ನವದೆಹಲಿ: ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ನೇತೃತ್ವದ ಸರ್ಕಾರ ಕ್ರಿಮಿನಲ್ ಗಳನ್ನು ಮಟ್ಟಹಾಕಲು ಬುಲ್ಡೋಜರ್ ಅಸ್ತ್ರ ಪ್ರಯೋಗಿಸಿದ್ದು ಭಾರೀ ಸದ್ದು ಮಾಡಿರುವ ಬೆನ್ನಲ್ಲೇ ಇದೀಗ ಕಳೆದ ವಾರ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ರಾಜಕಾರಣಿಯೊಬ್ಬರ ಅನಧಿಕೃತ ಮನೆಯನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಎಸ್‌ಪಿ ನಾಯಕನ ಕಾರನ್ನೇ 500 ಮೀಟರ್ ದೂರ ಎಳೆದೊಯ್ದ ಟ್ರಕ್ : ಅಪಘಾತದ ವಿಡಿಯೋ ವೈರಲ್
ನೋಯ್ಡಾದ ಹೌಸಿಂಗ್ ಸೊಸೈಟಿಯ ಮಹಿಳೆಯೊಬ್ಬರ ಮೇಲೆ ಬಿಜೆಪಿಯ ಕಿಸಾನ್ ಮೋರ್ಚಾದ ಸದಸ್ಯ ಶ್ರೀಕಾಂತ್ ತ್ಯಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿತ್ತು. ಈ ಬಗ್ಗೆ ತ್ಯಾಗಿ ವಿರುದ್ಧ ಪೊಲೀಸರು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಸೊಸೈಟಿಯ ಆವರಣದಲ್ಲಿ ತಾಳೆ ಮರ ನೆಡುವ ವಿಚಾರದಲ್ಲಿ ರೆಸಿಡೆನ್ಶಿಯಲ್ ಸೊಸೈಟಿಯ ನಿವಾಸಿ ಮಹಿಳೆಯೊಬ್ಬರ ಮೇಲೆ ತ್ಯಾಗಿ ಹಲ್ಲೆ ನಡೆಸಿರುವುದಾಗಿ ವರದಿ ತಿಳಿಸಿದೆ. ಎಫ್ ಐಆರ್ ದಾಖಲಾದ ನಂತರ ತ್ಯಾಗಿ ತಲೆ ಮರೆಸಿಕೊಂಡಿದ್ದ.
ನೋಯ್ಡಾ ಸೆಕ್ಟರ್ 93ರಲ್ಲಿನ ಹೌಸಿಂಗ್ ಕಾಂಪ್ಲೆಕ್ಸ್ ನಲ್ಲಿ ನಡೆದ ಘಟನೆಯ ವಿಡಿಯೋ ವೈರಲ್ ಆದ ಬಳಿಕ ಸಾರ್ವಜನಿಕರಿಂದ ತೀವ್ರ ಆಕ್ರೋಶವ್ಯಕ್ತವಾಗಿತ್ತು. ತ್ಯಾಗಿ ಜೊತೆಗೆ ಆಗಮಿಸಿದ್ದ ಏಳು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ತ್ಯಾಗಿಯ ಎಲ್ಲಾ ಕಾನೂನು ಬಾಹಿರ ಆಸ್ತಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ಅತಿಕ್ರಮಣದ ಸ್ಥಳದಲ್ಲಿದ್ದ ತ್ಯಾಗಿ ನಿವಾಸವನ್ನು ನೆಲಸಮ ಮಾಡಲಾಗಿದೆ ಎಂದು ನೋಯ್ಡಾ ಪೊಲೀಸ್ ಕಮಿಷನರ್ ಅಲೋಕ್ ಸಿಂಗ್ ತಿಳಿಸಿದ್ದಾರೆ.