ಬೆಂಗಳೂರು: ಗ್ರಾಮ ಪಂಚಾಯತ್‌ಗೆ ಚುನಾಯಿತರಾಗಿರುವ ಮಹಿಳೆಯು ತನ್ನ ಅಧಿಕಾರದಲ್ಲಿ ಗಂಡ ಅಥವಾ ಮನೆಯ ಬೇರೆ ಯಾರಾದರೂ ಹಸ್ತಕ್ಷೇಪ ನಡೆಸಲು ಅವಕಾಶ ನೀಡಿದರೆ ಆಕೆಯ ಸದಸ್ಯತ್ವವೇ ರದ್ದಾಗಲಿದೆ. ಇಂಥದ್ದೊಂದು ಕಟ್ಟುನಿಟ್ಟಿನ ಆದೇಶವನ್ನು ರಾಜ್ಯ ಸರಕಾರ ಹೊರಡಿಸಿದೆ.
ಸಿಎಂಗೆ ಮನವಿ :
ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳಾ ಸದಸ್ಯರುಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿ, ಬಧಿಸಿದಂತೆ, ಗ್ರಾಮ ಪಂಚಾಯತಿಗಳಲ್ಲಿ ಚುನಾಯಿತರಾಗಿರುವ ಮಹಿಳಾ ಸದಸ್ಯರುಗಳ ಪರವಾಗಿ ಮಹಿಳಾ ಸದಸ್ಯರ ಪತಿ ಮತ್ತು ಮತ್ತು ಕುಟುಂಬದವರು ಪಂಚಾಯತಿಗಳ ಕಾರ್ಯಕಲಾಪಗಳಲ್ಲಿ ಹಸ್ತಕ್ಷೇಪ ಮಾಡಿ ಗ್ರಾಮ ಪಂಚಾಯತಿಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ತೊಂದರೆ ನೀಡಿ ಸಾರ್ವಜನಿಕರಿಗೂ ಬಹಳ ತೊಂದರೆಯಾಗುತ್ತಿರುವುದರಿಂದ ಗ್ರಾಮ ಪಂಚಾಯತಿಗೆ ಆಯ್ಕೆಯಾಗುವ ಮಹಿಳಾ ಚುನಾಯಿತ ಅಧ್ಯಕ್ಷರು, ಉಪಾಧ್ಯಕ್ಷಕರು, ಸದಸ್ಯರ ಪತಿ ಅಥವಾ ಕುಟುಂಬದ ಸದಸ್ಯರು ಗ್ರಾಮ ಪಂಚಾಯತಿಯ ದೈನಂದಿನ ಕಾರ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡಿದಲ್ಲಿ ಅವರ ವಿರುದ್ಧ ಕ್ರಮ ಕೈಗೊಂಡು ಮಹಿಳಾ ಸದಸ್ಯರ ಸದಸ್ಯತ್ವ ರದ್ದು ಮಾಡುವಂತೆ ಮನವಿ ಮಾಡಿದ್ದರು.
ಅವರ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪರರಣ 110(ಎ) ಯಂತೆ ಪಂಚಾಯತ್ ಸದಸ್ಯರ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸದೆ ಗ್ರಾಮ ಪಂಚಾಯತಿಗಳಲ್ಲಿ ಚುನಾಯಿತರಾಗಿರುವ ಮಹಿಳಾ ಪ್ರತಿನಿಧಿಗಳ ಪತಿ ಅಥವಾ ಕುಟುಂಬ ಸದಸ್ಯರು, ಗ್ರಾಮ ಪಂಚಾಯತಿ ವಿಷಯಗಳಲ್ಲಿ, ಕಾರ್ಯನಿರ್ವಹಣೆಯಲ್ಲಿ , ಸಭೆಗಳಲ್ಲಿ ಗ್ರಾಮ ಪಂಚಾಯತಿ ಅಧಿಕಾರಿ, ನೌಕರರ ವಿಷಯಗಳಲ್ಲಿ ಅಥವಾ ಗ್ರಾಮ ಪಂಚಾಯತಿಯ ಯಾವುದೇ ಕಡತಕ, ಸಂಬಂಧಿಸಿದ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಹಸ್ತಕ್ಷೇಪ ಮಾಡಿದಲ್ಲಿ ಅಂತಹ ಮಹಿಳಾ ಚುನಾಯಿತ ಪ್ರತಿನಿಧಿಗಳ ವಿರುದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 41(ಎ) ಮತ್ತು ಪ್ರಕರಣ 48(4) ರ ಅಡಿಯಲ್ಲಿ ಸೂಕ್ತ ನಡೆಸಿ ಆರೋಪ ಸಾಬೀತಾದರೆ ಮಹಿಳಾ ಸದಸ್ಯರ ಸದಸ್ಯತ್ವ ರದ್ದು ಮಾಡುವುದಾಗಿ ಪಂಚಾಯತ್ ಇಲಾಖೆ ನಿರ್ದೇಶಕರು ಎಲ್ಲ ಗ್ರಾಮ ಪಂಚಾಯತಿಗಳಿಗೆ ಆದೇಶಿಸಿದ್ದಾರೆ.
ಜಾರಿಯಾಗದ ನಿಯಮ:
ಗ್ರಾಮ ಸ್ವರಾಜ್ ಕಾಯ್ದೆಯಲ್ಲಿ ಮಹಿಳಾ ಸದಸ್ಯರ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವ ಗಂಡ ಮತ್ತು ಕುಟುಂಬಸ್ತರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಿದ್ದರೂ, ಈ ಬಗ್ಗೆ ದೂರು ಸಲ್ಲಿಸಿದರೂ, ಅದು ಕೋರ್ಟ್‌ನಲ್ಲಿ ಇತ್ಯರ್ಥವಾಗಬೇಕಿದ್ದರಿಂದ ಬಹುತೇಕರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿರುವುದೇ ಹೆಚ್ಚಾಗಿತ್ತು. ಹೀಗಾಗಿ ಇದನ್ನು ತಪ್ಪಿಸಲು ಈಗ ಮಹಿಳಾ ಸದಸ್ಯರ ಅಧಿಕಾರದಲ್ಲಿ ಹಸ್ತಕ್ಷೇಪದ ದೂರು ಕೇಳಿ ಬಂದರೆ, ಇಲಾಖೆಯ ಮುಖ್ಯಸ್ಥರೇ ತನಿಖೆಗೆ ಆದೇಶಿಸಿ, ಸೂಕ್ತ ದಾಖಲೆಗಳ ಸಮೇತ ಸಾಬೀತಾದರೆ, ಅವರೇ ಮಹಿಳಾ ಸದಸ್ಯರ ಸದಸ್ಯತ್ವ ರದ್ದು ಮಾಡಲು ಹೊಸ ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಗ್ರಾಮ ಪಂಚಾಯತಿಗಳಿಗೆ ಮಹಿಳಾ ಸದಸ್ಯರು ಆಯ್ಕೆಯಾದರೂ, ಅವರ ಅಧಿಕಾರವನ್ನು ಪತಿ ಅಥವಾ ಕುಟುಂಬಸ್ಥರು ನಡೆಸುವುದು ಪಂಚಾಯತಿ ಕಾಯ್ದೆಯ ಆಶಯಗಳಿಗೆ ವಿರುದ್ಧವಾಗಿದೆ. ಚುನಾಯಿತರಾದ ಮಹಿಳಾ ಸದಸ್ಯರು ಅಧಿಕಾರ ನಡೆಸಲು ಆಗದಿದ್ದರೆ, ಅವರು ಅಸಮರ್ಥರು ಎಂದಾಗುತ್ತದೆ. ಆ ಕಾರಣದಿಂದ ಅವರ ಸದಸ್ಯತ್ವ ರದ್ದು ಮಾಡಬೇಕು.
-ರವಿಕೃಷ್ಣಾ ರೆಡ್ಡಿ, ಗೌರವ ಅಧ್ಯಕ್ಷರು, ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ.