Advertisement

ಅಜ್ಜಿಯ ಕತೆ

10:06 PM Jul 06, 2019 | mahesh |

ಮೂರು ದಿನದ ರಜೆ ಸವೆಸಲು ಊರಿಗೆ ಬಂದಿದ್ದ ರಾಘವನಿಗೆ ಪಕ್ಕದ ಮನೆಯ ಸುಭದ್ರಮ್ಮ ಹೇಳುತ್ತಿದ್ದರು -
“”ನೋಡಪ್ಪ ರಾಘವ, ಮೀನಾಕ್ಷಿಯವರನ್ನು ಈ ಸಲ ಮಾತ್ರ ನೀನು ಬೆಂಗಳೂರಿಗೆ ಕರ್ಕೊಂಡು ಹೋಗ್ಲೆಬೇಕಪ. ನೀವ್‌ ಇಲ್ಲಿ ಇದ್ದಾಗ ಚೆನ್ನಾಗಿ ಓಡಾಡಿಕೊಂಡು ಇರ್ತಾರೆ. ಆದ್ರೆ ನೀವ್‌ ಹೋದ್ಮೇಲೆ ಆರೋಗ್ಯದ ಕಡೆ ಗಮನವೇ ಇರೋದಿಲ್ಲ. ವಯಸ್ಸಾಯ್ತು ನೋಡು, ಇನ್ನು ನಿಮ್ಮ ಜತೆ ಇದ್ರೆ ಚಂದನಪ್ಪ”

Advertisement

“”ಆಂಟಿ, ನಿಮ್ಮ ಕಾಳಜಿ ನಮ್ಗೆ ಅರ್ಥವಾಗುತ್ತೆ. ಆದ್ರೆ ಅಮ್ಮನೇ ಈ ಹಳ್ಳಿ ಬಿಟ್ಟು ಬರೋಕೆ ಕೇಳ್ಳೋಲ್ಲ. ಪ್ರತಿಸಲ ಬಂದಾಗ್ಲೂ ನಾನೂ ಇದನ್ನೇ ಹೇಳ್ಳೋದು. ಇಲ್ಲಿ ಒಬ್ರೇ ಯಾಕೆ ಒದ್ದಾಡ್ತೀರಿ, ನಮ್ಮ ಜತೆ ಬನ್ನಿ ಅಂತ. ಅಮ್ಮ ನಮ್ಮ ಮಾತೇ ಕೇಳ್ಳೋಲ್ಲ” ಅಸಹಾಯಕತೆ ವ್ಯಕ್ತ ಪಡಿಸಿದ ರಾಘವ.

“”ಹೌದು ಆಂಟಿ, ನಮಗೂ ಹೇಳಿ ಹೇಳಿ ಸಾಕಾಗಿದೆ” ದನಿಗೂಡಿಸಿದಳು ರಾಘವನ ಪತ್ನಿ ಸುಷ್ಮಿತಾ.
“”ಈ ಸಲ ನಾನೇ ಒಪ್ಪಿಸ್ತೀನಿ ಬಿಡಪ” ಎಂದು ಹೇಳಿದ ಸುಭದ್ರಮ್ಮ ಕೊಟ್ಟ ಮಾತಿನಂತೆ ರಾಘವನ ಅಮ್ಮ ಮೀನಾಕ್ಷಿಯನ್ನು ಒಪ್ಪಿಸಿದರು. ಮೀನಾಕ್ಷಿ ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳಲು ಸಿದ್ಧವಾದರು. ಮೀನಾಕ್ಷಿಯವರ ಬಟ್ಟೆಗಳು ದೊಡ್ಡ ಬ್ಯಾಗಿನೊಳಗೆ ಒತ್ತೂತ್ತಿ ಕುಳಿತೂ ಆಯಿತು.

ರಾತ್ರಿಯ ಕತ್ತಲ್ಲಲ್ಲಿ ಗಂಡನ ಭುಜಕ್ಕೊರಗಿ ಕುಳಿತಿದ್ದ ಸುಷ್ಮಿತಾ, “”ರೀ, ಹೇಗಾದ್ರೂ ಮಾಡಿ ಅತ್ತೆ, ಇಲ್ಲೇ ಇರೋ ಹಾಗೆ ಮಾಡಿ, ದಿಗುವಿನ ಸ್ಕೂಲು, ಮನೆ ಕೆಲ್ಸದ ನಡುವೆ ಇವ್ರ ಸೇವೆ ಮಾಡೋಕೆ ನಂಗೆ ಆಗಲ್ಲ. ಗಟ್ಟಿ ಇದಾರಲ್ಲ , ಒಂದ್‌ ನಾಲ್ಕ… ವರ್ಷ ಇಲ್ಲೇ ಇರ್ಲಿ ಬಿಡಿ” ಮನದಿಂಗಿತ ವ್ಯಕ್ತಪಡಿಸಿದಳು.

“”ನಾನೂ ಹಾಗೆ ಅಂದುಕೊಂಡಿದ್ದೀನಿ ಕಣೇ, ಟಿಕೆಟ್‌ ಸಿಕ್ಕಿಲ್ಲ ನೆಕ್ಸ್ಟ್ ಟೈಮ್‌ ಬಂದಾಗ ಕರ್ಕೊಂಡು ಹೋಗ್ತಿವಿ ಅಂತ ಸುಳ್ಳು ಹೇಳ್ತೀನಿ. ಸರಿ ಬಿಡು” ರಾಘವ ಹೇಳಿದ.
ಇವು ಯಾವುದರ ಅರಿವೂ ಇಲ್ಲದ ರಾಘವನ ಮಗ ದಿಗಂತ, “”ಅಜ್ಜಿ ಹೇಗೂ ನಮ್ಮ ಜತೆ ಇರ್ತಾರೆ, ಅಜ್ಜಿ ಹತ್ರ ದಿನವೂ ಒಂದೊಂದು ಹೊಸ ಕತೆ ಹೇಳಿಸ್ಕೋಬೇಕು” ಎಂದು ಮನದಲ್ಲೇ ಕನಸು ಕಾಣುತ್ತಿದ್ದ.

Advertisement

ಚೇತನ್‌ ಹಡ್ಲುಬೈಲು

Advertisement

Udayavani is now on Telegram. Click here to join our channel and stay updated with the latest news.

Next