ಬೆಂಗಳೂರು: ಸ್ವಚ್ಛ ಭಾರತ್, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯೋಜನೆಗಳು ಸೇರಿದಂತೆ ವಿವಿಧ ಇಲಾಖೆಯ ಹಲವು ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಗೊಳಿಸಲು ಬೆಂಗಳೂರು ನಗರ ಜಿಲ್ಲಾಡಳಿತ ‘ಗ್ರಾಮ ವಾಣಿ’ಎಂಬ ವಾಟ್ಸ್ ಆ್ಯಪ್ ಗ್ರೂಪ್ ಆರಂಭಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಯೋಜನೆಗಳ ಬಗ್ಗೆ ‘ಗ್ರಾಮ ವಾಣಿ’ ಗ್ರೂಪ್‌ನಲ್ಲಿ ವಿಸ್ತೃತವಾದ ಚರ್ಚೆಗಳು ನಡೆಯಲಿವೆ.
ಬೆಂಗಳೂರು ನಗರ ಜಿಪಂ ವ್ಯಾಪ್ತಿಗೆ ಬರುವ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಆನೇಕಲ್ ತಾಲೂಕುಗಳ ವ್ಯಾಪ್ತಿಯ ಹಿರಿಯ ಅಧಿಕಾರಿಗಳು ‘ಗ್ರಾಮ ವಾಣಿ’ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿದ್ದು ಕಿರಿಯ ಅಧಿಕಾರಿಗಳೊಂದಿಗೆ ಯೋಜನೆ ಜಾರಿ ಸಂಬಂಧ ಚರ್ಚೆ ನಡೆಸಿ ಸಲಹೆ ಸೂಚನೆ ನೀಡಲಿದ್ದಾರೆ.
ಭೇಟಿ ಬಗ್ಗೆ ಚರ್ಚೆ, ಸಲಹೆ: ಗ್ರಾಪಂ ಮಟ್ಟದಲ್ಲಿ ಯೋಜನೆ ಅನುಷ್ಠಾನದ ಸಂಬಂಧ ಇಲಾಖಾವಾರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಾಗ ಈ ಬಗ್ಗೆ ಗ್ರಾಮ ವಾಣಿಯಲ್ಲಿ ಫೋಟೋ ಹಾಗೂ ಅದಕ್ಕೆ ಸಂಬಂಧಿಸಿದ ಮಾಹಿತಿಗಳು ರವಾನೆ ಆಗಲಿವೆ. ಈ ವೇಳೆ ಆ ಕಾರ್ಯಕ್ರಮದ ಬಗ್ಗೆ ಗ್ರೂಪ್ ಚರ್ಚೆ ನಡೆಯಲಿದೆ. ಜೊತೆಗೆ ಸಲಹೆಗಳನ್ನು ಕೂಡ ನೀಡಲಾಗುತ್ತದೆ.
ನಗರ ಜಿಲ್ಲಾಡಳಿತ ಈಗಾಗಲೇ ಶಾಲಾ- ಕಾಲೇಜು ವಿದ್ಯಾರ್ಥಿಗಳನ್ನು ಒಡಗೂಡಿ ಗ್ರಾಮಾಂತರ ಪ್ರದೇಶ ದಲ್ಲಿ ಸ್ವಚ್ಛ ಭಾರತ್ ಯೋಜನೆಗೆ ಸಂಬಂಧಿಸಿದಂತೆ ಹಲವು ರೀತಿಯ ಅರಿವು ಮೂಡಿಸುವ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರಲ್ಲಿ ತಿಳಿವಳಿಕೆ ನೀಡುವಲ್ಲಿ ಯಶಸ್ವಿಯಾಗಿವೆ. ಆ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಜನರನ್ನು ಮತ್ತಷ್ಟು ತಲುಪುವ ಬಗ್ಗೆ ಸಾಕಷ್ಟು ಚರ್ಚೆ ಗಳು ಗ್ರಾಮ ವಾಣಿಯಲ್ಲಿ ನಡೆದಿದೆ ಎಂದು ಬೆಂಗ ಳೂರು ನಗರ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ವಚ್ಛ ಭಾರತ್ ಯೋಜನೆಯ ಅಡಿಯಲ್ಲಿ ನಗರ ಜಿಲ್ಲಾಡಳಿತ ಅನುಪಮ ಕಾರ್ಯಕ್ರಮಗಳನ್ನು ರೂಪಿಸಿದ್ದು, ಶಾಲೆಗಳಲ್ಲಿ ಸ್ವಚ್ಛತೆ ಕಾಪಾಡುವುದು, ಗ್ರಾಮೀಣ ಪ್ರದೇಶದಲ್ಲಿ ಶೌಚಾ ಲಯ ನಿರ್ಮಿಸುವುದು ಕೂಡ ಇದರಲ್ಲಿ ಸೇರಿದೆ.
ಇದರ ಯಶಸ್ವಿಗಾಗಿಯೇ ಶಾಲಾ-ಕಾಲೇಜು ಪ್ರಾಂಶುಪಾಲರ ಮೊಬೈಲ್ ಸಂಖ್ಯೆಯನ್ನು ಕೂಡ ‘ಗ್ರಾಮ ವಾಣಿ’ ಗ್ರೂಪ್‌ನಲ್ಲಿ ಅಳವಡಿಕೆ ಮಾಡಲಾ ಗಿದ್ದು, ಸ್ವಚ್ಛತೆ ಸಂಬಂಧಿಸಿದ ಅನೇಕ ರೀತಿಯ ಸಕಾರಾತ್ಮಕ ಸಮಾಲೋಚನೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಕುಡಿಯುವ ನೀರಿನ ಯೋಜನೆ ಬಗ್ಗೆ ಚರ್ಚೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ವ್ಯಾಪ್ತಿಗೆ ಸಂಬಂಧ ಪಟ್ಟಂತೆ ಅಭಿವೃದ್ಧಿ ಕಾಮಗಾರಿ ಬಗ್ಗೆ ಚರ್ಚೆಗಳು ಕೂಡ ನಡೆಯಲಿವೆ.
ಕುಡಿಯುವ ನೀರು, ನೈರ್ಮಲ್ಯ, ನಬಾರ್ಡ್ ಯೋಜನೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಸುವರ್ಣ ಗ್ರಾಮ ಯೋಜನೆ ಸೇರಿದಂತೆ ಇನ್ನಿತರ ಯೋಜನೆ ಮತ್ತು ಕಾಮಗಾರಿಗಳ ಬಗ್ಗೆ ಚರ್ಚೆಗಳು ಈಗಾಗಲೇ ನಡೆದಿವೆ.
ಸ್ವಚ್ಛ ಭಾರತ್ ಯೋಜನೆ ಜಾರಿ ಸಂಬಂಧಿಸಿದಂತೆ ಹಲವು ರೀತಿಯ ಚರ್ಚೆಗಳು ನಡೆದಿದ್ದು ‘ಗ್ರಾಮ ವಾಣಿ’ ವಾಟ್ಸ್ ಆಪ್ ಬಗ್ಗೆ ಉತ್ತಮ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಸ್ವಚ್ಛ ಭಾರತ್ ಯೋಜನೆ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ 250 ಮಂದಿಯನ್ನು ಗ್ರೂಪ್‌ನಲ್ಲಿ ಸೇರಿಸಲಾಗಿದ್ದು ಹಿರಿಯ ಅಧಿಕಾರಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.
● ದೇವೇಶ ಸೂರಗುಪ್ಪ