Advertisement

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

05:37 PM Mar 30, 2021 | Team Udayavani |

ಮೊನ್ನೆ ದೊಡ್ಡಮ್ಮನ ಮಗಳು ತನ್ನ ಅಣ್ಣನ ಮದುವೆಯ ಲಗ್ನಪತ್ರಿಕೆ ಕೊಡಲು ಬಂದಿದ್ದಳು. ಅದರಲ್ಲಿ ನನ್ನ ಹೆಸರು ಹೀಗಿತ್ತು: “ಅಂಬ್ರೆಷ ಸಾಹೊ ಹಯಳ ಇವರಿಗೆ…’ ಅದನ್ನು ನೋಡಿದೊಡನೆ ತಲೆ ತಿರುಗುವದೊಂದೇ ಬಾಕಿ. ಎಂಜಿನಿಯರಿಂಗ್‌ ಮುಗಿಸಿರುವ ಆಕೆ ಇಷ್ಟು ತಪ್ಪು ತಪ್ಪಾಗಿ ಕನ್ನಡ ಬರೆದಿರುವ ಬಗ್ಗೆ ಬೇಸರವಾಯಿತು. ಅದನ್ನು ನನ್ನ ನೋಟದಿಂದಲೇ ಅರ್ಥ ಮಾಡಿಕೊಂಡ ಅವಳು- ಅಣ್ಣಾ, ಇಂಗ್ಲೀಷ್‌ನಲ್ಲಿ ಬರೆಯೋಣವೆಂದೆ. ನೀನು ಕನ್ನಡಪ್ರೇಮಿಯಾಗಿರುವುದರಿಂದ ನಿನಗೆ ಇಂಪ್ರಸ್‌ ಆಗಲಿಯೆಂದು ಹೀಗೆ ಬರೆದೆ, ತಪ್ಪಾಗಿದ್ದರೆ ಹೊಟ್ಟೆಯಲ್ಲಿ ಹಾಕಿಕೋ ಅಂದಳು.

Advertisement

ಪ್ರಾಥಮಿಕ ಹಂತದಿಂದಲೇ ಇಂಗ್ಲಿಷನ್ನೇ ಮೊದಲ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡವರಿಗೆ ಕನ್ನಡದ ಬಗ್ಗೆ ಅಲಕ್ಷ್ಯವಿರುತ್ತದೆ. ಪರಿಣಾಮ, ಮಕ್ಕಳ ಪಾಲಿಗೆ ಕನ್ನಡ ಎಂಬುದು ಕಬ್ಬಿಣದ ಕಡಲೆಯಾಗುತ್ತದೆ. ನನಗೆ ಅಜ್ಜನನೆನಪು ಬಿಟ್ಟೂ ಬಿಡದೆ ಕಾಡುವುದು ಈ ಸಂದರ್ಭದಲ್ಲಿಯೇ. ಅಪ್ಪಟ ಕನ್ನಡ ಪ್ರೇಮಿಯಾಗಿದ್ದ ಅಜ್ಜ, ತುಂಬಾ ಸ್ಪಷ್ಟವಾದಕನ್ನಡ ಮಾತಾಡುತ್ತಿದ್ದ. ರೇಡಿಯೋ ಆತನ ನೆಚ್ಚಿನ ಸಂಗಾತಿಯಾಗಿತ್ತು. ಹಗಲು-ರಾತ್ರಿಯೆನ್ನದೆ ಅದನ್ನು ಕಿವಿಗಚ್ಚಿಯೇ ಕೇಳುತಿದ್ದ. ಹಾಗಾಗಿಯೇ ಅವರ ಕನ್ನಡ ಉಚ್ಚಾರಣೆ ಶುದ್ಧವಾಗಿತ್ತು. ನಾವು ಕನ್ನಡ ಮಾತಾಡಲು, ಬರೆಯಲು ಕಲಿತದ್ದು ಅಜ್ಜನನ್ನು ನೋಡಿಯೇ.

ನನ್ನ ತಾತನ ಇನ್ನೊಂದು ವಿಶೇಷತೆ ಏನೆಂದರೆ, ಮನೆಖರ್ಚಿನ ವಿವರ ಬರೆದಿಡುವಾಗರಲ್ಲಾ ಕನ್ನಡದ ಅಂಕಿಗಳನ್ನೇ ಬಳಸುತಿದ್ದ. ಸಂಖ್ಯೆಗಳನ್ನು ಯಾವತ್ತೂ ಇಂಗ್ಲಿಷ್‌ನಲ್ಲಿಬರೆಯುತ್ತಿರಲಿಲ್ಲ. ನಿಜ ಹೇಳಬೇಕೆಂದರೆ, ಅವು ನಮಗೆ ಎಷ್ಟೋ ಬಾರಿ ಅರ್ಥವೇ ಆಗುತ್ತಿರಲಿಲ್ಲ. ಆರು ಮತ್ತು ಒಂಭತ್ತು ಅಂಕಿಗಳನ್ನು ಅರ್ಥ ಮಾಡಿಕೊಳ್ಳುವ ವಿಷಯವಾಗಿನಮಗೆ ತುಂಬಾ ಗೊಂದಲವಿತ್ತು. ಈ ವಿಷಯವಾಗಿ ಅದೆಷ್ಟು ಸಲ ಉಗಿಸಿಕೊಂಡಿದ್ದೆನೋ? ಈ ತೆರನಾಗಿ ಕನ್ನಡದ ಬಲವಾದ ಬುನಾದಿ ಬಿದ್ದಿದ್ದರಿಂದಲೇ ಈಗ ಕನ್ನಡವನ್ನು ಸ್ಪುಟವಾಗಿ, ತಪ್ಪಿಲ್ಲದೆ ಓದಿ ಬರೆಯಲು ಸಾಧ್ಯವಾಗಿದೆ.

 

-ಅಂಬ್ರೀಶ್‌ ಎಸ್‌. ಹೈಯ್ಯಾಳ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next