ಆಳಂದ: ವಿವಿಧ ಬೇಡಿಕೆಗೆ ಒತ್ತಾಯಿಸಿ ತಾಲೂಕಿನ ಗ್ರಾಪಂ ನೌಕರರು ತಾಲೂಕು ಪಂಚಾಯತ್ ಕಚೇರಿ ಎದುರು ಸೋಮವಾರ ಪ್ರತಿಭಟನಾ ಧರಣಿ ಸತ್ಯಾಗ್ರಹ ಕೈಗೊಂಡರು. ನೌಕರ ಸಂಘದ ಅಧ್ಯಕ್ಷ ಶಿವರುದ್ರಯ್ಯ ಸ್ವಾಮಿ ಭೂಸನೂರ ಪ್ರಧಾನ ಕಾರ್ಯದರ್ಶಿ ಕಲ್ಯಾಣಪ್ಪ ಗಾಯಕವಾಡ ಹಿರೋಳಿ ನೇತೃತ್ವದಲ್ಲಿ ಪ್ರತಿಭಟನೆ ಧರಣಿ ನಡೆಸಿದ ನೌಕರರು, ಕೂಡಲೇ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಆದೇಶದಂತೆ ರಾಜ್ಯದ 55,114 ನೌಕರರಿಗೆ ಇಎಫ್ ಎಂಎಸ್ ಮೂಲಕ ವೇತನ ಸಿಗುವಂತೆ ಕ್ರಮವಹಿಸುವುದು, ನೈರ್ಮಲ್ಯಗಾರರಿಗೆ 2ನೇ ಕರವಸೂಲಿಗಾರರಿಗೆ, ಕ್ಲರ್ಕ್, ಕಂಪ್ಯೂಟರ್ ನಿರ್ವಹಣೆಗಾರರಿಗೆ ಆಗಿರುವ ತೊಂದರೆ ನಿವಾರಿಸಬೇಕು. ಎಸ್‌ಎಲ್‌ಎಸಿ ಪಾಸಾದ 10 ವರ್ಷ ಸೇವೆ ಸಲ್ಲಿಸದ ಬಿಲ್ ಕಲೆಕ್ಟೇರ್‌ಗಳಿಗೆ ಗ್ರೇಡ್-2 ಕಾರ್ಯದರ್ಶಿ ಬಡ್ತಿಯನ್ನು ಪುನಃ ಸಿಗುವಂತೆ ಸೂಕ್ತ ಆದೇಶ ಹೊರಡಿಸಬೇಕು.
ಪಿಂಚಣಿ, ವೈದ್ಯಕೀಯ ವೆಚ್ಚ, ಗ್ರಾಚ್ಯೂಟಿ ಸಿಗುವಂತೆ ಕ್ರಮವಹಿಸಿ ಸೂಕ್ತ ಆದೇಶ ನೀಡಬೇಕು. ನಗರಾಭಿವೃದ್ಧಿ ಇಲಾಖೆಯಲ್ಲಿರುವ ಗ್ರಾಮ ಪಂಚಾಯತ ನೌಕರರಿಗೆ ಸೇವಾ ನಿಯಮಾವಳಿ ರಚಿಸುವುದು ಪ್ರಗತಿಯಲ್ಲಿದೆ. ಇದಕ್ಕೆ ಸೂಕ್ತ ಆದೇಶ ಹೊರಡಿಸಬೇಕು. 2011ರ ಜನಗಣತಿ ಆಧಾರದ ಮೇಲೆ ಗ್ರಾ.ಪಂಗಳನ್ನು ಗ್ರೇಡ್-2ನಿಂದ ಗ್ರೇಡ್-1 ಆಗಿ ಮೇಲ್ದರ್ಜೆಗೇರಿಸಬೇಕು. ಅಪರ ಕಾರ್ಯದರ್ಶಿಗಳಾಗದ್ದ ಎಂ.ಎಸ್. ಸ್ವಾಮಿಯವರ ವರದಿ ಶಿಫಾರಸ್ಸಿನಂತೆ ಹುದ್ದೆಗಳನ್ನು ಸ್ಪಷ್ಟಿಕರಿಸಬೇಕು ಎಂದು ಒತ್ತಾಯಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ. ಅನಿತಾ ಅವರ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನೌಕರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಧುತ್ತರಗಾಂವ, ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ ಹರಸೂರ, ಪ್ರಧಾನ
ಕಾರ್ಯದರ್ಶಿ ಉಮಾಶಂಕರ ಕಡಣಿ, ಮುಖಂಡ ವೀರಭದ್ರ ದಿವಟಗಿ, ಮಲ್ಲಿನಾಥ ಅಲ್ಲಾಪುರ, ಹಣಮಂತರಾವ್ ಕೊರಳ್ಳಿ,ಶಿವಾನಂದ ಜಿಡಗಾ, ಗುಂಡಪ್ಪ ಘಂಟೆ, ರಾಯೆ ತೆಲಾಕುಣಿ ಅನೇಕರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.