Advertisement

ಅಯೋಧ್ಯೆಯೆಲ್ಲೆಡೆ ರಾಮಸ್ಮರಣೆ

06:00 AM Nov 08, 2018 | |

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಚರ್ಚೆ ತೀವ್ರಗೊಂಡಿರುವ ನಡುವೆಯೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು, ದೀಪಾವಳಿ ಸಂಭ್ರಮದಲ್ಲೇ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. 

Advertisement

ರಾಮ ಮಂದಿರ ನಿರ್ಮಾಣವಾಗುವುದಕ್ಕಿಂತ ಮೊದಲೇ ಭವ್ಯವಾದ ಶ್ರೀರಾಮನ ಪ್ರತಿಮೆ ನಿರ್ಮಾಣ ಮಾಡುವ ಕುರಿತು ಅವರು ಬುಧವಾರ ಅಧಿಕೃತವಾಗಿ ಘೋಷಿಸಿದ್ದಾರೆ. 

ನರಕ ಚತುರ್ದಶಿ ದಿನವಾದ ಮಂಗಳವಾರ ಯೋಗಿ ಅವರು ಫೈಜಾಬಾದ್‌ ಜಿಲ್ಲೆಯನ್ನು ಅಯೋಧ್ಯೆ ಎಂದು ನಾಮಕರಣ ಮಾಡಿದ್ದು, ಅದರ ಬೆನ್ನಲ್ಲೇ ಬುಧವಾರ, ಅಯೋಧ್ಯೆ ಸಮೀಪ ಶ್ರೀರಾಮನ ಹೆಸರಿನಲ್ಲೇ ಹೊಸ ವಿಮಾನ ನಿಲ್ದಾಣ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ, ನೂತನವಾಗಿ ನಿರ್ಮಿಸಲು ಉದ್ದೇಶಿಸಲಾಗಿರುವ ವೈದ್ಯಕೀಯ ಕಾಲೇಜಿಗೆ  ಮರ್ಯಾದಾ ಪುರುಷೋತ್ತಮ ಶ್ರೀರಾಮನ ತಂದೆ ದಶರಥನ ಹೆಸರನ್ನು ಇರಿಸಲಾಗುತ್ತದೆ ಎಂದು ಹೇಳಿದ್ದಾರೆ. 

ದೀಪಾವಳಿ ಪ್ರಯುಕ್ತ ಹನುಮಾನ್‌ ಗಾಹಿì ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಪತ್ರಕರ್ತರೊಡನೆ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್‌, ರಾಮನ ಪ್ರತಿಮೆ ನಿರ್ಮಾಣದ ಬಗ್ಗೆ ಎರಡು ಸ್ಥಳಗಳನ್ನು ಪರಿಶೀಲಿಸಲಾಗಿದೆ ಎಂದು ಹೇಳಿದ್ದಾರೆ.

ರಾಮನನ್ನು ದೇಗುಲದಲ್ಲಿ ಪೂಜೆ ಮಾಡಲಾಗುತ್ತದೆ. ಆದರೆ ದೊಡ್ಡದಾದ ರಾಮನ ಪ್ರತಿಮೆಯನ್ನು ದೂರದಿಂದಲೇ ವೀಕ್ಷಿಸಲು ಸಾಧ್ಯವಾಗುವಂತೆ ಈ ನಿರ್ಧಾರ ಕೈಗೊಂಡಿದ್ದೇವೆ. ಮೂರ್ತಿ ನಿರ್ಮಿಸುವ ನಮ್ಮ ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಅದಕ್ಕಾಗಿ ಸಮೀಕ್ಷೆಗಳನ್ನು ನಡೆಸಲಾಗಿದೆ. ನಿರ್ಮಾಣ ತಂತ್ರಜ್ಞರು ಹಲವು ವಿನ್ಯಾಸಗಳ ಮಾದರಿಯನ್ನು ನೀಡಿ ಸಲಹೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ವಿವರಿಸಿದ್ದಾರೆ. 

Advertisement

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಅಯೋಧ್ಯೆಯಲ್ಲಿ ರಾಮ ಮಂದಿರ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ ಎಂದು ಹೇಳಿದ್ದಾರೆ. ಕಾನೂನು ಮತ್ತು ಸಂವಿಧಾನಕ್ಕೆ ಅನುಗುಣವಾಗಿಯೇ ಈ ವಿವಾದಕ್ಕೆ ಪರಿಹಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 

ಸೀರೆಯುಟ್ಟು ಬಂದರು
ದೀಪಾವಳಿ ಸಂಭ್ರಮದಲ್ಲಿ ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಕಿಮ್‌ ಜಾಂಗ್‌ ಅವರು ಭಾರತೀಯ ಸಂಪ್ರದಾಯದ ಪ್ರಕಾರ ಸೀರೆಯುಟ್ಟು ಕಾರ್ಯಕ್ರಮಕ್ಕೆ ಬಂದಿದ್ದರು. ಅಯೋಧ್ಯೆಯಲ್ಲಿ ರಾಣಿ ಹ್ಯೂ ಸಮಾಧಿಗೆ ಗೌರವ ಅರ್ಪಿಸುವ ಮೂಲಕ ಕಿಮ್‌ ಜಾಂಗ್‌ ತಮ್ಮ ಪ್ರವಾಸ ಆರಂಭಿಸಿದರು. ಮುಖ್ಯಮಂತ್ರಿ ಆದಿತ್ಯನಾಥ್‌ ಜತೆಗೆ ಅಯೋಧ್ಯೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಭೂಮಿ ಪೂಜೆಯಲ್ಲಿಯೂ ಅವರು ಭಾಗವಹಿಸಿದರು. ಬಳಿಕ ರಾಮ ಕಥಾ ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾದರು. ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಮ್‌ ಜಾಂಗ್‌, ಐತಿಹಾಸಿಕವಾಗಿ ದಕ್ಷಿಣ ಕೊರಿಯಾ ಮತ್ತು ಭಾರತದ ನಡುವೆ ಇರುವ ಬಾಂಧವ್ಯಗಳನ್ನು ಪ್ರಸ್ತಾಪಿಸಿದರು. ಬುಧವಾರ ಅವರು ಆಗ್ರಾದಲ್ಲಿರುವ ತಾಜ್‌ಮಹಲ್‌ಗ‌ೂ ಭೇಟಿ ನೀಡಿದರು.

ಗಿನ್ನೆಸ್‌ ದಾಖಲೆ ಸೇರಿದ 3 ಲಕ್ಷ ಹಣತೆ
ಸರಯೂ ನದೀ ತೀರದಲ್ಲಿ ಸಿಎಂ ಯೋಗಿ ನೇತೃತ್ವದಲ್ಲಿ ಮಂಗಳವಾರ ಮೂರು ಲಕ್ಷ ಹಣತೆಗಳನ್ನು ಉರಿಸಲಾಗಿದ್ದು, ಐದು ನಿಮಿಷಗಳ ಕಾಲ 3,01,152 ದೀಪಗಳು ಬೆಳಗಿ ಗಿನ್ನೆಸ್‌ ದಾಖಲೆಗೆ ಸೇರ್ಪಡೆಯಾದವು. ಭಾರತದಲ್ಲಿರುವ ಗಿನ್ನೆಸ್‌ ದಾಖಲೆಗಳ ಪ್ರತಿನಿಧಿ ರಿಶಿ ನಾಥ್‌ ಅವರೂ ಈ ದಾಖಲೆಗೆ ಸಾಕ್ಷಿಯಾಗಿದ್ದು, ಪರಿಶೀಲನೆ ಬಳಿಕ ಈ ಬಗ್ಗೆ ಘೋಷಣೆ ಮಾಡಿದರು. ದಕ್ಷಿಣ ಕೊರಿಯಾದ ಅಧ್ಯಕ್ಷರ ಪತ್ನಿಯೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ 3.5 ಲಕ್ಷ ದೀಪಗಳನ್ನು ಉರಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಕಳೆದ ವರ್ಷದ ದೀಪಾವಳಿ ಸಂದರ್ಭಗಳಲ್ಲಿ 1.75 ಲಕ್ಷ ದೀಪಗಳನ್ನು ಬೆಳಗಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next