Advertisement

11ರಂದು ಗ್ರಾಪಂ ನೌಕರರ ಸಂಘದ ಸಮಾವೇಶ: ಸುತಾರ

12:44 PM Apr 09, 2022 | Team Udayavani |

ಅಫಜಲಪುರ: ಪಟ್ಟಣದ ಬಸವ ಮಂಟಪದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್‌ ನೌಕರರ ಸಂಘದ 7ನೇ ತಾಲೂಕು ಮಟ್ಟದ ಸಮ್ಮೇಳನವನ್ನು ಏ.11ರಂದು ಹಮ್ಮಿಕೊಂಡಿದ್ದು, ಸಮ್ಮೇಳನದಲ್ಲಿ ನೌಕರರಿಗೆ ಆಗುವ ಸಮಸ್ಯೆಗಳ ಬಗ್ಗೆ ಸುದೀರ್ಘ‌ವಾಗಿ ಚರ್ಚೆ ನಡೆಸಲಾಗುವುದು ಎಂದು ಗ್ರಾಮ ಪಂಚಾಯಿತಿ ನೌಕರರ ಮುಖಂಡರಾದ ಮಲ್ಲಿಕಾರ್ಜುನ ಸುತಾರ ಹಾಗೂ ಪರಮೇಶ್ವರ ಕಾಸರ ತಿಳಿಸಿದರು.

Advertisement

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ನೀತಿಯಿಂದ ಈಗ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ನೌಕರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮೊದಲು ದೊಡ್ಡ ಪಟ್ಟಣಗಳಲ್ಲಿ ನೀರು ಸರಬರಾಜು ಮಾಡಲು ಖಾಸಗಿ ಕಂಪನಿಗಳಿಗೆ ಅವಕಾಶ ನೀಡಿದ ಪರಿಣಾಮ ಹಲವಾರು ಜನ ಕೆಲಸ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಯಾವುದೇ ಕೆಲಸದ ಭದ್ರತೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅದೇ ರೀತಿ ಪ್ರತಿ ಹಳ್ಳಿಗೂ ನೀರು ಸರಬರಾಜು ಮಾಡಲು ಪಂಚಾಯಿತಿ ಮಟ್ಟದಲ್ಲಿ ಮೀಟರ್‌ ಅಳವಡಿಸಿ ನೀರು ಕೊಡುತ್ತಿರುವುದರಿಂದ ಸುಮಾರು 6-7 ಜನ ಇರುವಂತಹ ಪಂಚಾಯಿತಿಯಲ್ಲಿ ಅವಶ್ಯಕತೆಗೆ ತಕ್ಕಂತೆ ಎಂದು ಹೇಳಿ ಎರಡ್ಮೂರು ಜನರ ಮೇಲೆ ಹೆಚ್ಚಿನ ಕೆಲಸದ ಭಾರ ಹಾಕಿ ಕೆಲವರನ್ನು ತೆಗೆದು ಹಾಕುವಂತ ಪರಿಸ್ಥಿತಿ ಬರುತ್ತದೆ. ಸುಮಾರು ವರ್ಷಗಳಿಂದ ಕೆಲಸದ ಯಾವುದೇ ಭದ್ರತೆ ಇಲ್ಲದೆ ಕನಿಷ್ಟ ಸಂಬಳವಿಲ್ಲದೆ ದುಡಿದುಕೊಂಡು ಬಂದಂತಹ ನೌಕರರು ಬೀದಿ ಪಾಲಾಗುತ್ತಾರೆ. ಇಂತ ನೀತಿ ಹಿಮ್ಮೆಟ್ಟಿಸಲು ಸಿ.ಐ.ಟಿ.ಯು ನೇತೃತ್ವದಲ್ಲಿ ಕರ್ನಾಟಕ ಗ್ರಾಮ ಪಂಚಾಯಿತಿ ನೌಕರರ ಸಂಘ ರಚನೆ ಮಾಡಿ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡುವುದಕ್ಕೆ ಆಶ್ರಯ ಪಡೆದಿದ್ದಾರೆ ಎಂದರು.

ಪಂಚಾಯತ್‌ ನೌಕರರು ಗೌರವದ ಬದುಕು ನಡೆಸಲು ಸಂಘಟಿತ ಹೋರಾಟ ಅವಶ್ಯಕವಾಗಿದೆ. ಆದ್ದರಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ತಾಲೂಕು, ಜಿಲ್ಲಾ, ರಾಜ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಬೇಕಾಗಿದೆ. ಹೀಗಾಗಿ ಏಪ್ರಿಲ್‌ 11ರಂದು ಪಟ್ಟಣದ ಬಸವ ಮಂಟಪದಲ್ಲಿ ತಾಲೂಕು ಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ತಾಲೂಕಿನ ನಿವೃತ್ತಿಯಾದವರ ಸುಮಾರು ಮೂರು ತಿಂಗಳ ಸಂಬಳ ಕೊಡದೆ ಇರುವುದು ಮತ್ತು ಅವರಿಗೆ ನಿವೃತ್ತಿವೇತನ ಕೊಡುವುದರ ಬಗ್ಗೆ ಚರ್ಚೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ರೂಪಿಸಲಾಗುತ್ತದೆ. ಅಲ್ಲದೇ ಪ್ರತಿ ತಿಂಗಳು 8ನೇ ತಾರಿಖೀಗೆ ಸಂಬಳ ನೀಡಬೇಕು ಎಂದು ಸಮ್ಮೇಳನದಲ್ಲಿ ಆಗ್ರಹಿಸಲಾಗುವುದು ಎಂದರು.

ಗ್ರಾಮ ಪಂಚಾಯಿತಿ ನೌಕರರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಆಗುತ್ತಿರುವ ಅನ್ಯಾಯಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಸರಕಾರಕ್ಕೆ ಎಚ್ಚರಿಕೆ ನೀಡುವ ಉದ್ದೇಶದಿಂದ ಬೃಹತ್‌ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಹಕಾರ ನೀಡಿ ಸಮ್ಮೇಳನ ಯಶಸ್ವಿಗೊಳಿಸಬೇಕು. -ಶ್ರೀಮಂತ ಬಿರಾದಾರ, ಸಿಐಟಿಯು ಸಂಚಾಲಕ

Advertisement
Advertisement

Udayavani is now on Telegram. Click here to join our channel and stay updated with the latest news.

Next