Advertisement

ಮುಖ್ಯಮಂತ್ರಿಯಿಂದ ಸರ್ಟಿಫಿಕೇಟ್‌ ಪಡೆಯಲು ಗ್ರಾಮವಾಸ್ತವ್ಯ ನಡೆಸ್ತಿಲ್ಲ

05:03 PM Nov 11, 2017 | |

ಬೆಂಗಳೂರು: ವಿಕಾಸ ವಾಹಿನಿ ವಾಹನದಲ್ಲೇ ಕಮೋಡ್‌ ಇದೆ. ಗ್ರಾಮ ವಾಸ್ತವ್ಯಕ್ಕೆ ಹೋದ ಕಡೆ ಕಮೋಡ್‌ ಒಯ್ಯುತ್ತಾರೆಂಬ ಮುಖ್ಯಮಂತ್ರಿ ಹೇಳಿಕೆಗೆ ಸಿದ್ದರಾಮಯ್ಯ ಅವರಿಂದ ಸರ್ಟಿಫಿಕೇಟ್‌ ಪಡೆಯಲು ನಾನು ಗ್ರಾಮ ವಾಸ್ತವ್ಯ ನಡೆಸುತ್ತಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

Advertisement

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮವಾಸ್ತವ್ಯದ ಬಗ್ಗೆ ನಾನು ಸಿದ್ದರಾಮಯ್ಯ ಅವರಿಂದ ನೀತಿ ಪಾಠ ಹೇಳಿಸಿಕೊಳ್ಳಬೇಕಿಲ್ಲ. ಚಿಕ್ಕಮಗಳೂರಿನಲ್ಲಿ ದಲಿತರ ಮನೆಯಲ್ಲಿದ್ದ ಹಾಸಿಗೆ, ದಿಂಬು ಉಪಯೋಗಿಸಿದ್ದೆ. ಆ ಬಗ್ಗೆ ಮಾಹಿತಿ ಪಡೆದು ಮಾತಾಡಲಿ,

ಜೆಡಿಎಸ್‌ ಯಾತ್ರೆಗೆ ದೊರೆಯುತ್ತಿರುವ ಸ್ಪಂದನೆ ನೋಡಿ ಸಿದ್ದರಾಮಯ್ಯ ಅವರಿಗೆ ಸಹಿಸಲು ಆಗುತ್ತಿಲ್ಲ ಎಂದರು. ಮೊದಲ ಹಂತದ ವಿಕಾಸಯಾತ್ರೆ ಯಶಸ್ವಿಯಾಗಿದ್ದು, ಜೆಡಿಎಸ್‌ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಲಿದೆ. ಎರಡನೇ ಹಂತದ ಯಾತ್ರೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಾರಂಭಿಸಲಿದ್ದೇನೆ ಎಂದು ಹೇಳಿದರು.

ಟಿಕೆಟ್‌ಗೆ ಒತ್ತಡ ಹಾಕುತ್ತಿಲ್ಲ: ಪ್ರಜ್ವಲ್‌
ಕೆ.ಆರ್‌.ಪೇಟೆ:
“ನಾನು ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ನಿಜ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂಬ ಹಠ ತೊಟ್ಟು ಯಾರ ಮೇಲೂ ಒತ್ತಡ ಹಾಕುತ್ತಿಲ್ಲ’ ಎಂದು ಜೆಡಿಎಸ್‌ ಯುವ ನಾಯಕ ಪ್ರಜ್ವಲ್‌ ರೇವಣ್ಣ ಸ್ಪಷ್ಟಪಡಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಈ ಚುನಾವಣೆಯಲ್ಲಿ ದೇವೇಗೌಡರು ಸ್ಪರ್ಧಿಸು ಎಂದರಷ್ಟೇ ಸ್ಪರ್ಧಿಸುವೆ. ಈಗ ಬೇಡ ಸುಮ್ಮನಿರು ಎಂದರೆ ಸಂಘಟನೆಯಲ್ಲಿ ತೊಡಗುವೆ. ಟಿಕೆಟ್‌ ಕೊಡುವುದು ಅಥವಾ ಬಿಡುವುದು ವರಿಷ್ಠರಿಗೆ ಬಿಟ್ಟಿದ್ದು’ ಎಂದರು.

ಸಿಂಧ್ಯಾ ಜೆಡಿಎಸ್‌ ರಾಷ್ಟ್ರೀಯ ಕಾರ್ಯಾಧ್ಯಕ್ಷ 
ಬೆಂಗಳೂರು:
ಸಕ್ರಿಯ ರಾಜಕಾರಣಕ್ಕೆ ಮರಳಿದ ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯಾ ಅವರಿಗೆ ಜೆಡಿಎಸ್‌ ರಾಷ್ಟ್ರೀಯ ಕಾರ್ಯಾಧ್ಯಕ್ಷ ಹುದ್ದೆ ನೀಡಲಾಗಿದೆ. ಜೆಪಿ ಭವನದಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಸಿಂಧ್ಯಾ ನೇಮಕಾತಿ ಪ್ರಕಟಿಸಿದರು. ಸಿಂಧ್ಯಾ ಜನತಾಪರಿವಾರದ ಹಿರಿಯ ಮುಖಂಡರಾಗಿದ್ದು ರಾಷ್ಟ್ರ ಮಟ್ಟದ ಪಕ್ಷ ಸಂಘಟನೆಯಲ್ಲಿ ನನ್ನ ಜತೆಗೂಡಲಿದ್ದಾರೆಂದು ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next