Advertisement

ಅಜ್ಜಿ ಆಪರೇಷನ್‌ ನೆರವಿಗೆ ಮೊಮ್ಮಗನ ಮೊರೆ

06:48 PM Sep 20, 2021 | Nagendra Trasi |

ವಿಜಯಪುರ: ಅಜ್ಜಿಯ ಆರೈಕೆಗಾಗಿ ಮೊಮ್ಮಗನೊಬ್ಬ ಶಾಲೆ ಬಿಟ್ಟು ಕೂಲಿಗೆ ನಿಂತಿದ್ದಾನೆ. ಇದೀಗ ಕಾಲುಜಾರಿ ಬಿದ್ದು ಮೂಳೆ ಮುರಿತಕ್ಕೆ ಒಳಗಾಗಿರುವ ಅಜ್ಜಿಯೊಬ್ಬರ ಆಪರೇಷನ್‌ಗಾಗಿ ಆರ್ಥಿಕ ದುಸ್ಥಿತಿ ಎದುರಾಗಿದ್ದು, ಸಾರ್ವಜನಿಕರು ನೆರವಿಗೆ ಬನ್ನಿ ಎಂದು ಅಂಗಲಾಚುತ್ತಿದ್ದಾನೆ. ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ 20 ದಿನಗಳಿಂದ ಅಜ್ಜಿಗೆ ಚಿಕಿತ್ಸೆ ಕೊಡಿಸಿದ್ದಾನೆ.

Advertisement

ಇದೀಗ ಸರ್ಕಾರಿ ಆಸ್ಪತ್ರೆಯವರು ನಮ್ಮಲ್ಲಿ ಆಪರೇಷನ್‌ ವ್ಯವಸ್ಥೆ ಇಲ್ಲ ಬಿಎಲ್‌ಡಿಇ ಆಸ್ಪತ್ರೆಗೆ ಸೇರಿಸುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಆರ್ಥಿಕ ಶಕ್ತಿ ಇಲ್ಲದ ಮೊಮ್ಮಗ ಮಾನವೀಯ ನೆಲೆಯಲ್ಲಿ ಯಾರಾದರೂ ನನ್ನ ಅಜ್ಜಿಗೆ ನೆರವಾಗಿ ಎಂದು ದೈನೇಸಿತನದಲ್ಲಿ ನಿಂತಿದ್ದಾನೆ.

ಬಸವನಬಾಗೇವಾಡಿ ಪಟ್ಟಣದ 9ನೇ ತರಗತಿ ವಿದ್ಯಾರ್ಥಿ ಬಸವರಾಜ ದಿಂಡವಾರ ಎಂಬ ಬಾಲಕನೇ ತನ್ನ ಅಜ್ಜಿನ ಕಾಲು ಆಪರೇಷನ್‌ಗೆ ಆರ್ಥಿಕ ನೆರವು ನೀಡಿ ಎಂದು ಸಾರ್ವಜನಿಕರ ನೆರವಿಗೆ ಮನವಿ ಮಾಡಿರುವ ಬಾಲಕ. ತಾನು ತೊದಲು ನುಡಿ ಮಾತನಾಡುವ ಮುನ್ನವೇ ತಾಯಿಯನ್ನು ಕಳೆದುಕೊಂಡಿರುವ ಬಸವರಾಜ ಅಜ್ಜಿ ಶಾಂತಾಬಾಯಿ ದಿಂಡವಾರ (ತಂದೆಯ ತಾಯಿ) ಆರೈಕೆಯಲ್ಲೇ ಬೆಳೆದಿದ್ದಾನೆ. ಅಜ್ಜಿಯ ನಾಲ್ವರು ಮಕ್ಕಳಲ್ಲಿ ಇಬ್ಬರು ಬದುಕಿದ್ದಾರೆ.

ಅದರಲ್ಲಿ ಓರ್ವ ಬಾಲಕ ಬಸವರಾಜನ ತಂದೆ ಮದ್ಯ ವ್ಯಸನಿ ಶಿವಪುತ್ರ. ಅಜ್ಜಿಯ ಇನ್ನೊಬ್ಬ ಸರ್ಕಾರಿ ಶಾಲೆಯ ಶಿಕ್ಷಕ. ಇಷ್ಟಾದರೂ ಅಜ್ಜಿಯ ನೆರವಿಗೆ ಯಾರೂ ಬಂದಿಲ್ಲ ಎಂದು ಕೊರಗಿದೆ. ಅಜ್ಜಿಯ ಕಾಳಜಿಯಲ್ಲಿ ಬೆಳೆದಿರುವ ಬಾಲಕ ಬಸವರಾಜ ಇದೀಗ ಮನೆಯ ಜವಾಬ್ದಾರಿ ಹೊರುವ ಸ್ಥಿತಿ ಬಂದಿದೆ. ವಯಸ್ಸಾದ ಅಜ್ಜಿ ದುಡಿಯಲಾಗುತ್ತಿಲ್ಲ, ಹೀಗಾಗಿ ನಸೆಯಲ್ಲೇ ಜೀವಿಸುವ ತಂದೆ ಹಾಗೂ ಆತನ ತಾಯಿಯನ್ನು ಸಲಹುವ ಹೊಣೆ ಈ ವಿದ್ಯಾರ್ಥಿ ಮೇಲೆ ಬಿದ್ದಿದೆ.

ಹೀಗಾಗಿ ಖಾಸಗಿ ಶಾಲೆಗೆ 9ನೇ ತರಗತಿಗೆ ಪ್ರವೇಶ ಪಡೆದಿದ್ದರೂ ಮನೆಯ ನಿರ್ವಹಣೆಯ ನೊಗ ಎಳೆಯುವುದಕ್ಕಾಗಿ ಶಾಲೆಯಿಂದ ಬರುತ್ತಲೇ ಸಂಜೆ 5ರಿಂದ 9ರವರೆಗೆ ಬೀದಿಬದಿ ಮಿರ್ಚಿ-ಭಜಿ ಮಾಡುವ ಅಂಗಡಿಯಲ್ಲಿ 200 ರೂ. ಕೂಲಿ ಮಾಡಿ ಕುಟುಂಬ ನಿರ್ವಹಿಸುತ್ತಿದ್ದಾನೆ. ಬಸವರಾಜ ಬಳಿ ಬೇಸಿಕ್‌ ಮೊಬೈಲ್‌ ಸೆಟ್‌ ಇದ್ದು, ಸ್ಮಾರ್ಟ್‌ ಫೋನ್‌ ಇಲ್ಲದ ಕಾರಣ ಕೋವಿಡ್‌ ಸಂದರ್ಭದಲ್ಲಿ ಆನ್‌ ಲೈನ್‌ ತರಗತಿ ನಡೆಸಿದರೂ ಹಾಜರಾಗಲು ಸಾಧ್ಯವಾಗಿಲ್ಲ. ಹಲವು ಸಂದರ್ಭದಲ್ಲಿ ಕುಟುಂಬದ ನಿರ್ವಹಣೆಗಾಗಿ ಶಾಲೆಯನ್ನೇ ಬಿಟ್ಟು ಕೂಲಿ ಕೆಲಸ ಮಾಡುತ್ತಿರುವ ಕಾರಣ ಈತ ಶೈಕ್ಷಣಿಕ ಪ್ರಗತಿಗೂ ವ್ಯತಿರಿಕ್ತ ಪರಿಣಾಮ ಬೀರಿದೆ.

Advertisement

ಇಂತ ದುಸ್ಥಿತಿಯ ಸಂದರ್ಭದಲ್ಲೇ ತನ್ನನ್ನು ಸಾಕಿ-ಸಲಹಿದ ಅಜ್ಜಿ 20 ದಿನಗಳ ಹಿಂದೆ ಮಳೆಯಲ್ಲಿ ನಡೆದುಕೊಂಡು ಹೋಗುವ ಜಾರಿಬಿದ್ದು ಕಾಲು ಮುರಿದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಎಂದು ಅಜ್ಜಿಯನ್ನು ಚಿಕಿತ್ಸೆಗಾಗಿ ವಿಜಯಪುರ ಸರ್ಕಾರಿ ಜಿಲ್ಲಾ ಸ್ಪತ್ರೆಗೆ ದಾಖಲಿಸಿದ್ದಾನೆ. ಇದಲ್ಲದೇ ಎರಡು ಬಾರಿ ರಕ್ತ ಹಾಕಿಸಲು 3100 ರೂ. ಖರ್ಚು ಮಾಡಿಸಿದ್ದು, ಇದಕ್ಕೆ ಆಸ್ಪತ್ರೆಯ ಒಳ ರೋಗಿಗಳು ನೆರವಾಗಿದ್ದಾರೆ.

ಮುರಿದ ಕಾಲಿಗೆ ಹಾಕಲೆಂದು ರಾಡ್‌ ತರಿಸಲು ಎರಡು ದಿನಗಳ ಹಿಂದೆ 5500 ರೂ. ಹಣ ಕೊಡಿಸಿದ್ದಾರೆ. ತನ್ನಲ್ಲಿ ಹಣ ಹೊಂದಿಸಲಾಗಿತ್ತು. ಇದಕ್ಕಾಗಿ ತಾನು ಕೆಲಸ ಮಾಡುವ ಹೊಟೇಲ್‌ ಮಾಲೀಕ ಮೆಹಬೂಬ್‌ ಬಾಗವಾನ್‌ ಬಳಿ ಹಣ ಹೊಂದಿಸಿದ್ದಾನೆ. ಮವಾರ ಸೆ. 20ರಂದು ಅಜ್ಜಿಯ ಕಾಲಿಗೆ ರಾಡ್‌ ಅಳವಡಿಸಲು ಆಪರೇಷನ್‌ ಇದೆ. ಇನ್ನು ಆಪರೇಷನ್‌ಗೆ ಹೆಚ್ಚಿನ ಹಣ ಕೇಳಿದರೆ ಹೊಂದಿಸುವುದು ಎಲ್ಲಿಂದ ಎಂಬ ಆತಂಕದಲ್ಲಿದ್ದಾಗಲೇ ಸೆ. 19ರಂದು ಮಧ್ಯಾಹ್ನ ಬಾಲಕ ಬಸವರಾಜ ಬಳಿ ಬಂದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ನಮ್ಮಲ್ಲಿ ಆಪರೇಷನ್‌ ಮಾಡಲು ಕೋವಿಡ್‌ ತೊಡಕಾಗಿದೆ.

ಕೂಡಲೇ ನೀನು ಬಿಎಲ್‌ ಡಿಇ ಆಸ್ಪತ್ರೆಗೆ ನಿನ್ನ ಅಜ್ಜಿಯನ್ನು ಸ್ಥಳಾಂತರ ಮಾಡು ಎಂದು ಸೂಚಿಸಿದ್ದಾರೆ. ಅಜ್ಜಿಗೆ ಶಿಕ್ಷಕ ವೃತ್ತಿ ಮಾಡುವ ಮಗನಿದ್ದರೂ ಆಕೆಯ ಆಸ್ಪತ್ರೆಯ ಖರ್ಚು ಭರಿಸಲು ಮುಂದೆ ಬಂದಿಲ್ಲ. ಬದಲಾಗಿ ಆಗೊಮ್ಮೆ ಈಗೊಮ್ಮೆ ಪುಡಿಗಾಸು ನೀಡಿ ಹೋಗುತ್ತಿದ್ದು, ತಾಯಿಯ ಆರೈಕೆಗೆ ನೇರವಾಗಿ ಮುಂದಾಗಿಲ್ಲ. ತನ್ನ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸಿಲ್ಲ ಹಾಗೂ ಸರ್ಕಾರಿ ಸೇವೆಯಲ್ಲಿದ್ದರೂ ತನ್ನನ್ನು ಸುಸಜ್ಜಿತ ಖಾಸಗಿ ಆಸ್ಪತ್ರೆಗೆ ದಾಖಲಿಸಿ,
ಚಿಕಿತ್ಸೆ ಕೊಡಿಸಲು ಮುಂದಾಗಿಲ್ಲ ಎಂದು ಅಜ್ಜಿ ಕಣ್ಣೀರು ಹಾಕುತ್ತಿದೆ.

ಇತ್ತ ಮೊಮ್ಮಗ ಅಜ್ಜಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸುವ ಆರ್ಥಿಕ ಶಕ್ತಿ ಇಲ್ಲದೇ ಮರಳಿ ಮನೆಗೆ ಕರೆದೊಯ್ಯಲು ನಿರ್ಧರಿಸಿದ್ದಾನೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಶಕ್ತಿ ಇಲ್ಲವೆಂದೇ ನಾನು ಅಜ್ಜಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದೇನೆ. ಸರ್ಕಾರಿ ಆಸ್ಪತ್ರೆಯವರು, ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಇದರಿಂದಾಗಿ ದೊಡ್ಡ ಮಟ್ಟದಲ್ಲಿ ಹಣ ಹೊಂದಿಸಲು ನನ್ನಿಂದ ಅಸಾಧ್ಯವಾಗಿದ್ದು, ದಿಕ್ಕು ತೋಚದಾಗಿದೆ. ಈ ಆಸ್ಪತ್ರೆಯ ಸಹವಾಸವೇ ಸಾಕು. ನಾನು ನನ್ನ ಅಜ್ಜಿಯನ್ನು ಮನೆಗೆ ಕರೆದೊಯ್ದು ಜೋಪಾನ ಮಾಡುತ್ತೇನೆ ಎನ್ನುತ್ತಿದ್ಧಾನೆ.

ಪ್ರಸ್ತುತ ಸಂದರ್ಭದಲ್ಲಿ ಸಂಬಂಧಗಳ ಬೆಲೆಯೇ ಗೊತ್ತಿಲ್ಲದೇ ಹೆತ್ತವರ ಹಣದಲ್ಲಿ ಮೋಜು ಮಾಡುವ ಮಕ್ಕಳ ಮಧ್ಯೆ ಈ ಬಾಲಕ ವಿಭಿನ್ನವಾಗಿ ಗೋಚರಿಸುತ್ತಿದ್ದಾನೆ. ಮಕ್ಕಳೆ ತಾಯಿಯ ಆರೋಗ್ಯ ರಕ್ಷಣೆ ಮಾಡದೇ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ. ಇಷ್ಟಾದರೂ ತನ್ನ ಶಿಕ್ಷಣಕ್ಕೆ ಕುತ್ತು ಬಂದರೂ ಸರಿ ಬಡತನವನ್ನು ಎದುರಿಸಲು ಕೂಲಿ ಮಾಡಿ ಅಜ್ಜಿಯ ಆರೋಗ್ಯ ರಕ್ಷಣೆ ಮಾಡುತ್ತೇನೆ ಎನ್ನುತ್ತಿದ್ದಾನೆ. ಕಿರಿಯ ವಯಸ್ಸಿನಲ್ಲೇ ತನ್ನಲ್ಲಿರುವ
ಸಂಬಂಧಗಳ ಬಾಂಧವ್ಯ ಹಾಗೂ ವೃದ್ಧ ಅಜ್ಜಿಯ ಸೇವೆಯಿಂದಲೇ ಬಸವರಾಜ ಮಾದರಿ ಎನಿಸಿದ್ದಾನೆ. ಇಂತ ಮಕ್ಕಳ ನೆರವಿಗೆ ನಿಲ್ಲುವುದು ಸಮಾಜದ ಕರ್ತವ್ಯ. ಬಸವರಾಜನ ದಿಂಡವಾರ ಸಂಪರ್ಕಕ್ಕಾಗಿ ಮೊ.8660175079.

ನನ್ನ ತಾಯಿಯ ಆಪರೇಷನ್‌ಗೆ ಬೇಕಿರುವ ರಾಡ್‌, ರಕ್ತಕ್ಕೆಲ್ಲ ನನ್ನ ಅಣ್ಣನ ಮಗ ಬಸವರಾಜನೇ ಹಣ ನೀಡಿದ್ದಾನೆ. ನನಗೂ ವಯಸ್ಸಾಗಿದೆ, ತಾಯಿಯ ಆರೈಕೆಗಾಗಿ ನನ್ನ ಕೈಲಾದಷ್ಟು ನಾನು ಸಹಾಯ ಮಾಡಿದ್ದೇನೆ. ಅವರಿಗೆ ಬುತ್ತಿ ಕಳಿಸುತ್ತಿದ್ದು, ನನ್ನ ಮಗನ್ನೂ  ಸಹಾಯಕ್ಕೆ ಕಳಿಸುತ್ತೇನೆ.
ಯಮನಪ್ಪ ಹೊಸೂರ
ಶಿಕ್ಷಕ ವೃತ್ತಿಯ ಮಗ

ನನ್ನನ್ನು ತಾಯಿಗಿಂತ ಹೆಚ್ಚಾಗಿ ಸಾಕಿ, ಬೆಳೆಸಿದ ಅಜ್ಜಿಯನ್ನು ಆರೈಕೆ ಮಾಡುವುದು ನನ್ನ ಕರ್ತವ್ಯ. ವಿಜಯಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ಕಾಲು ಮುರಿದಿರುವ ಅಜ್ಜಿಯ ವೈದ್ಯಕೀಯ ವೆಚ್ಚ ಭರಿಸಲು ನನ್ನಲ್ಲಿ ಆರ್ಥಿಕ ಶಕ್ತಿ ಇಲ್ಲ. ಹೊಟೇಲ್‌ ಕೂಲಿ ಕೆಲಸದಿಂದ ಸಂಪಾದಿಸುವ ಕೂಲಿ ಹಣ ಖಾಲಿಯಾಗಿದೆ. ಯಾರಾದರೂ ನನ್ನ ಅಜ್ಜಿಯ ಆಪರೇಷನ್‌ಗೆ ನೆರವಾಗಬೇಕು.
ಬಸವರಾಜ ಶಿವಪುತ್ರಪ್ಪ ದಿಂಡವಾರ
ಅಜ್ಜಿಯ ಆರೈಕೆಯಲ್ಲಿರುವ ಮೊಮ್ಮಗ
ಬಸವನಬಾಗೇವಾಡಿ

ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next