Advertisement

ತುಟ್ಟಿ ಭತ್ಯೆ, ಕನಿಷ್ಠ ವೇತನಕ್ಕೆ ಗ್ರಾಪಂ ನೌಕರರು ಆಗ್ರಹ

09:32 PM Oct 18, 2019 | Lakshmi GovindaRaju |

ಚಿಕ್ಕಬಳ್ಳಾಪುರ: ತುಟ್ಟಿ ಭತ್ಯೆ ಸಹಿತ ಗ್ರಾಪಂ ನೌಕರರಿಗೆ ಕನಿಷ್ಠ ವೇತನ ನೀಡಬೇಕೆಂದು ಆಗ್ರಹಿಸಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಗ್ರಾಪಂಗಳ ನೌಕರರು ಜಿಲ್ಲಾ ಕೇಂದ್ರದಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಿ ಬಳಿಕ ಜಿಲ್ಲಾಡಳಿತ ಭವನದ ಎದುರು ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾ ಧರಣಿ ನಡೆಸಿದರು.

Advertisement

ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದಿಂದ ಹೊರ ವಲಯದ ಅಣಕನೂರು ಸಮೀಪದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಮೆರವಣಿಗೆ ನಡೆಸಿದ ಗ್ರಾಪಂ ನೌಕರರು, ಹಲವು ವರ್ಷಗಳಿಂದ ನಿವೃತ್ತಿಯ ಅಂಚಿನಲ್ಲಿದ್ದರೂ ಅರ್ಹರಿಗೆ ಬಡ್ತಿ ನೀಡದೆ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಅರ್ಹರಿಗೆ ಬಡ್ತಿ ನೀಡಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು.

ಜೀವನ ನಿರ್ವಹಣೆ ಕಷ್ಟಕರ: ರಾಜ್ಯ ಸರ್ಕಾರ ನಿಗದಿಪಡಿಸಿರುವ ಗ್ರಾಪಂ ಸಿಬ್ಬಂದಿಗೆ ಕನಿಷ್ಠ ವೇತನವನ್ನು ತುಟ್ಟಿ ಭತ್ಯೆ ಸಹಿತ ಪ್ರತಿ ತಿಂಗಳು 5ನೇ ತಾರೀಕಿನೊಳಗೆ ಪಾವತಿಸಬೇಕು. ಆದರೆ ಜಿಲ್ಲೆಯ ಬಹುತೇಕ ಗ್ರಾಪಂಗಳಲ್ಲಿ ನೌಕರರಿಗೆ ಕನಿಷ್ಠ ವೇತನ ಕೊಡುತ್ತಿಲ್ಲ. ಇದರಿಂದ ನೌಕರರು ಜೀವನ ನಡೆಸುವುದು ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು. ಬಾಕಿ ಇರುವ ಎಲ್ಲಾ ಸಿಬ್ಬಂದಿಯ ವೇತನವನ್ನು 14ನೇ ಹಣಕಾಸು ಯೋಜನೆ ಸೇರಿದಂತೆ ಸರ್ಕಾರದ ಅನುದಾನ ಸೇರಿಸಿ ನೀಡಬೇಕೆಂದು ಗ್ರಾಪಂ ನೌಕರರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಕನಿಷ್ಠ ವೇತನ ಕೊಡದೇ ವಂಚನೆ: ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಸಿದ್ದಗಂಗಪ್ಪ ಮಾತನಾಡಿ, ಜಿಲ್ಲೆಯ ಗ್ರಾಪಂಗಳಲ್ಲಿ ಸ್ವತ್ಛತೆ, ನೈರ್ಮಲ್ಯ, ಕುಡಿಯುವ ನೀರು ಸೇರಿದಂತೆ ಗ್ರಾಪಂ ವ್ಯಾಪ್ತಿಯ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಬದ್ಧತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿರುವ ಗ್ರಾಪಂ ನೌಕರರಿಗೆ ಕಾಲಕಾಲಕ್ಕೆ ವೇತನ ಕೊಡದೇ ವಿಳಂಬ ಮಾಡಲಾಗುತ್ತಿದೆ. ಸರ್ಕಾರ ಕನಿಷ್ಠ ವೇತನ ನೀಡಬೇಕೆಂದು ಕಾಯ್ದೆ ಮೂಲಕ ಆದೇಶಿಸಿದರೂ ಕೆಲ ಗ್ರಾಪಂಗಳು ಅನುಷ್ಠಾನಗೊಳಿಸುವಲ್ಲಿ ಮೀನಾಮೇಷ ಎಣಿಸುತ್ತಿವೆ ಎಂದು ಆರೋಪಿಸಿದರು.

60 ವರ್ಷ ವರ್ಷ ಮೇಲ್ಪಟ್ಟ ನಿವೃತ್ತಿ ಹೊಂದಿದ ಸಿಬ್ಬಂದಿಗೆ ಉಪಧನ ಮತ್ತು ಮರಣ ಪರಿಹಾರ ನೀಡಬೇಕು. ಗ್ರಾಪಂಗಳಲ್ಲಿ ಕೆಲಸ ಮಾಡುತ್ತಿರುವ ಕರ ವಸೂಲಿಗಾರರಿಗೆ ಹಾಗೂ ಕ್ಲರ್ಕ್‌ಗಳಿಗೆ 2008 ರಿಂದ ಬಡ್ತಿ ನೀಡದೆ ಸುಮಾರು 15, 20 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಯ ಅಂಚಿನಲ್ಲಿರುವರಿಗೆ ಕೂಡಲೇ ಗ್ರೇಡ್‌-2 ಕಾರ್ಯದರ್ಶಿ ಹಾಗೂ ಲೆಕ್ಕ ಸಹಾಯಕರ ಹುದ್ದೆಗಳಿಗೆ ಬಡ್ತಿ ನೀಡಬೇಕೆಂದು ಜಿಪಂ ಅಧಿಕಾರಿಗಳನ್ನು ಆಗ್ರಹಿಸಿದರು.

Advertisement

ಪ್ರತಿಭಟನೆಯಲ್ಲಿ ಗ್ರಾಪಂ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಂತಾಮಣಿ ನಾಗರಾಜ್‌, ಜಿಲ್ಲಾ ಖಜಾಂಚಿ ಬಿ.ಎನ್‌.ಮುನಿಕೃಷ್ಣಪ್ಪ, ಪದಾಧಿಕಾರಿಗಳಾದ ಸುದರ್ಶನ್‌, ಜನಾರ್ದನ್‌, ನಾರಾಯಣಸ್ವಾಮಿ, ನಿರ್ಮಲಮ್ಮ, ಗಂಗರತ್ನಮ್ಮ, ಮುನಿರಾಜು, ಶಶಿಕುಮಾರ್‌, ರವಿಕುಮಾರ್‌, ಬಾಬಾಜಾನ್‌, ಕೆ.ಎನ್‌.ನಾಗರಾಜ್‌ ಕೃಷ್ಣಪ್ಪ ಉಪಸ್ಥಿತರಿದ್ದರು.

ಸಿಇಒರಿಂದ ವಾರದೊಳಗೆ ಸಮಸ್ಯೆ ಇತ್ಯರ್ಥ ಭರವಸೆ: ಜಿಲ್ಲಾ ಪಂಚಾಯತ್‌ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿ ಮನವೊಲಿಸಿದ ಜಿಪಂ ಸಿಇಒ ಬಿ.ಫೌಜಿಯಾ ತರುನ್ನುಮ್‌, ಜಿಲ್ಲಾ ಮಟ್ಟದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ವಾರದೊಳಗೆ ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಶೀಘ್ರವೇ ಗ್ರಾಪಂ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳ ಸಭೆ ನಡೆಸಿ ಜಿಲ್ಲಾ ಹಂತದಲ್ಲಿ ಇರುವ ಸಮಸ್ಯೆಗಳ ಬಗ್ಗೆಯು ಸ್ಪಂದಿಸಿ ಬಗೆಹರಿಸುವ ಭರವಸೆ ನೀಡಿದ ಬಳಿಕ ಗ್ರಾಪಂ ನೌಕರರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಪ್ರತಿಭಟನಕಾರರು ಕೈ ಬಿಟ್ಟರು.

ರಾಜ್ಯಮಟ್ಟದಲ್ಲಿ ಹೋರಾಟ ಎಚ್ಚರಿಕೆ: ಜಿಲ್ಲೆಯಲ್ಲಿ ಈಗಾಗಲೇ ಹೊಸದಾಗಿ ಗುರುತಿಸಲಾಗಿರುವ ಗ್ರೇಡ್‌-1 ರ 51 ಗ್ರಾಪಂಗಳಿಗೆ ಜಿಪಂನಲ್ಲಿ ಕೂಡಲೇ ಅನುಮೋದನೆ ನೀಡಿ ಪ್ರಕಟಿಸಬೇಕು. ಗ್ರಾಪಂಗಳಲ್ಲಿ ಅಲ್ಪ ವೇತನಕ್ಕೆ ದುಡಿಯುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಪದೋನ್ನತಿಗೆ ಅವಕಾಶ ಕಲ್ಪಿಸಬೇಕು ಎಂದು ಗ್ರಾಪಂ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್‌ ತಿಳಿಸಿದರು.

ಜಿಲ್ಲೆಯ ಗ್ರಾಪಂಗಳಲ್ಲಿ ಕೆಲಸ ಮಾಡುವ ಬಾಕಿ ಇರುವ ಸಿಬ್ಬಂದಿಯ ವಿವರಗಳನ್ನು ಪಂಚತಂತ್ರದಲ್ಲಿ ಅಳವಡಿಸಿ ಅವರಿಗೆ ಕನಿಷ್ಠ ವೇತನ ನೀಡಬೇಕು. ಇಲ್ಲದಿದ್ದರೆ ನಾವು ಮತ್ತೆ ಹೋರಾಟವನ್ನು ರಾಜ್ಯ ಮಟ್ಟದಲ್ಲಿ ಕೈಗೆತ್ತಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next