Advertisement

ಅಜ್ಜಿ ಮಾಡಿದ ರಾಗಿ ಲಡ್ಡು

09:59 AM Dec 13, 2019 | mahesh |

“ಅಜ್ಜೀ, ನನ್ನ ಹೊಸ ಗೆಳೆಯರು ಬಂದಿದ್ದಾರೆ. ಏನಾದ್ರೂ ಕೊಡು ‘ ಎಂದು ಸಿರಿ ಹೇಳಿದಳು. “ಐದೇ ನಿಮಿಷ ಮಕ್ಕಳಾ… ಇದೋ ಬಂದೆ ‘ ಎಂದ ಅಜ್ಜಿ ಲಗುಬಗೆಯಿಂದ ಅಡುಗೆಮನೆಗೆ ಹೀಗೆ ಹೋಗಿ ಹಾಗೆ ಬಂದೇ ಬಿಟ್ಟರು. ಕೈಯಲ್ಲಿ ಹುರಿಹಿಟ್ಟಿನ ಪುಟಾಣಿ ಉಂಡೆಗಳಿದ್ದ ಮೂರು ಬಟ್ಟಲುಗಳಿದ್ದವು. ಅವರು “ಬನ್ನಿ ತೊಗೊಳ್ಳಿ’ ಅಂತ ಪ್ರೀತಿಯಿಂದ ಮಕ್ಕಳನ್ನು ಕರೆದರು.

Advertisement

‘ಅಜ್ಜೀ, ಎಷ್ಟು ಬೇಗ ಮಾಡಿದಿರಿ! ಏನು ಈ ತಿಂಡಿಯ ಹೆಸರು?’ ಗುಂಗುರು ಕೂದಲ ಹುಡುಗ ಕೇಳಿದ
“ಹೂಂ, ಹೇಳ್ತೀನಿ… ಏನು ನಿನ್ನ ಹೆಸರು?’
“ಗಿರೀಶ. ಗಿರಿ ಅಂತ ಕರೀತಾರೆ, ಇವನು ನನ್ನ ತಮ್ಮ ಹರೀಶ. ಹರಿ ಅಂತ ಕರೆಯೋದು ‘
“ಅರೆ, ನಾನು ಕೇಳ್ಳೋಕ್ಕೆ ಮೊದಲೇ ಹೇಳಿದೆ, ಜಾಣ’ ಎಂದು ಅಜ್ಜಿ ನಕ್ಕರು.

“ಅಜ್ಜಿ ನಾವು ಮೂರೂ ಜನ ಬೆಸ್ಟ್ ಫ್ರೆಂಡ್ಸ್’ ಎಂದು ಸಿರಿ ಕಣ್ಣರಳಿಸಿದಳು.
“ಸಿರಿ, ಗಿರಿ, ಹರಿ… ಚೆನ್ನಾಗಿದೆ! ಹಾಂ, ಗಿರಿ ಏನೋ ಕೇಳಿದ್ನಲ್ಲ? ಈ ತಿಂಡಿ ಹೆಸರು ರಾಗಿ ಲಡ್ಡು ಪುಟ್ಟಾ. ಹುರಿಹಿಟ್ಟು ರಾಗಿಯಿಂದ ಮಾಡಿದ್ದು. ಆರೋಗ್ಯಕ್ಕೆ ತುಂಬಾ ಒಳ್ಳೇದು ‘
“ಅಜ್ಜಿ, ಇದನ್ನು ತಯಾರಿಸೋದು ಸುಲಭವಾ? ಎಷ್ಟು ಬೇಗ ಮಾಡಿದಿರಿ?’ ಹರಿ ಅಚ್ಚರಿಯಿಂದ ಕೇಳಿದ.
“ಹೌದು ಹರಿ. ರಾಗಿಯನ್ನು ತೊಳೆದು ನೆರಳಲ್ಲಿ ಒಣಗಿಸಿ ಹುರಿದು ಪುಡಿ ಮಾಡಿಟ್ಟು ಡಬ್ಬದಲ್ಲಿ ಸಂಗ್ರಹಿಸಿ ಇಡ್ತೀವಿ. ಬೇಕು ಅಂದಾಗ ಸ್ವಲ್ಪ ಹುರಿಹಿಟ್ಟು, ಬೆಲ್ಲ ನೀರು ಹಾಕಿ ಕಲೆಸಿದರೆ ರಾಗಿ ಲಡ್ಡು ರೆಡಿ. ರುಚಿಯಾಗೂ ಇರುತ್ತೆ, ಆರೋಗ್ಯಕರವಾಗೂ ಇರುತ್ತೆ’
“ಆಹಾ, ಎಷ್ಟು ರುಚಿಯಾಗಿದೆ. ಇವತ್ತು ನಮ್ಮ ಸ್ಕೂಲಲ್ಲಿ ಬೀದಿ ಬದಿ ಸಿಗೋ ಜಂಕ್‌ ಫ‌ುಡ್‌ ತಿಂದರೆ ದುಡ್ಡು ಪೋಲಾಗುತ್ತೆ ಮತ್ತು ಆರೋಗ್ಯವೂ ಹಾಳಾಗುತ್ತೆ. ಮನೆಯಲ್ಲಿ ತಯಾರಿಸಿದ ಆಹಾರಪದಾರ್ಥದಲ್ಲಿ ರುಚಿ ಶುಚಿ ಎರಡೂ ಇರುತ್ತೆ, ಅಂತ ನಮ್ಮ ಮಿಸ್‌ ಹೇಳಿದ್ರು’ ಎಂದು ಲಡ್ಡು ಮೆಲ್ಲುತ್ತಾ ಗಿರಿ ಹೇಳಿದ.

“ಹೌದು ಗಿರಿ, ನಿಮ್ಮ ಮಿಸ್‌ ಸರಿಯಾಗೇ ಹೇಳಿದ್ದಾರೆ. ಬೀದಿ ಬದಿಯ ಗಾಡಿಗಳಲ್ಲಿ ಮೊದಲೇ ಸಿದ್ಧಪಡಿಸಿಟ್ಟುಕೊಂಡ ಪದಾರ್ಥಗಳಿಂದ ಮಾಡೋ ತೆರೆದ ತಿನಿಸುಗಳನ್ನು ತಿನ್ನಬಾರದು. ಅವುಗಳ ತಯಾರಿಕೆಯಲ್ಲಿ ರಾಸಾಯನಿಕಗಳನ್ನು ಬಳಸಿರುತ್ತಾರೆ. ಅಲ್ಲಿ ತಿಂದರೆ, ದುಡ್ಡು ಕೊಟ್ಟು ಅನಾರೋಗ್ಯ ಪಡೆದುಕೊಂಡ ಹಾಗೆ?’ ಎಂದು ಅಜ್ಜಿ ಹರಿಯ ಬೆನ್ನುತಟ್ಟಿದರು.

“ಹಾಗಾದರೆ, ಗುಡ್‌ ಬೈ ಜಂಕ್‌ ಫ‌ುಡ್‌, ವೆಲ್ಕಮ್‌ ಹೋಮ್‌ ಫ‌ುಡ್‌’ ಸಿರಿ ಘೋಷಣೆ ಕೂಗಿದಳು.
“ಅಜ್ಜಿ ಈ ಹುರಿಹಿಟ್ಟಲ್ಲಿ ಬೇರೆ ಏನೇನು ಮಾಡಬಹುದು?’ ಎಂದು ಹರಿ ಪ್ರಶ್ನೆ ಕೇಳಿದ.
“ನಾಳೆ, ಹುರಿಹಿಟ್ಟಿನ ಖಾರದ ಉಂಡೆ ಮಾಡಿಕೊಡ್ತೀನಿ’ ಎಂದು ಅಜ್ಜಿ ಮುದ್ದುಗರೆದರು.
ಮೂವರೂ ಹೊಟ್ಟೆ ತುಂಬಾ ರಾಗಿ ಲಡ್ಡು ತಿಂದು ಅಜ್ಜಿಗೆ ಟಾಟಾ ಮಾಡಿ ಆಟವಾಡಲು ಹೊರಟರು.

Advertisement

ಕೆ.ವಿ.ರಾಜಲಕ್ಷ್ಮೀ

Advertisement

Udayavani is now on Telegram. Click here to join our channel and stay updated with the latest news.

Next