಗುವುದು ನಾವು ಅವರಂತೆ ಮುದುಕರಾದಾಗಲೇ ಏನೋ ಗೊತ್ತಿಲ್ಲ. ಮಕ್ಕಳಿಗೆ ಅಜ್ಜನ ಮನೆಗೆ ಹೋಗಿ ಗಮ್ಮತ್ತು ಮಾಡೋಣ ಅಂತ ಆಸೆ ಇದ್ದರೂ ಸಮ್ಮರ್ ಕ್ಯಾಂಪ್ ಅನ್ನುವ ಕೃತಕ ಅಜ್ಜಿ ಅವರ ಕನಸುಗಳಿಗೆ ಕೊಳ್ಳಿ ಇಟ್ಟುಬಿಡುತ್ತಾಳೆ. ನೀವೇ ಯೋಚಿಸಿ, ನಿಮ್ಮ ಬಾಲ್ಯದ ಬೇಸಿಗೆ ಹೇಗಿತ್ತು? ಮಿಡಿ ಮಾವನ್ನು ಕೊಯ್ದು ಅದಕ್ಕೆ ಉಪ್ಪು ಹಾಕಿ ನೆಕ್ಕಿದ ಬೇಸಿಗೆ, ಸೀತಾಫಲದ ಮರವೇರಿ ಮರದÇÉೇ ಕೂತು ಸೀತಾಫಲ ತಿಂದ ಬೇಸಿಗೆ, ಗೇರು ಹಣ್ಣನ್ನು ಜ್ಯೂಸಿನಂತೆ ಹೀರಿ ಬಾಯಾರಿಸಿಕೊಳ್ಳುತ್ತಿದ್ದ ಬೇಸಿಗೆ, ಒಟ್ಟಾರೆ ಬೇಸಿಗೆ ಅಂದರೆ ಪ್ರಕೃತಿಯ ನಡುವೆ ಬೆರೆಯುತ್ತ ಮಾವು ಹೇಗೆ ಚಿಗುರುತ್ತದೆ? ಕೋಗಿಲೆ ಹೇಗೆ ಹಾಡುತ್ತದೆ? ನೀರೇ ಇಲ್ಲದೇ ನೆಲವೆಲ್ಲ ಹೇಗೆ ಬಿಸಿಯಾಗುತ್ತದೆ? ಒಂದು ತೊಟ್ಟಿಯಾಗಿ ಹಕ್ಕಿಗಳು ಹೇಗೆ ಕೂಗುತ್ತದೆ? ಅಂತೆಲ್ಲಾ ಅರ್ಥ ಮಾಡಿಸುವ ಪಾಠಶಾಲೆ. ಪ್ರಕೃತಿ ಕೊಡುವಷ್ಟು ಶಿಕ್ಷಣವನ್ನು ಯಾವ ಶಾಲೆಗಳೂ, ಯೂನಿವರ್ಸಿಟಿಗಳೂ ಕೊಡಲಾರವು ಅನ್ನಿಸುವುದು ಇದಕ್ಕೇ.
ಅಜ್ಜ ಅಜ್ಜೀನ ನೋಡಿ ಬನ್ನಿ
ಊರಲ್ಲಿ ಮಕ್ಕಳಿಗೋಸ್ಕರ ಹಪಾಹಪಿಸುತ್ತ¤ ಅಜ್ಜಿಯೊಬ್ಬಳು ಕಾಯುತ್ತಿದ್ದಾಳೆ ಅನ್ನೋದು ನಮಗೆ ಗೊತ್ತಾಗೋದೇ ಇಲ್ಲ. ಸಮ್ಮರ್ ಕ್ಯಾಂಪ್ ಅನ್ನೋದು ಕನಸುಗಳನ್ನು ಹುಟ್ಟಿಸೋದೇ ಇಲ್ಲ ಅಂತ ಇಲ್ಲಿನ ವಾದ ಅಲ್ಲ. ಆದರೆ ಊರಲ್ಲಿ ಅಜ್ಜ ಅಜ್ಜಿ ಇದ್ದಾಗ ಮಕ್ಕಳನ್ನು ಒಂದಷ್ಟು ದಿನವಾದರೂ ಅವರಲ್ಲಿಗೆ ಬಿಡಲಾರದಷ್ಟು ಸ್ವಾರ್ಥಿಗಳಾಗಿ ಬಿಟ್ಟರಾ ಮಾಡರ್ನ್ ಹೆತ್ತವರು? ಅನ್ನೋದು ಇಲ್ಲಿನ ದೈನ್ಯ ಪ್ರಶ್ನೆ. ಮೊನ್ನೆ ಜಾಹೀರಾತೊಂದನ್ನು ನೋಡುತ್ತಿ¨ªೆ. “ಅಜ್ಜಿ ಮನೆ… ಬೇಸಿಗೆ ಶಿಬಿರ… ನಿಮ್ಮ ಮಕ್ಕಳನ್ನು ಕರೆ ತನ್ನಿ’ ಎನ್ನುವ ಫಲಕ. ಅಜ್ಜಿಯ ಪ್ರೀತಿಯನ್ನೂ ಹಣಕೊಟ್ಟು ತಗೊಳ್ಳುವ ಹಾಗೇ ಮಾಡಿ ಬಿಡ್ತಲ್ಲಾ ಈ ಬೇಸಿಗೆ ಶಿಬಿರ ಅಂತ ಮರುಕವಾಯ್ತು. ಅಜ್ಜಿ ಅನ್ನೋ ಎರಡಕ್ಷರವನ್ನೇ ಮಾರುಕಟ್ಟೆ ಗಿಮಿಕ್ ಮಾಡಿಬಿಡ್ತಾರಲ್ಲ ಈ ಉದ್ಯಮಪತಿಗಳು ಅಂತ ಅಚ್ಚರಿಯೂ ಆಯ್ತು. ಅಜ್ಜಿ ಪದವನ್ನೇ ಮಾರುಕಟ್ಟೆಯ ಯಾವುದೋ ಉತ್ಪನ್ನಕ್ಕೆ ಬ್ರಾಂಡ್ ಮಾಡಿ, ಅಜ್ಜಿ ಅನ್ನೋ ಪದ ಮಕ್ಕಳಲ್ಲಿ ಸಾಬೂನು, ಬಿಸ್ಕೆಟ್ ಕಂಪೆನಿಯ ಹೆಸರುಗಳಂತೆ ಅವೂ ಒಂದು ಹೆಸರು ಅಂತ ಅಜ್ಜಿಯ ಹಿಂದಿರುವ ಚೆಂದದ ಮಮತೆಯನ್ನೇ ಸಾಯಿಸಿಬಿಡುತ್ತಾರಲ್ಲಾ ಈ ಮಾರುಕಟ್ಟೆಯ ಧುರೀಣರು ಅಂತ ಕೋಪವೂ ಬಂತು. ಈ ಬೇಸಿಗೆ ರಜಕ್ಕಾದರೂ ಮಗ ಬಂದಾನು, ಮೊಮ್ಮಗ ಬಂದಾನು ಅಂತ ಕಾಯುತ್ತಾ ಕೂರುವ ಅಜ್ಜ ಅಜ್ಜಿಯ ಸಣ್ಣಗಿನ ನೇವರಿಕೆಯಲ್ಲಿ, ಚೆಂದದ ಹಾಡಿನಲ್ಲಿ, ಯಾವನಿಗೂ ಕಂಡುಹಿಡಿಲಾಗದ ವಿಚಿತ್ರ ಆಟಗಳಲ್ಲಿ, ಅದ್ಯಾವುದೋ ಮಾಯಕದ ಪರಿಮಳವಿದೆ, ಎಲ್ಲಿಯೂ ಸಿಗದ ಒಂದು ಬೆರಗಿದೆ. ಅದನ್ನು ಯಾವ ಬೇಸಿಗೆಯ ಶಿಬಿರಕ್ಕೂ ಕೊಡಲು ಸಾಧ್ಯವೇ ಇಲ್ಲ.
ಪ್ರಸಾದ್ ಶೆಣೈ ಆರ್. ಕೆ.