Advertisement

ಗ್ರಾಪಂ ಕಾರ್ಯದರ್ಶಿ ವರ್ಗಾವಣೆಗೆ ಒತ್ತಾಯ

05:38 PM Sep 08, 2020 | Suhan S |

ಕುಮಟಾ: ತಾಲೂಕಿನ ನಾಡುಮಾಸ್ಕೇರಿ ಗ್ರಾ.ಪಂ ಗ್ರೇಡ್‌ – 2 ಕಾರ್ಯದರ್ಶಿಯಾಗಿ ವಿನಾಯಕ ಸಿದ್ದಾಪುರ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ, ಅವರು ಅತ್ಯಂತ ಭ್ರಷ್ಟರಾಗಿದ್ದು ಅವರನ್ನು ಶೀಘ್ರ ವರ್ಗಾಯಿಸಬೇಕೆಂದು ಒತ್ತಾಯಿಸಿ, ಕರವೇ ನಾಡುಮಾಸ್ಕೇರಿ ಘಟಕದ ವತಿಯಿಂದ ಉಪವಿಭಾಗಾಧಿಕಾರಿಗೆ ಸೋಮವಾರ ಮನನಿ ಸಲ್ಲಿಸಲಾಯಿತು.

Advertisement

ಗ್ರಾಪಂ ಆಡಳಿತದಲ್ಲಿ ಗ್ರೇಡ್‌ 2 ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿನಾಯಕ ಅವರು, ತಾನೇ ಚುನಾಯಿತ ಅಧ್ಯಕ್ಷನೆಂಬಂತೆ ವರ್ತಿಸುತ್ತಿದ್ದು, ಗ್ರಾಪಂ ಆಡಳಿತದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ನಾಡು ಮಾಸ್ಕೇರಿ ಗ್ರಾಪಂ ಸಾರ್ವಜನಿಕರಿಗೆ ತಪ್ಪು ಮಾರ್ಗದರ್ಶನನೀಡುತ್ತಿದ್ದಾರೆ. ಪಂಚಾಯತದ ಪ್ರತಿಯೊಂದು ಯೋಜನೆಯಲ್ಲಿ ಜನರಿಂದ ಹಣ ಪೀಕುತ್ತಿದ್ದಾರೆ. ಇವರು ಸರಕಾರಿ ನೌಕರನಾಗಿರದೆ, ರಾಜಕೀಯ ಪಕ್ಷ ಮತ್ತು ಮುಖಂಡರೊಂದಿಗೆ ಶಾಮೀಲಾಗಿ ನಾಡುಮಾಸ್ಕೇರಿ ಗ್ರಾಪಂ ಗೋಮಾಳ ಸ.ನಂ. 338 ನ್ನು ಆಟದ ಮೈದಾನ ನಿರ್ಮಿಸಲು ತಡೆ ಮಾಡುತ್ತಿದ್ದಾರೆ.

ಇವರ ಲಂಚತನಕ್ಕೆ ಸಾರ್ವಜನಿಕರು ಹೈರಾಣಾಗಿದ್ದು, ಇದರಿಂದ ಬಡ ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ಇವರನ್ನು ಬದಲಾಯಿಸಲು ಶತಾಯಗತಾಯ ಪ್ರಯತ್ನಿಸಿದರೂ ಮೇಲಾಧಿಕಾರಿಗಳ ಕೃಪೆಯಿಂದ 10 ವರ್ಷಗಳ ಕಾಲ ವರ್ಗಾವಣೆಗೊಳ್ಳದೇ, ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿಯೊಂದು ಗ್ರಾಪಂ ಕೆಲಸ ಕಾರ್ಯಗಳಿಗೆ ಕಮಿಶನ್‌ ನೀಡಲು ಒತ್ತಾಯಿಸುತ್ತಾರೆ. ಹಾಗೂ ಸಾರ್ವಜನಿಕರ ಕುಂದು – ಕೊರತೆಗಳಿಗೆ ಸ್ಪಂದಿಸದೇ, ಸರಕಾರಿ ಕರ್ತವ್ಯದಲ್ಲಿ ನಿಷ್ಕಾಳಜಿ ತೋರುತ್ತಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು ತನಿಖೆ ನಡೆಸಬೇಕು ಹಾಗೂ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯವಿರದೇ, ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸದೆ ಕರ್ತವ್ಯ ಲೋಪ ಎಸಗುತ್ತಿರುವ ವಿನಾಯಕ ಸಿದ್ದಾಪುರ ಅವರನ್ನು ವರ್ಗಾಯಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.

ಕರವೇ ತಾಲೂಕಾಧ್ಯಕ್ಷ ತಿಮ್ಮಪ್ಪ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ನಾಯ್ಕ, ಪದಾಧಿಕಾರಿಗಳಾದ ವಸಂತ ಶೆಟ್ಟಿ, ಅಶೋಕ ಗೌಡ, ಸಂತೋಷ ನಾಯ್ಕ, ಮಂಜುನಾಥ ನಾಯ್ಕ, ಜಗದೀಶ ಅಂಬಿಗ, ಗಂಗಾಧರ ಅಂಬಿಗ ಸೇರಿದಂತೆ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next