Advertisement

ಗ್ರಾಮೀಣ ಅಂಚೆ ನೌಕರರ ವೇತನ ಹೆಚ್ಚಳಕ್ಕೆ ಸಮ್ಮತಿ

05:25 AM Jun 07, 2018 | Team Udayavani |

ಹೊಸದಿಲ್ಲಿ/ಬೆಂಗಳೂರು : ಸಂಬಳ ಏರಿಕೆಗಾಗಿ ಹದಿನಾರು ದಿನಗಳಿಂದ ಮುಷ್ಕರ ಹೂಡಿದ್ದ ಗ್ರಾಮೀಣ ಅಂಚೆ ನೌಕರರಿಗೆ ಖುಷಿಯ ಸುದ್ದಿಯಿದು. ಅವರ ಸಂಬಳವನ್ನು ಮೂರು ಪಟ್ಟು ಏರಿಕೆ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಅದು 2016 ಜ.1ರಿಂದಲೇ ಪೂರ್ವಾನ್ವಯವಾಗಲಿದೆ. 14,500 ರೂ. ವರೆಗೆ ವೇತನ ಏರಿಕೆ ಮಾಡಲಾಗಿದ್ದು, ಅನುಷ್ಠಾನಗೊಂಡ ಬಳಿಕ ಬಾಕಿ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿ ಮಾಡಲಾಗುತ್ತದೆ. ಪ್ರಸ್ತುತ 2,295 ರೂ. ಮಾಸಿಕ ಸಂಬಳ ಪಡೆಯುತ್ತಿರುವ ಅಂಚೆ ನೌಕರರಿಗೆ 10 ಸಾವಿರ ರೂ., 2,745 ರೂ. ಸಂಬಳ ಪಡೆಯುತ್ತಿರುವವರಿಗೆ 12 ಸಾವಿರ ರೂ. ಹಾಗೂ 4,115 ರೂ. ಸಂಬಳ ಪಡೆಯುತ್ತಿದ್ದವರು ಮಾಸಿಕ 14,500 ರೂ. ಪಡೆಯಲಿದ್ದಾರೆ. ಸದ್ಯ 3.7 ಲಕ್ಷ ಗ್ರಾಮೀಣ ಅಂಚೆ ನೌಕರರಿದ್ದು, 1.3 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳಿವೆ.

Advertisement

ಭತ್ತೆಯೂ ಏರಿಕೆ
ವಾರ್ಷಿಕ ಶೇ. 3 ವೇತನ ಏರಿಕೆಗೂ ಅನುಮತಿ ನೀಡಲಾಗಿದೆ. ಇದು ಪ್ರತಿ ವರ್ಷ ಜ. 1 ಅಥವಾ ಜು. 1ರಂದು ಜಾರಿಗೆ ಬರಲಿದೆ. ಗ್ರಾಮೀಣ ಅಂಚೆ ನೌಕರರ ಕನಿಷ್ಠ ವೇತನ ಮಾಸಿಕ 10 ಸಾವಿರ ರೂ. ಹಾಗೂ ಗರಿಷ್ಠ 35,480 ರೂ.ಗೆ ನಿಗದಿಸಲಾಗಿದೆ.

ಪಾಳಿ, ಹುದ್ದೆ ಬದಲು
3 ಗಂಟೆ, 3.5 ಗಂಟೆ, 4 ಗಂಟೆ, 4.5 ಗಂಟೆ ಮತ್ತು 5 ಗಂಟೆ ಪಾಳಿಯಲ್ಲಿ ಅಂಚೆ ನೌಕರರು ಕಾರ್ಯನಿರ್ವಹಿಸುತ್ತಾರೆ. ಈ ಹಿಂದೆ 11 ಸ್ಲ್ಯಾಬ್‌ ಗಳಿತ್ತು. ಇದನ್ನು ಈಗ ಮೂರು ವಿಭಾಗಗಳನ್ನಾಗಿ ಮಾಡಲಾಗಿದ್ದು, ಶಾಖೆ ಅಂಚೆ ಮಾಸ್ಟರ್‌ ಮತ್ತು ಸಹಾಯಕ ಶಾಖೆ ಅಂಚೆ ಮಾಸ್ಟರ್‌ ಎಂದು ಎರಡೇ ಹುದ್ದೆಗಳನ್ನು ಸೃಜಿಸಲಾಗಿದೆ. 12 ಸಾವಿರ ಸಂಬಳ ಪಡೆಯುವವರು 4 ಗಂಟೆಗಳ ಪಾಳಿ, 14,500 ಸಂಬಳ ಪಡೆಯುವ ನೌಕರರು 5 ಗಂಟೆ ಕೆಲಸ ಮಾಡಬೇಕಾಗುತ್ತದೆ.

ಪ್ರಸ್ತುತ ಅಂಚೆ ಇಲಾಖೆ ನೌಕರರಿಗೆ ನೀಡಲಾಗುತ್ತಿದ್ದ ಸಂಬಳ ಅವರ ಜೀವನ ನಿರ್ವಹಣೆಗೆ ಸಾಲುತ್ತಿರಲಿಲ್ಲ. ಈ ಸಂಬಳ ಏರಿಕೆಯಿಂದ ಅಂಚೆ ನೌಕರರ ಜೀವನ ಮಟ್ಟ  ಗಮನಾರ್ಹ ವಾಗಿ ಸುಧಾರಿಸಲಿದೆ.
– ಮನೋಜ್‌ ಸಿನ್ಹಾ, ಟೆಲಿಕಾಂ ಸಚಿವ

ಇದು ಅಂಚೆ ನೌಕರರಿಗೆ 
ಸಿಕ್ಕಿದ ಐತಿಹಾಸಿಕ ಜಯ. ಅಂಚೆ ಇಲಾಖೆಯಿಂದ ಈ ಹಿಂದೆ 1996 ರಲ್ಲಿ ಹೆಚ್ಚುವರಿ ವೇತನಕ್ಕೆ ಆಗ್ರಹಿಸಿ 13 ದಿನಗಳ ಕಾಲ ಹೋರಾಟ ನಡೆಸಲಾಗಿತ್ತು. ಅನಂತರ ಇದೇ ಮೊದಲ ಬಾರಿಗೆ 16 ದಿನ ಕಾಲ ಮುಷ್ಕರ ನಡೆಸಿ ಜಯಗಳಿಸಿದ್ದೇವೆ.
– ಕೆ.ಎಸ್‌. ರುದ್ರೇಶ್‌, ಅಖೀಲ ಭಾರತ, ಅಂಚೆ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ

Advertisement
Advertisement

Udayavani is now on Telegram. Click here to join our channel and stay updated with the latest news.

Next