Advertisement

ಸಾವಯವ ಗೊಬ್ಬರ ಬಳಸಿ ಕೃಷಿಯಲ್ಲಿ ಖುಷಿ ಕಂಡ ಗ್ರಾಪಂ ಸದಸ್ಯ

12:55 PM Mar 25, 2022 | Team Udayavani |

ದೇವನಹಳ್ಳಿ: ಸಮಗ್ರ ಕೃಷಿ ಚಟುವಟಿಕೆ ಮಾಡುವು ದರ ಮೂಲಕ ಜಿಲ್ಲೆ ಮತ್ತು ತಾಲೂಕಿಗೆ ಕನ್ನಮಂಗಲ ಗ್ರಾಪಂ ಸದಸ್ಯ ಲಕ್ಷ್ಮೀಕಾಂತ್‌ ಕೃಷಿಯಲ್ಲಿ ತೊಡಗಿಸಿಕೊಂಡು ರೈತರಿಗೆ ಮಾದರಿಯಾಗಿದ್ದಾರೆ.

Advertisement

ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಯಲುಸೀಮೆಯ ಪ್ರದೇಶವಾಗಿದ್ದು, ಯಾವುದೇ ನದಿಮೂಲ, ನಾಲೆಗಳು ಇಲ್ಲದೆ ಮಳೆಯಾಶ್ರಿತ ಮತ್ತು ಕೊಳವೆಬಾವಿಗಳ ಮೇಲೆ ರೈತರು ಅವಲಂಬಿತರಾಗಿದ್ದಾರೆ. ಇರುವ ಅಲ್ಪಸ್ವಲ್ಪದ ನೀರಿನಲ್ಲಿಯೇ ಬೆಳೆ ಬೆಳೆದು ರೈತರು ತಮ್ಮ ಆರ್ಥಿಕಮಟ್ಟ ಸುಧಾರಿಸುತ್ತಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆ ಕುಂಠಿತ

ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭಗೊಂಡ ನಂತರ ಭೂಮಿಗೆ ಚಿನ್ನದ ಬೆಲೆ ಬಂದಿದೆ. ತಾಲೂಕಿನ ಭಟ್ಟರಮಾರೇನಹಳ್ಳಿ ಇತರೆ ಕಡೆಗಳಲ್ಲಿ ಕೆಐಡಿಬಿ ಭೂಸ್ವಾಧೀನ, ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಡಿಬ ಭೂಸ್ವಾಧೀನ ಪ್ರಕ್ರಿಯೆ, ಕುಂದಾಣ ಹೋಬಳಿ ರಾಮನಾಥಪುರ, ರಬ್ಬನಹಳ್ಳಿ, ದೊಡ್ಡಗೊಲ್ಲಹಳ್ಳಿ ಇತರೆ ಕಡೆಗಳಲ್ಲಿ ಎಸ್‌ಟಿಐಆರ್‌ ಗೆ ಭೂಸ್ವಾಧೀನ ಪ್ರಕ್ರಿಯೆ ಕುಂಠಿತಗೊಂಡಿದೆ. ಅದರಲ್ಲೂ ರೈತರು ಇರುವ ಅಲ್ಪಸ್ವಲ್ಪದ ಜಮೀನಿನಲ್ಲೇ ತರಕಾರಿ ಹಾಗೂ ಇತರೆ ಬೆಳೆ ಬೆಳೆಯುತ್ತಿದ್ದಾರೆ. ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಕೆಂಪತಿಮ್ಮನಹಳ್ಳಿ ಗ್ರಾಮದಲ್ಲಿರುವ ಕನ್ನಮಂಗಲ ಗ್ರಾಪಂ ಸದಸ್ಯ ಲಕ್ಷ್ಮೀಕಾಂತ ಕೃಷಿಯಲ್ಲಿ ತೊಡಗಿಕೊಂಡು ರೈತರಿಗೆ ಮಾದರಿಯಾಗಿದ್ದಾರೆ.

ಇಳುವರಿ ಪಡೆಯುವಲ್ಲಿ ಯಶಸ್ವಿ

Advertisement

ತಾತ, ಮುತ್ತಾತ ಅವರ ಕಾಲದಿಂದಲೂ ಕೃಷಿಯನ್ನು ಮಾಡಿಕೊಂಡು ಬರುತ್ತಿರುವ ಕೃಷಿಕ ಲಕ್ಷ್ಮೀಕಾಂತ ಮೊದಲಿಗೆ ತಮ್ಮ ಜಮೀನಿನಲ್ಲಿ ಸಮಗ್ರ ಕೃಷಿಯನ್ನು ಮಾಡುವುದರ ಮೂಲಕ ಕೃಷಿ ಭೂಮಿಗೆ ಅತ್ಯಮುಲ್ಯವಾದ ಕೊಟ್ಟಿಗೆ ಗೊಬ್ಬರವನ್ನು ಬಳಸಿ, ಯಾವುದೇ ರಾಸಾಯನಿಕ ಗೊಬ್ಬರ ಸೇರಿಸದೆ, ಉತ್ತಮ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ಬ್ಲೂ ದ್ರಾಕ್ಷಿ, ಶುಂಠಿ, ಗುಲಾಬಿ, ತೊಗರಿ ಸೇರಿದಂತೆ ಇತರೆ ತೋಟಗಾರಿಕಾ ಬೆಳೆ ಬೆಳೆದು ಹೆಚ್ಚು ಲಾಭ ಗಳಿಸಿದ್ದಾರೆ.

ಗ್ರಾಪಂ ಸದಸ್ಯ ಲಕ್ಷ್ಮೀಕಾಂತ ಮಾತನಾಡಿ, ಕೃಷಿಯನ್ನು ತಂದೆ ತಾಯಿಗಳಿಂದ ಮಾಡಿಕೊಂಡು ಬರಲಾಗಿದೆ. ರೋಜಾ ಹೂವು, ಸೌತೇಕಾಯಿ, ತೊಗರಿ, ದ್ರಾಕ್ಷಿ ಸೇರಿ ಹಲವು ತೋಟಗಾರಿಕಾ ಬೆಳೆ ಬೆಳೆದುಕೊಂಡು ಬರಲಾಗುತ್ತಿದೆ. ಸಾವಯವ ಪದ್ಧತಿಯಲ್ಲಿ ಕೊಟ್ಟಿಗೆ ಗೊಬ್ಬರವನ್ನು ಬಳಸಿಕೊಂಡು ಗಿಡಗಳಿಗೆ ಫ‌ಲವತ್ತತೆ ಹೆಚ್ಚಿಸಿಕೊಂಡು, ಉತ್ತಮ ಇಳುವರಿ ಪಡೆದು ಲಾಭಗಳಿಸಿಕೊಂಡು ಬರಲಾಗುತ್ತಿದೆ ಎಂದರು.

ಲಾಭ ಕಾಣಲು ಸಾಧ್ಯ

ಕಳೆದ ಬಾರಿ ದ್ರಾಕ್ಷಿಯನ್ನು ಎರಡೂವರೆ ಎಕರೆ ಪ್ರದೇಶದಲ್ಲಿ 30 ಟನ್‌ ಬೆಳೆದಿದ್ದೇವೆ. ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಯಲಾಗುತ್ತಿದೆ. ಬಹಳಷ್ಟು ರೈತರು ಈಗಲೂ ಸಹ ಹನಿ ನೀರಾವರಿ ಪದ್ಧತಿಯನ್ನು ಬಳಸಿಕೊಂಡು ಬೆಳೆಯನ್ನು ಬೆಳೆದಿದ್ದಾರೆ. ಭೂಮಿಗೆ ಬೇಕಾದಂತಹ ಪೋಷಕಾಂಶವನ್ನು ಸರಿಯಾದ ಸಮಯಕ್ಕೆ ನೀಡಿದರೆ ಬೆಳೆ ಉತ್ತಮವಾಗಿ ಬರಲಿದ್ದು, ಹಾಕಿರುವ ಬಂಡವಾಳ ಸಮೇತ ಲಾಭ ಕಾಣಲು ಸಾಧ್ಯವಾಗುತ್ತದೆ ಎಂದರು.

ಸಮಸ್ಯೆ ಪರಿಹಾರಕ್ಕೆ ಶ್ರಮ

ಗ್ರಾಪಂ ಸದಸ್ಯನಾಗಿ ರೈತರ ಮಗನಾಗಿರುವುದರಿಂದ ಕಷ್ಟಗಳ ಬಗ್ಗೆ ಅರಿವಿದೆ. ಜನರ ಕೆಲಸ ಕಾರ್ಯಗಳಿಗೆ ಸದಾ ಸ್ಪಂದಿಸುವ ಕೆಲಸ ಮಾಡಿಕೊಂಡು ಬರಲಾಗಿದೆ. ಗ್ರಾಮಗಳಲ್ಲಿ ಮೂಲಭೂತ ಸಮಸ್ಯೆ ಇದ್ದರೆ ಕೂಡಲೇ ಪರಿಹರಿಸಲು ಗ್ರಾಪಂ ಮಟ್ಟದಲ್ಲಿ ಶ್ರಮಿಸಲಾಗುತ್ತಿದೆ. ಕೃಷಿಯ ಜೊತೆ ಜೊತೆಯಲ್ಲಿ ಜನಸ್ಪಂದನೆ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next