Advertisement

ಅಜ್ಜಿಯ ಕ್ಯಾಂಟೀನಿನ ಸಾಂಬಾರು

06:00 AM Sep 21, 2018 | |

ನಾನು ಪಿ.ಯು.ಸಿ. ಹಂತಕ್ಕೆ ಬಂದಾಗ ಯಾವುದೇ ರೀತಿಯ ತಿಳುವಳಿಕೆ ಇರಲಿಲ್ಲ. ಆಗ ಯಾರ ಪರಿಚಯವೂ ನನಗಿರಲಿಲ್ಲ. ದಿನ ಕಳೆದಂತೆ ಕೆಲವರ ಪರಿಚಯವಾಯಿತು. ನಾವೆಲ್ಲರೂ ಮಧ್ಯಾಹ್ನದ ಊಟಕ್ಕೆ ಬುತ್ತಿಯನ್ನು ತರುತ್ತಿದ್ದೆವು. ಕೆಲವೊಮ್ಮೆ ಬುತ್ತಿಯಲ್ಲಿ ಅನ್ನ ಮಾತ್ರ ಹಾಕಿಕೊಂಡು ಬಂದ ದಿನದಲ್ಲಿ ಎಲ್ಲಿಗೆ ಸಾಂಬಾರ್‌ ತರಲು ಹೋಗುವುದೆಂಬ ಚಿಂತೆ. ಒಬ್ಬರು ಸಾಂಬಾರ್‌ ತೆಗೆದುಕೊಂಡು ಹೋಗುವುದನ್ನು ನಾವು ಕಂಡೆವು. ಆಗ ಸಂತೋಷವಾಗಿ ಅವರಲ್ಲಿ ನಾನು ಕೇಳಿದೆ, “”ನೀವು ಎಲ್ಲಿಂದ ಸಾಂಬಾರ್‌ ತಂದ್ರಿ?” ಎಂದು.  ಅದಕ್ಕೆ ಪ್ರತ್ಯುತ್ತರವಾಗಿ ಅವರು, “”ನಾವು ಅಜ್ಜಿಯ ಹೊಟೇಲ್‌ನಿಂದ” ಎಂದರು. “”ಹೌದಾ! ಅದು ಎಲ್ಲಿದೆ” ಎಂದು ಕೇಳಿದಾಗ  ಅದಕ್ಕೆ ಅವರು, “”ಬೆಳಾಲ್‌ ಕ್ರಾಸ್‌ನ ರಸ್ತೆ ಬದಿಯಲ್ಲಿದೆ” ಎಂದು ಹೇಳಿದರು. ನಂತರ ನಾನು ಮತ್ತು ನನ್ನ ಸ್ನೇಹಿತರು ಬೆಳಾಲ್‌ ರಸ್ತೆಗೆ ಹೋಗಿ ಅಲ್ಲಿ ಅಜ್ಜಿಯ ಹೊಟೇಲ್‌ ಎಲ್ಲಿ ಎಂದು ಹುಡುಕಿದೆವು. ಎಷ್ಟು ಹುಡುಕಿದರೂ ಸಿಗಲೇ ಇಲ್ಲ. ಅಲ್ಲೇ ಪಕ್ಕದಲ್ಲಿ ಒಂದು ಅಂಗಡಿ ಇತ್ತು. ನಾನು ಪೊಟೋ ತೆಗೆಯುವ ಅಂಗಡಿ ಇರಬೇಕೆಂದು ತಿಳಿದುಕೊಂಡೆ. ಆದರೆ ನನ್ನ ಊಹೆ ಅದಲು ಬದಲಾಗಿತ್ತು. ಬೇರೆ ಅಂಗಡಿ ಎಂದೆಣಿಸಿ ಅದರ ಬಳಿಗೆ ಹೋದರೆ, ಅದು ಹೋಟೆಲ್‌! ಅದು ಬೇರಾವ ಹೊಟೇಲ್‌ ಅಲ್ಲ. ಬದಲಾಗಿ ನಾನು ಹುಡುಕುತ್ತಿದ್ದ ಅಜ್ಜಿಯ ಹೊಟೇಲ್‌. ನಾನು ಒಳಹೊಕ್ಕೆ. ಅಲ್ಲಿ ಒಬ್ಬ ಅಜ್ಜ ಇದ್ದರು. ವಿಪರ್ಯಾಸವೆಂದರೆ, ಅಜ್ಜನಿಗೆ ಎರಡು ಕಣ್ಣುಗಳೂ ಕಾಣುತ್ತಿರಲಿಲ್ಲ. ಕಣ್ಣುಗಳನ್ನು ಕಳೆದುಕೊಂಡಿದ್ದರೂ ಕೂಡ ತನ್ನ ಕೆಲಸವನ್ನು ಯಥಾವವತ್ತಾಗಿ ಮಾಡುತ್ತಿದ್ದರು. ಇದು ನನ್ನ ಮನಸ್ಸಿಗೆ ಬೇಸರವಾದರೂ ಕೂಡ ಅವರ ಬಗ್ಗೆ ಹೆಮ್ಮೆ ಮತ್ತು ಗೌರವದ ಭಾವ ಮೂಡಿತು. ದೂರದಿಂದಲೇ ಗಮನಿಸುತ್ತಿದ್ದ ನಾನು ಅಲ್ಲೇ ಅವರ ಪಕ್ಕದಲ್ಲಿಯೇ ಕೆಲಸ ಮಾಡುತ್ತಿದ್ದ ಅಜ್ಜಿಯ ಬಳಿ ಹೋಗಿ “ಸಾಂಬಾರ್‌ ಕೊಡಿ’ ಎಂದು ಕೇಳಿದೆ. ಅದಕ್ಕೆ ಅಜ್ಜಿ “ಹಾ… ಕೊಟ್ಟೆ’ ಎಂದು ಪ್ರತ್ಯುತ್ತರವನ್ನಿತ್ತು ಸಾಂಬಾರ್‌ ಕಟ್ಟಿಕೊಟ್ಟರು. ಅದನ್ನು ತೆಗೆದುಕೊಂಡ ನಾನು, “ಎಷ್ಟು ರೂಪಾಯಿ?’ ಎಂದು ಕೇಳಿದೆ. ಅದಕ್ಕೆ ಅವರು, “ಐದು ರೂಪಾಯಿ’ ಎಂದು ಹೇಳಿದರು. 

Advertisement

ಹೀಗೆ ಸುಮಾರು ಎರಡು ವರ್ಷಗಳು ಉರುಳುತ್ತ ಹೋದಂತೆ ನಾನು ಪಿಯುಸಿಯಲ್ಲಿ ಉತ್ತೀರ್ಣನಾಗಿ ಡಿಗ್ರಿ ಹಂತಕ್ಕೆ ಬಂದಾಗ ಎಲ್ಲವನ್ನು ವಿಚಾರಿಸಿ ತಿಳಿದುಕೊಳ್ಳುವ ಬುದ್ಧಿ ಬೆಳೆದಿತ್ತು. ಅಲ್ಲಿಯೂ ಕೂಡ ಮತ್ತಷ್ಟು ಹೊಸ ಸ್ನೇಹಿತರ ಆಗಮನ, ಪರಿಚಯವಾಯಿತು. ಅಂದು ಶುಕ್ರವಾರದಂದು ನಾನು ಸಾಂಬಾರ್‌ಗೆಂದು ಅಜ್ಜಿಯ ಹೊಟೇಲ್‌ಗೆ ಹೋದೆ. ಅಲ್ಲಿ ಅಜ್ಜಿ ನನ್ನನ್ನು ಕಂಡ ಕೂಡಲೇ ಮುಗುಳ್ನಗುತ್ತ, “ಸಾಂಬಾರ್‌ ಬೇಕಾ?’ ಎಂದು ಅವರೇ ಕೇಳಿದರು. ಅದಕ್ಕೆ ನಾನು, “ಹೌದು’ ಎಂದುತ್ತರವನ್ನಿತ್ತೆ. ಆ ದಿನ ತುಂಬಾ ಪಿಯುಸಿ ವಿದ್ಯಾರ್ಥಿಗಳು ಊಟಕ್ಕೆಂದು ಅಲ್ಲಿಗೆ ಬಂದಿದ್ದರು. ನಾನು ಅಜ್ಜಿಯ ಸಾಂಬಾರ್‌ಗೆ 10 ರೂಪಾಯಿ ಕೊಟ್ಟೆ. ಅದಕ್ಕೆ  ನನ್ನ ಬಳಿ, “ಚಿಲ್ಲರೆ ಇಲ್ಲ’ ಎಂದು ಹೇಳಿದರು. ನಾನು ಮಾಮೂಲಿ ಗಿರಾಕಿಯಾದ ಕಾರಣ, “ಚಿಲ್ಲರೆ ಇದ್ದಾಗ ಕೊಡಿ ಅಜ್ಜಿ . ಅವಸರವೇನೂ ಇಲ್ಲ’ ಎಂದು ಹೇಳಿದೆ. ಅದಕ್ಕೆ, “ನೀನು ಸೋಮವಾರ ಬಾ. ಸಾಂಬಾರ್‌ ಕೊಡುತ್ತೇನೆ’ ಹೇಳಿ ಕಳಿಸಿದರು. ಆದರೆ, ಸೋಮವಾರದಂದು ಪ್ರಾರಂಭವಾದ ಪರೀಕ್ಷೆ ಬುಧವಾರದವರೆಗೆ ಇದ್ದ ಕಾರಣ ಅವರ ಬಳಿ ಹೋಗಲು ಸಾಧ್ಯವಾಗಲಿಲ್ಲ.

ಗುರುವಾರದಂದು ಅಜ್ಜಿಯ ಹೊಟೇಲ್‌ ಬಳಿ ಹೋದ ತಕ್ಷಣ ನಾನು ಕೇಳಿ ದಿದ್ದರೂ ಅಜ್ಜಿ ಸಾಂಬಾರ್‌ ಕಟ್ಟಿ ಕೊಟ್ಟರು. ನಾನು ಹಣ ಕೊಡಲು ಪಾರ್ಸ್‌ ತೆಗೆದಾಗ ಅದಕ್ಕೆ ಅಜ್ಜಿ , “ನಿನಗೆ ನಾನೇ 5 ರೂಪಾಯಿ ಕೊಡಬೇಕಾಗಿತ್ತು. ನೆನಪಿ ದೆಯೆ?’ ಎಂದು ಕೇಳಿದರು. ಆಗ ನನ್ನ ಮನಸ್ಸಿನಲ್ಲಿ ನನಗೆ ತರಗತಿಯಲ್ಲಿ ಈಗ ಮಾಡಿದ ಪಾಠವೇ ಸರಿಯಾಗಿ ನೆನಪಿರುವುದಿಲ್ಲ. ಇನ್ನು ಯಾವತ್ತೋ ಕೊಡಲು ಬಾಕಿ ಇದ್ದ ಹಣ ಹೇಗೆ ನೆನಪಿಗೆ ಬರಬೇಕು? ನನ್ನ ಅರಿವಿಗೆ ಬಾರದ ಹಾಗೆ ಕಣ್ಣಂಚಿನಲ್ಲಿ ನೀರು ಜಿನುಗಿತು. ನನಗೆ ಅಜ್ಜಿಯ ಪ್ರಾಮಾಣಿಕತೆಯನ್ನು ಕಂಡು ಹೆಮ್ಮೆಯಾಯಿತು. ಆ ಹೊಟೇಲ್‌ನಲ್ಲಿ ಅವರೊಬ್ಬರೇ ಕೆಲಸಗಾರರು. ಅಲ್ಲಿಗೆ ಬೇಕಾದ ದಿನಸಿ ಸಾಮಾನುಗಳನ್ನು ಅಂಗಡಿಗೆ ಹೋಗಿ ತೆಗೆದುಕೊಂಡು ಬರುವ ಹೊಣೆಯೂ ಅವರ ಮೇಲೆಯೇ ಇತ್ತು. ಹಣವನ್ನು ತೆಗೆದುಕೊಳ್ಳುವುದಷ್ಟೇ ಅಜ್ಜನ ಕಾಯಕವಾಗಿತ್ತು. ಹಣವನ್ನು ನೋಡಿ ಗುರುತಿಸಲು ಸಾಧ್ಯವಾಗದಿದ್ದರೂ ಸಹ ಕೇವಲ ತನ್ನ ಕೈ ಸ್ವರ್ಶದ ಮೂಲಕ ಇಷ್ಟು ರೂಪಾಯಿಯೆಂದು ಅವರು ಗುರುತಿಸು ತ್ತಿದ್ದರು. ಗಿರಾಕಿಯನ್ನು ಯಾವ ರೀತಿ ನೋಡಿಕೊಳ್ಳಬೇಕೆಂಬ ತಿಳುವಳಿಕೆ ಅವರಲ್ಲಿ ಸಂಪನ್ನವಾಗಿತ್ತು. 

ದುಡಿಯುವ ಈ ಹಿರಿಜೀವಗಳು ಈಗಿನ ಯುವಜನತೆಗೆ ಸ್ಫೂರ್ತಿಯನ್ನು ನೀಡುವ ಆಶಾಕಿರಣವಾಗುತ್ತಾರೆ. ಜೀವನದಲ್ಲಿ ಹಣವೇ ಮುಖ್ಯವಲ್ಲ. ಅದರ ಜೊತೆಗೆ ನೈತಿಕತೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಅತ್ಯುತ್ತಮ ಪ್ರಜೆಗಳಾಗ ಬೇಕೆಂಬು ವುದೇ ನನ್ನ ಈ ಬರಹದ ಆಶಯ.

ಲಕ್ಷ್ಮಣ ಚಾರ್ಮಾಡಿ 
ಎಸ್‌ಡಿಎಂ ಕಾಲೇಜು, ಉಜಿರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next