ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕಾದಂಬರಿ ಆಧಾರಿತ “ಅಜ್ಜ’ ಚಿತ್ರ ಈ ವಾರ ತೆರೆಗೆ ಬರಬೇಕಿತ್ತು. ಸಾಲು ಸಾಲು ಚಿತ್ರಗಳಿದ್ದರೂ, ಚಿತ್ರದಲ್ಲಿ ಅಪರೂಪದ ಕಥೆ ಇರುವ ಅಜ್ಜನನ್ನು ಇದೇ ನವೆಂಬರ್ ಕೊನೆಯೋಲಗೆ ಪ್ರೇಕ್ಷಕರ ಮುಂದೆ ತರುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ, ನಟ ಅಂಬರೀಶ್ ನಿಧನರಾದ ಹಿನ್ನೆಲೆಯಲ್ಲಿ ಅವರ ಶೋಕಾರ್ಥ, ಅಘೋಷಿತವಾಗಿ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಕಳೆದ ಮೂರ್‍ನಾಲ್ಕು ದಿನಗಳಿಂದ ಬಂದ್ ಆಗಿರುವುದರಿಂದ, ಇಡೀ ಚಿತ್ರರಂಗವೇ ಈ ದುಃಖದಲ್ಲಿ ಭಾಗಿಯಾಗಿರುವುದರಿಂದ “ಅಜ್ಜ’ ಚಿತ್ರತಂಡ ಚಿತ್ರದ ಬಿಡುಗಡೆಯನ್ನು ಮುಂದೂಡಿದೆ.
ಇನ್ನು “ಅಜ್ಜ’ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಹಿರಿಯ ನಟ ದತ್ತಣ್ಣ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಚಿತ್ರದ ಬಿಡುಗಡೆ ಪೂರ್ವ ಸುದ್ದಿಗೋಷ್ಟಿಯನ್ನು ನಡೆಸಿದ್ದ ಚಿತ್ರತಂಡ, “ಅಜ್ಜ’ನ ಕೆಲ ವಿಶೇಷತೆಗಳ ಕುರಿತು ಮಾತನಾಡಿದೆ.
“ಅಜ್ಜ’ ಕಾದಂಬರಿ ಆಧಾರಿತ ಚಿತ್ರವಾಗಿದ್ದು ಇದರಲ್ಲಿ ಹಾರರ್, ಥ್ರಿಲ್ಲರ್, ಕಥಾಹಂದರವನ್ನು ಹೊಂದಿದೆ. ಜೊತೆಗೆ ಸಾಮಾಜಿಕ ಕಳಕಳಿ ಇರುವ ಸಂದೇಶ ಕೂಡ ಚಿತ್ರದಲ್ಲಿದೆ. ಮೆಡಿಕಲ್ ವಿದ್ಯಾರ್ಥಿಗಳಿಗೆ ಕನಿಷ್ಟ ಒಂದು ವರ್ಷ ಗ್ರಾಮೀಣ ಸೇವೆ ಕಡ್ಡಾಯ ಎಂಬ ಸರಕಾರದ ನಿರ್ದೇಶನದಂತೆ ನಾಲ್ವರು ಯುವ ವೈದ್ಯರು ಯಾವುದೇ ಮೂಲಭೂತ ಸೌಕರ್ಯವಿಲ್ಲದ ಗ್ರಾಮೀಣ ಪ್ರದೇಶವೊಂದಕ್ಕೆ ಶುಶ್ರೂಷೆ ಮಾಡಲು ಹೋಗುತ್ತಾರೆ. ಆ ಅಪರಿಚಿತ ಸ್ಥಳದಲ್ಲಿ ಈ ನಾಲ್ವರು ಅನಿರೀಕ್ಷಿತವಾಗಿ ದುರಂತಕ್ಕೆ ಸಿಕ್ಕಿ ಹಾಕಿಕೊಳ್ತಾರೆ. ಅಲ್ಲಿ ಇವರಿಗೆ ಅಜ್ಜ, ಮೊಮ್ಮಗಳು ಇಬ್ಬರು ಸಿಗುತ್ತಾರೆ. ಮುಂದೇನಾಗುತ್ತದೆ ಎಂಬುದೇ ಚಿತ್ರದ ಕಥೆಯ ಎಳೆ. ಅದನ್ನು ಚಿತ್ರಮಂದಿರದಲ್ಲೇ ನೋಡಬೇಕು’ ಎನ್ನುತ್ತಾರೆ “ಅಜ್ಜ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ವೇಮಗಲ್ ಜಗನ್ನಾಥ್.
ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಹಿರಿಯ ನಟ ದತ್ತಣ್ಣ, “ವಾಸ್ತವ ಮತ್ತು ಭ್ರಮೆ ಇವುಗಳಲ್ಲಿ ಗಂಡ-ಹೆಂಡತಿ ಅನ್ನೋನ್ಯತೆ, ತಂದೆ-ಮಗನ ಸಂಬಂಧ ಹೀಗೆ ಅನೇಕ ಪಾತ್ರಗಳು ಇವತ್ತಿನ ಯುವ ಜನಾಂಗವನ್ನು ಪ್ರತಿನಿಧಿಸುತ್ತವೆ. ಅಜ್ಜ ಉಳಿದುಕೊಂಡಿರುವ ಜಾಗವನ್ನು ಕಬಳಿಸಲು ದುರುಳರ ತಂಡವೊಂದು ಬರುವುದು. ನಮ್ಮ ಕಾಲಘಟ್ಟದ ರಾಜಕೀಯ, ಯುವ ಪೀಳಿಗೆಯು ಯಾವ ರೀತಿ ಕೆಲಸ ನಿರ್ವಹಿಸುತ್ತಿದ್ದಾರೆ. ಎಂಬ ಹಲವು ಅಂಶಗಳೊಂದಿಗೆ ಸಿನಿಮಾ ಸಾಗುತ್ತದೆ. ಚಿತ್ರದಲ್ಲಿ ನನ್ನ ಪಾತ್ರವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಪ್ರಶಸ್ತಿ ಬರಬಹುದು ಎಂದು ಹಲವರು ಹೇಳುತ್ತಿದ್ದಾರೆ ಅದು ಜನರಿಗೆ ಬಿಟ್ಟಿದ್ದು’ ಎನ್ನುತ್ತಾರೆ.
“ಅಜ್ಜ’ ಚಿತ್ರದಲ್ಲಿ “ಅಜ್ಜ’ನ ಪಾತ್ರವನ್ನು ದತ್ತಣ್ಣ ನಿರ್ವಹಿಸಿದರೆ, ಮೊಮ್ಮಗಳ ಪಾತ್ರವನ್ನು ಪೃಥ್ವಿಶ್ರೀ ನಿರ್ವಹಿಸಿದ್ದಾರೆ. ಲತೀಶ್ ಮಡಕೇರಿ ಖಳನಟನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ರಾಜ್ ಪ್ರವೀಣ್, ದೀಪಕ್ ರಾಜ್, ಅಶ್ವಿನಿ, ಮಾಧುರಿ ಶಶಿಕುಮಾರ್ ಮೊದಲಾದ ಕಲಾವಿದರು ಚಿತ್ರದ ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಸಾಯಿಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಮೈಸೂರು ಮೂಲದ ವಕೀಲ ಕೆ.ಪಿ. ಚಿದಾನಂದ್ ಚಿತ್ರವನ್ನು ನಿರ್ಮಿಸಿದ್ದಾರೆ. “ಅಜ್ಜ’ ಚಿತ್ರದ ಚಿತ್ರೀಕರಣವನ್ನು ಕೊಡಗು, ಕಾರವಾರ, ಉಡುಪಿಯ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರಿಸಲಾಗಿದೆ. ಸದ್ಯ ತನ್ನ ಶೀರ್ಷಿಕೆ ಮತ್ತು ಪೋಸ್ಟರ್‌ಗಳ ಮೂಲಕ ಸಿನಿಪ್ರಿಯರನ್ನು ಸೆಳೆಯುತ್ತಿರುವ “ಅಜ್ಜ’ ಹೇಗಿರಲಿದ್ದಾನೆ ಎಂಬುದು ಶೀಘ್ರದಲ್ಲಿಯೇ ಗೊತ್ತಾಗಲಿದೆ.