ಪುತ್ತೂರು: ವಯೋವೃದ್ಧೆಯೋರ್ವರು ನಗರಸಭೆ ಕಚೇರಿಗೆ ಬಂದು ತನಗೆ ಆಸರೆ ನೀಡುವಂತೆ ಬೇಡಿಕೊಂಡ ಘಟನೆ ಮಂಗಳವಾರ ನಡೆದಿದೆ. ಜಿಡೆಕಲ್ಲು ನಿವಾಸಿ ಸಂಕಮ್ಮ (80) ಇದ್ದಕ್ಕಿದ್ದಂತೆ ನಗರಸಭೆ ಕಚೇರಿಗೆ ಆಗಮಿಸಿ ನನಗೆ ಯಾರೂ ದಿಕ್ಕಿಲ್ಲ, ಮಕ್ಕಳು ನೋಡಿಕೊಳ್ಳುತ್ತಿಲ್ಲ, ನನಗೆ ಮನೆ ಕೊಡಿ, ಇಲ್ಲದಿದ್ದರೆ ನೀವೇ ಆಸರೆ ನೀಡಿ ಎಂದು ನಗರಸಭೆ ಅಧಿಕಾರಿ, ಸಿಬಂದಿ ಮುಂದೆ ಅಲವತ್ತುಕೊಂಡಿದ್ದಾರೆ.
ನಗರಸಭೆ ಅಧಿಕಾರಿಗಳು ಅಜ್ಜಿಯ ಹಿನ್ನೆಲೆ ವಿಚಾರಿಸಿದಾಗ ಈಕೆ ಆರು ಮಕ್ಕಳ ತಾಯಿ ಎಂಬುದು ಗೊತ್ತಾಗಿದೆ. ಮಕ್ಕಳ ಮನೆಯಲ್ಲಿ ಹಂಚಿಕೊಂಡು ದಿನ ದೂಡುತ್ತಿದ್ದ ಅಜ್ಜಿ ಪ್ರಸ್ತುತ ಜಿಡೆಕಲ್ಲಿನಲ್ಲಿರುವ ಪುತ್ರಿ ಕಮಲಾ ಅವರ ಜತೆ ವಾಸವಾಗಿದ್ದರು. ಮಕ್ಕಳು ನೋಡಿಕೊಳ್ಳುತ್ತಿಲ್ಲ ಎಂದು ದೂರಿಕೊಂಡ ಅವರು, ಆಸರೆ ನೀಡುವಂತೆ ಕೋರಿಕೊಂಡರು.
ಪರಿಸ್ಥಿತಿಯ ಗಂಭೀರತೆ ಅರಿತ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಅವರು ಅಜ್ಜಿಗೆ ನಗರಸಭೆಯ ಕೊಠಡಿಯಲ್ಲಿ ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸಿದರು. ಚಹಾ ತಿಂಡಿ ತರಿಸಿ ಕೊಟ್ಟರು. ಬಳಿಕ ನಗರಸಭೆ ಸಿಬಂದಿಯನ್ನು ಅಜ್ಜಿಯ ಮನೆಗೆ ಕಳುಹಿಸಿ ವಿಷಯ ತಿಳಿಸಿದರು. ಜತೆಗೆ ಪೊಲೀಸರಿಗೂ ಮಾಹಿತಿ ನೀಡಲಾಯಿತು.
ಸಿಬಂದಿ ಅಜ್ಜಿಯ ಮನೆಗೆ ವಿಷಯ ಮುಟ್ಟಿಸಿದರೂ ಯಾರೂ ಕರೆದುಕೊಂಡು ಹೋಗಲು ಬಂದಿಲ್ಲ. ಹೀಗಾಗಿ ನಾವು ಅಜ್ಜಿಯನ್ನು ಪೊಲೀಸರ ಸಹಕಾರದೊಂದಿಗೆ ಪುತ್ರಿಯ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟಿದ್ದೇವೆ. ಅದಕ್ಕೂ ಮೊದಲು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ಏನೂ ಆರೋಗ್ಯ ಸಮಸ್ಯೆ ಇಲ್ಲ ಎಂಬುದು ಖಾತ್ರಿಯಾದ ಮೇಲೆ ಮನೆಗೆ ಕಳುಹಿಸಿಕೊಟ್ಟಿದ್ದೇವೆ ಎಂದು ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ತಿಳಿಸಿದ್ದಾರೆ.