ಕಡೂರು: ತಾಲೂಕಿನ ವಿವಿಧ ಗ್ರಾಪಂಗೆ ಪತಿ, ಪತ್ನಿ, ಮಾವ, ಸೊಸೆ ಆಯ್ಕೆಯಾಗಿದ್ದಾರೆ. ತಾಲೂಕಿನ ಮಲ್ಲೇಶ್ವರ ಗ್ರಾಪಂಗೆ ಸೇರುವ ಎಂ.ಕೋಡಿಹಳ್ಳಿ ಗ್ರಾಮದಿಂದ ರಾಜನಾಯ್ಕ (ರಾಜಹುಲಿ) 6 ನೇ ಬಾರಿಗೆ ಆಯ್ಕೆಯಾದರೆ ಆತನ ಮಗನ ಭರತ್ ರಾಜ್‌ನಾಯ್ಕ ಅವರ ಪತ್ನಿ ಜ್ಯೋತಿ ಇದೇ ಮೊದಲ ಬಾರಿಗೆ ಮಾವನೊಂದಿಗೆ ಮಲ್ಲೇಶ್ವರ ಗ್ರಾಪಂ ಪ್ರವೇಶ ಪಡೆದಿದ್ದಾರೆ. ತಾಲೂಕಿನ ಮತಿಘಟ್ಟ ಗ್ರಾಪಂನ ಕುಪ್ಪಾಳು ಗ್ರಾಮದಿಂದ ರೇವಣ್ಣ 3 ನೇ ಬಾರಿಗೆ ಆಯ್ಕೆಯಾದಾರೆ ಆತನ ಪತ್ನಿ ಯಶೋಧಮ್ಮ ಮತಿಘಟ್ಟ 2 ನೇ ಬ್ಲಾಕ್ ನಿಂದ ಮೊದಲ ಬಾರಿಗೆ ಪಂಚಾಯತ್ ಪ್ರವೇಶ ಮಾಡಿದ್ದಾರೆ.
ಬಿ.ಟಿ. ಗಂಗಾಧರ ನಾಯ್ಕ: ಕಡೂರು ತಾಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಮಂಡಲ ಪಂಚಾಯತ್‌ಗೆ ನಂತರ ಗ್ರಾಪಂ ಚುನಾವಣೆಗಳಲ್ಲಿ ಸತತ 4 ನೇ ಬಾರಿ ಗೆಲ್ಲುವುದರ ಮೂಲಕ ದಾಖಲೆ ಮಾಡಿದ್ದಾರೆ. 2 ಬಾರಿ ಗ್ರಾಪಂಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಒಂದೇ ಕುಟುಂಬದ ಐವರು ಗ್ರಾ.ಪಂ ಪ್ರವೇಶ
ಪುಷ್ಪಲತಾ ಸೋಮೇಶ್: ಕಡೂರು ಪಟ್ಟಣದಲ್ಲಿ ವಕೀಲ ವೃತ್ತಿ ನಡೆಸುತ್ತಿರುವ ಪುಷ್ಪಲತಾ ಕೆ.ಬಿ. ಸೋಮೇಶ್ ಅವರು ಯಳ್ಳಂಬಳಸೆ ಗ್ರಾಪಂ ವ್ಯಾಪ್ತಿಗೆ ಸೇರುವ ಖಂಡಗದಹಳ್ಳಿ ಗ್ರಾಮದಿಂದ ಇದೇ ಮೊದಲ ಬಾರಿಗೆ ಗ್ರಾಪಂ ಚುನಾವಣೆಯಲ್ಲಿ ಗೆಲ್ಲುವುದರ ಮೂಲಕ ಗ್ರಾಮ ಸ್ವರಾಜ್ ಸೇವೆಗೆ ಸಿದ್ಧರಾಗಿದ್ದಾರೆ. ಕೆ.ಬಿ. ತೀರ್ಥಪ್ಪ ಮತಿಘಟ್ಟ ಗ್ರಾಪಂಗೆ ಕುಪ್ಪಾಳು ಗ್ರಾಮದಿಂದ 3 ನೇ ಬಾರಿ ಆಯ್ಕೆಯಾಗಿದ್ದಾರೆ. ಶ್ರೀಕಂಠ ಒಡೆಯರ್ ಮತಿಘಟ್ಟ ಗ್ರಾಮದಿಂದ ಸತತ 3 ನೇ ಬಾರಿಗೆ ಆಯ್ಕೆಯಾಗಿದ್ದಾರೆ.