ಕಲಘಟಗಿ: ಕಳೆದ ಒಂಬತ್ತು ದಿನದಿಂದ ಪಟ್ಟಣದಲ್ಲಿ ನಡೆದ ಗ್ರಾಮದೇವಿ ಜಾತ್ರಾ ಮಹೋತ್ಸವ ಗುರುವಾರ ಸಂಜೆ ಸಂಪನ್ನಗೊಂಡಿತು. ಪಟ್ಟಣದ ಚೌತಮನೆ ಕಟ್ಟೆಯಲ್ಲಿರುವ ಜಾತ್ರಾ ಮಂಟಪದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗ್ರಾಮ ದೇವತೆಯರಿಗೆ ಲಕ್ಷಾಂತರ ಭಕ್ತರು ಉಡಿ ತುಂಬಿ, ತಮ್ಮ ಹರಿಕೆಗಳನ್ನು ತೀರಿಸಿ ಗ್ರಾಮದೇವಿ ಕೃಪೆಗೆ ಪಾತ್ರರಾದರು.
ಪಟ್ಟಣದ ಧಾರ್ಮಿಕ ವಿಧಿ-ವಿಧಾನಗಳನ್ನು ವೈದಿಕರಾದ ಕಿರಣ ಪೂಜಾರ, ಕಿಟ್ಟು ಭಟ್ಟ ಮತ್ತು ಮಧುಸೂಧನ ಉಪಾಧ್ಯ ಅವರು ಪ್ರತಿಷ್ಠಾಪನಾ ಹೋಮ ಹವನ, ಮಾಂಗಲ್ಯ ಧಾರಣೆಯನ್ನು ವಿಧಿವತ್ತಾಗಿ ನೆರವೇರಿಸಿದರು. ನಂತರ ಪ್ರತಿ ದಿನ ಪಂಚಾಮೃತ ಅಭಿಷೇಕ, ಸಹಸ್ರ ನಾಮ ಪುಷ್ಪಾರ್ಪರಣೆ, ಅಷ್ಠಾವಧಾನ ಕುಂಕುಮಾರ್ಚನೆ, ಮಂತ್ರ ಪುಷ್ಪ ಮಹಾ ಮಂಗಳಾರತಿ ನೆರವೇರಿಸಿದರು.
ಮಧ್ಯಾಹ್ನ 4ಕ್ಕೆ ಗ್ರಾಮದೇವಿ ಮೂರ್ತಿಗಳನ್ನು ಜಾತ್ರಾ ಮಂಟಪದಿಂದ ಹೊರತರುತ್ತಿದ್ದಂತೆಯೇ ನೆರೆದಿದ್ದ ಸಹಸ್ರಾರು ಭಕ್ತರ “ಉಧೋ.. ಉಧೋ.. ತಾಯಿ’ ಘೋಷಣೆ ಮುಗಿಲು ಮುಟ್ಟಿತು. ಜಾತ್ರಾ ಉತ್ಸವ ಮಂಟಪದಲ್ಲಿ 9 ದಿನಗಳ ಕಾಲ ರಾಣಿಗೇರರು ರಂಗ ಹೊಯ್ದುಕೊಂಡು ದೀಪ ಕಾದಿದ್ದು, ದೇವಿಯರ ಮೆರವಣಿಗೆ ಹೋಗುತ್ತಿದ್ದಂತೆ ಮುಂದೆ ಸಾಗಿದರು.
ಮಂಟಪದ ಪ್ರವೇಶ ದ್ವಾರದ ಎದುರಿಗೆ ಮಾತಂಗಿಯರು ಗುಡಿಸಲು (ಮಾತಂಗಿ ಝೋಪಡಿ)ನಲ್ಲಿ ಹಿಟ್ಟಿನಿಂದ ತಯಾರಿಸಿದ ಕೋಣದ ತಲೆಯ ಮೇಲೆ ದೀಪ ಮೆರವಣಿಗೆ ತೆರಳುತ್ತಿದ್ದಂತೆ ಮುಂದೆ ಸಾಗಿತು.ಮಂಟಪದ ಪ್ರವೇಶ ದ್ವಾರದ ಹೊರಗಡೆ ಗ್ರಾಮ ದೇವಿಯರ ಮೂರ್ತಿ ಬರುತ್ತಿದ್ದಂತೆ ಸಂಪ್ರದಾಯದಂತೆ ಝೋಪಡಿಗೆ ಅಗ್ನಿ ಸ್ಪರ್ಶ ಮಾಡಲಾಯಿತು.
ನಂತರ ದೇವಿಯರ ಮೂರ್ತಿವು ಪ್ರದಕ್ಷಣಾಕಾರವಾಗಿ ತಿರುಗಿ ಅಲ್ಲಿಂದ ಗ್ರಾಮ ದೇವಿ ದ್ಯಾಮವ್ವ ಮತ್ತು ದುರ್ಗವ್ವರ ಮೆರವಣಿಗೆ ಪಾದಗಟ್ಟೆ ತಲುಪಿತು. ಈ ಮೂಲಕ ಜಾತ್ರಾ ಮಹೋತ್ಸವ ಸಂಪನ್ನವಾಯಿತು. ಒಂಬತ್ತು ದಿನ ಜಾತ್ರಾ ಮಹೋತ್ಸವದಲ್ಲಿ ದೇವಸ್ಥಾನದ ಟ್ರಸ್ಟ್ ಕಮಿಟಿ ಮತ್ತು ಜಾತ್ರಾ ಉತ್ಸವ ಸಮಿತಿಯೊಂದಿಗೆ ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸಿದ ಪಟ್ಟಣದ ಯುವಕರು ಮತ್ತು ಹಿರಿಯರನ್ನು ಸತ್ಕರಿಸಲಾಯಿತು.
ಜಾತ್ರಾ ಮಹೋತ್ಸವದುದ್ದಕ್ಕೂ ಲಕ್ಷಾಂತರ ಭಕ್ತಾಧಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿ, ಕುಡಿವ ನೀರು ಹಾಗೂ ಸ್ವತ್ಛತೆಯ ಸೇವೆಗೈದ ಪಪಂ ಆಡಳಿತ ವರ್ಗ ಮತ್ತು ಸಿಬ್ಬಂದಿ, ಬಂದೋಬಸ್ತ್ ಒದಗಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಸತ್ಕರಿಸಲಾಯಿತು.