ಶ್ರೀನಿವಾಸಪುರ: ಪಂಚಾಯ್ತಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಕನಿಷ್ಠ ವೇತನ ಕೊಡದೆ ವರ್ಷದಿಂದ ಸತಾಯಿಸಲಾಗುತ್ತಿದ್ದು ಅವರ ಕುಟುಂಬ ಗಳನ್ನು ಹೇಗೆ ಪೋಷಣೆ ಮಾಡಬೇಕು ಎಂದು ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಪ್ರಶ್ನಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಪಂ ಮುಂದೆ ಮಂಗಳವಾರ ಗ್ರಾಪಂ ನೌಕರರು ಮತ್ತು ಸಿಐಟಿಯು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕಾಯಂಗೊಳಿಸಿಲ್ಲ:ಸಿಬ್ಬಂದಿಗೆ ವೇತನ ಸಮಯಕ್ಕೆ ಸರಿಯಾಗಿ ಕೊಡಬೇಕು. ಪ್ರತಿ ತಿಂಗಳು ದಿನಾಂಕ 5 ರೊಳಗೆ ಸಂಬಳ ಕೊಡಬೇಕು. ಈಗಾಗಲೆ ಬಾಕಿ ವೇತನ ಬಿಡುಗಡೆ ಮಾಡಿ ಎಲ್ಲಾ ಸಿಬ್ಬಂದಿಗೆ ಸಮವಸ್ತ್ರ ಸೇರಿದಂತೆ ಸೌಲಭ್ಯ ಕಲ್ಪಿಸ ಬೇಕೆಂದರು. ಪಂಚಾಯ್ತಿಗಳಲ್ಲಿ ದುಡಿಯುತ್ತಿರುವ ನೌಕರರನ್ನು 2018ರಲ್ಲಿ ಸರ್ಕಾರ ಕಾಯಂಗೊಳಿಸಿದೆ. ಆದರೆ ರಾಯಲ್ಪಾಡು, ಮುದಿ ಮಡುಗು, ಕೂರಿಗೇಪಲ್ಲಿ,ಯರ್ರಂವಾರಿಪಲ್ಲಿ ಪಂಚಾಯ್ತಿ ಗಳಲ್ಲಿ ಇನ್ನೂ ಹಾಗೆ ಉಳಿಸಿಕೊಂಡಿದ್ದಾರೆಂದರು.
ಆಗ್ರಹ: ಪಂಚಾಯ್ತಿಗಳಲ್ಲಿ ಎಲ್ಲಾ ಕೆಲಸಗಳಿಗೂ ಗ್ರಾಪಂ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುವ ಅಧಿಕಾರಿಗಳಿಗೆ ನೇಮಕ ಮಾಡಿಕೊಂಡ ನೌಕರರಿಗೆ ಸಂಬಳ ಕೊಡ ಬೇಕೆನ್ನುವ ಕನಿಷ್ಠ ಜ್ಞಾನ ಮತ್ತು ಪ್ರಜ್ಞೆ ಇಲ್ಲವೆ ?. ಕೂಡಲೇ ಸರ್ಕಾರದ ಆದೇಶ ಜಾರಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು 15 ದಿನದೊಳಗಾಗಿ ಎಲ್ಲರ ವೇತನ ನೀಡಬೇಕೆಂದು ಆಗ್ರಹಿಸಿದರು.
ಕೆಪಿಆರ್‌ಎಸ್ ತಾಲೂಕು ಅಧ್ಯಕ್ಷ ಪಾತಕೋಟೆ ನವೀನ್‌ಕುಮಾರ್ ಮಾತನಾಡಿ, 1993 ಕಾಯ್ದೆ ಅನ್ವಯ ಪಂಚಾಯ್ತಿಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸಿಬ್ಬಂದಿ ಸೇವೆ ಕಾಯಂಗಾಗಿ ಅನುಮೋದನೆಗೆ ಅವಕಾಶ ನೀಡಿ ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲು ಪಿಡಿಒಗಳಿಗೆ ಸೂಚಿಸಬೇಕು. ಕಾರ್ಮಿಕ ಇಲಾಖೆ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಂತೆ ಕನಿಷ್ಠ ವೇತನ ನೀಡಿ ಎಲ್ಲಾ ಸಿಬ್ಬಂದಿ ಸೇವಾ ಪುಸ್ತಕ ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಈ ವೇಳೆ ವಿವಿಧ 6 ಬೇಡಿಕೆಗಳ ಪಟ್ಟಿಯನ್ನು ತಾಪಂ ವ್ಯವಸ್ಥಾಪಕ ಸುರೇಶ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ತಾಪಂ ವ್ಯವಸ್ಥಾಪಕ ಸುರೇಶ್, ಅಧಿಕಾರಿಗಳ ಗಮನಕ್ಕೆ ತಂದು ಈಡೇರಿಕೆಗೆ ಆದ್ಯತೆ ನೀಡುತ್ತೇವೆಂದರು. ಪ್ರತಿಭಟನಾ ಕಾರರು ಬೇಡಿಕೆಗಳ ಪರ ಸರ್ಕಾರದ ಮತ್ತು ಪಾಲನೆಯಲ್ಲಿ ಅಧಿಕಾರಿಗಳ ವಿರೋಧಿ ಧೋರಣೆ ಖಂಡಿಸಿ ಘೋಷಣೆ ಕೂಗಿದರು. ಈಶ್ವರಪ್ಪ, ಶಂಕರಪ್ಪ ಇದ್ದರು.