ಮಲಗಿದ್ದ ಅಜ್ಜಿಗೆ ನಮ್ಮನ್ನು ನೋಡಿ ಮೊಮ್ಮಕ್ಕಳು ಊಟಕ್ಕೆ ಬಂದವೇನೋ ಎಂಬುವುದಷ್ಟೇ ಯೋಚನೆ. ಅಷ್ಟೇ ಅಕ್ಕರೆಯಿಂದ “ಊಟ ಬಡಿಸ್ತಿನಿ ಬನ್ನಿ’ ಎಂದು ಕರೆಯುತ್ತಿದ್ದಂತೆ ಅಣ್ಣ ಧುಸುಮುಸುಗುಟ್ಟುತ್ತ ನೇರಾನೇರ ಫೀಸಿನ ವಿಷಯವೆತ್ತಿದ.
ಬಾಲ್ಯದ ಬುತ್ತಿ ಬಿಚ್ಚಿಟ್ಟರೆ ಸಿಹಿಯೊಂದಿಗೆ ಒಂದಿಷ್ಟು ಸಂಕಟದ ಸಂಗತಿಗಳೂ ಆಚೆ ಬಿದ್ದಾವು ಎಂಬ ಭಯ , ನನಗೆ ಯಾವಾಗಲೂ ಕಾಡುತ್ತಿರುತ್ತದೆ. ಬಾಲ್ಯದ ಚರ್ಯೆಗಳಿಗೆ ಕಾರಣಗಳೇ ಇರುವುದಿಲ್ಲ. ಮಾಡುವ ತರಲೆಗಳು, ಹುಚ್ಚಾಟಗಳಿಗೆ ಅರ್ಥಗಳೂ ಕಾಣುವುದಿಲ್ಲ. ಆದರೆ ಬೆಳೆದು ದೊಡ್ಡವರಾದಂತೆ, ಇಂತಹ ಸಣ್ಣ ಪುಟ್ಟ ಘಟನೆಗಳೇ ಇಂದಿನ ನಮ್ಮ ಸಾಚಾತನವನ್ನು ಗೇಲಿ ಮಾಡಿ ನಗುತ್ತವೆ.
ಆಗ ಅಪ್ಪನ ಆಧಾರ ಕಳೆದುಕೊಂಡ ಮೇಲೆ ಅಮ್ಮನೆಂಬ ಭೂಮಿಯ ಮೇಲೆಯೇ ಬೀಳುವುದು ನಮಗೆ ಅನಿವಾರ್ಯವಾಗಿತ್ತು. ನಾಲ್ಕು ಜನರ ಹೊಟ್ಟೆ ಹೊರೆಯುವ ನೊಗ ಹೊತ್ತ ಅಮ್ಮನ ಮುಖ ನಮಗೆಂದೂ ಅಸ್ಪಷ್ಟ. ಆದರೆ, ಅಜ್ಜಿ ಎಂಬ ಅಕ್ಕರೆಯ ಜಗತ್ತಿನಲ್ಲಿ ಯಾವೊಂದು ಕೊರತೆಯೂ ಕಾಣುತ್ತಲೇ ಇರಲಿಲ್ಲ. ಅಪ್ಪನ ಹೆಗಲೇರಿ ತೇರು ನೋಡುವ ಆಸೆಗಳು, ಅಮ್ಮನ ಕೈಯಿಂದ ತುತ್ತು ನುಂಗುವ ಬಯಕೆಗಳು, ಜೋಪಡಿಯ ಕಿಂಡಿಗಳ ಮೂಲಕ ಮನೆಯೊಳಗೆ ಬೆಳಕು ಸುರಿಯುತ್ತಿದ್ದ ಚಂದ್ರನ ಕಥೆಗಳು ಹೀಗೆ ಎಲ್ಲಕ್ಕೂ ಅಜ್ಜಿಯೇ ಮಿಡಿಯಬೇಕಿತ್ತು.
ನಾನಾಗ ಎರಡನೇ ತರಗತಿ ಇರಬೇಕು. ಊಟದ ಗಂಟೆ ಹೊಡೆದಾಗ, ತಂದ ಊಟದ ಬಾಕ್ಸ್ ಬಿಚ್ಚಿ ಕೂತಿದ್ದೆವು. ಅದೇ ಶಾಲೆಯಲ್ಲಿ ನಾಲ್ಕನೇ ಕ್ಲಾಸ್ ಓದುತ್ತಿದ್ದ ಅಣ್ಣ, ನನ್ನ ಊಟ ಮುಗಿಯಲು ಕಾಯುತ್ತಿದ್ದವನು ಮುಗಿದ ಕೂಡಲೇ ಕೈಹಿಡಿದು ಮನೆಯ ದಾರಿ ಹಿಡಿದಿದ್ದ. ಕಾರಣ ಕೇಳಿದ್ದಕ್ಕೆ, ಅಜ್ಜಿಯಿಂದ ಫೀಸು ವಸೂಲಿ ಮಾಡುವುದಕ್ಕಿದೆ ಎಂದ. ನನ್ನ ಫೀಸು ಹತ್ತು ರೂಪಾಯಿ ಮತ್ತು ನಿನ್ನದು ಐದು ರೂಪಾಯಿ ಇಸ್ಕೊಬೇಕು ಎಂದಾಗ ಮಾತ್ರ ಗಾಬರಿಯಾದೆ. ನನಗೆ ಯಾವ ಫೀಸನ್ನೂ ತರಗತಿಯಲ್ಲಿ ಕೇಳಿರಲಿಲ್ಲ. ನಾವು ಮನೆ ಸೇರುವುರಲ್ಲಿ ಸುಡು ಮಧ್ಯಾಹ್ನವಾಗಿತ್ತು.
ಮಲಗಿದ್ದ ಅಜ್ಜಿಗೆ ನಮ್ಮನ್ನು ನೋಡಿ ಮೊಮ್ಮಕ್ಕಳು ಊಟಕ್ಕೆ ಬಂದವೇನೋ ಎಂಬುವುದಷ್ಟೇ ಯೋಚನೆ. ಅಷ್ಟೇ ಅಕ್ಕರೆಯಿಂದ “ಊಟ ಬಡಿಸ್ತಿನಿ ಬನ್ನಿ’ ಎಂದು ಕರೆಯುತ್ತಿದ್ದಂತೆ ಅಣ್ಣ ಧುಸುಮುಸುಗುಟ್ಟುತ್ತ ನೇರಾನೇರ ಫೀಸಿನ ವಿಷಯವೆತ್ತಿದ. ನಾಳೆ ಕೊಡುವುದಾಗಿ ಹೇಳಿದರೂ ಕೇಳದೇ ಹಟ ಹಿಡಿದ. ಕೊನೆಗೆ ಅಜ್ಜಿ ಯಾವ ಯಾವುದೋ ಡಬ್ಬಿಗಳನ್ನೆಲ್ಲ ತಡಕಾಡಿ ದುಡ್ಡು ತೆಗೆದು ಕೊಟ್ಟಳು. ಹೀಗೆ ನನ್ನ ಕೈಗೆ ಮೊದಲ ಬಾರಿಗೆ ಬಂದಿದ್ದ ಐದು ರೂ. ಗರಿಗರಿ ನೋಟು ಕಂಡು ಪುಳಕಗೊಂಡಿದ್ದೆ. ಹಣ ಸಿಕ್ಕಿದ್ದೇ ಅಣ್ಣ ತೀರಾ ಖುಷಿಯಿಂದ ಶಿಳ್ಳೆ ಹಾಕುತ್ತಾ, ನನ್ನ ಕೈಹಿಡಿದು ಹೆಚ್ಚು ಕಡಿಮೆ ಓಡುವ ನಡಿಗೆಯಲ್ಲಿ ಹೋಗುತ್ತಿದ್ದ. ಓಣಿಯ ತಿರುವಿನಲ್ಲಿದ್ದ ಶೆಟ್ಟರ ಅಂಗಡಿ ಕಂಡಿದ್ದೇ ಅತ್ತ ಕರೆದುಕೊಂಡು ಹೋದವನು ನನ್ನ ಐದು ರೂಪಾಯಿಯಲ್ಲಿ ಬಣ್ಣ ಬಣ್ಣದ ಪೆನ್ಸಿಲ್,ರಬ್ಬರ್, ಒಂದೆರಡು ಬಳಪ ತೆಗೆಸಿಕೊಟ್ಟು ತನ್ನ ಹಣದಲ್ಲಿ ನೋಟ್ ಬುಕ್, ಪೆನ್ ಕೊಂಡುಕೊಂಡ.
ಇಷ್ಟು ದೊಡ್ಡ ಮೊತ್ತವನ್ನು ಸುಳ್ಳು ಹೇಳಿ ಪಡೆದದ್ದರ ಹಿಂದಿನ ಅಣ್ಣನ ಅನಿವಾರ್ಯ ಏನಿತ್ತೋ? ನನಗಿಂದಿಗೂ ಗೊತ್ತಿಲ್ಲ. ಅಣ್ಣ ಹಾಕಿಸಿಕೊಂಡ ಆಣೆ ಪ್ರಮಾಣಗಳನ್ನು ಮೀರಿ, ಮರುದಿನವೇ ಅಜ್ಜಿಯ ಮುಂದೆ ಎಲ್ಲವನ್ನೂ ಹೇಳಿಬಿಟ್ಟೆ. ಅಜ್ಜಿ ಒಂದು ಮಾತೂ ಬೈಯಲಿಲ್ಲ, ಹೊಡೆಯಲಿಲ್ಲ. ನಮ್ಮ ಮೋಸದಿಂದ ಆಕೆ ಅಂದು ಪಟ್ಟಿರಬಹುದಾದ ಸಂಕಟ ನನಗೀಗ ಅರ್ಥವಾಗುತ್ತದೆ. ಸಂಜೆ ಅಣ್ಣನೊಂದಿಗೆ ನಗುನಗುತ್ತ ಮಾತಾಡುತ್ತಲೇ , “ಪುಟ್ಟೂ ನಿಂಗ ಕಾಫಿ ಬೇಕಾದ್ರ ನಾನ್ ಕೊಡಿಸ್ತಿದ್ನಲ್ಲೋ ಅದಕ್ ಯಾಕ ಸುಳ್ ಹೇಳ್ದಿ? ಇನ್ ಹಿಂಗ ಮಾಡ್ ಬ್ಯಾಡಪ್ಪ ಅಂತ ಇಷ್ಟೇ ಹೇಳಿದ್ದು!’ ಅಣ್ಣ ಪಾಪಪ್ರಜ್ಞೆಯಿಂದ ಹನಿಗಣ್ಣಾಗಿದ್ದ.
ಅಜ್ಜಿಯಷ್ಟು ಅಖಂಡವಾಗಿ ಪ್ರೀತಿಸುವ ಮತ್ತೂಂದು ಜೀವವನ್ನು ಎಂದೂ ಕಾಣಲು
ಸಾಧ್ಯವಿಲ್ಲವೇನೋ. ಪ್ರತಿಯೊಬ್ಬರ ಮನೆಯಲ್ಲೂ ಅಜ್ಜಿ ಎಂಬ ಪ್ರೀತಿಯ ಗೂಡಿರುತ್ತದೆ. ಅಲ್ಲಿ ಕೈಹಾಕಿ ಬೆದಕಿದಂತೆಲ್ಲಾ ಇಂತಹ ನೂರಾರು ಘಟನೆಗಳು ತೆರೆದುಕೊಳ್ಳುತ್ತವೆ.
– ಕವಿತಾ ಭಟ್