Advertisement
ಕಳೆದ 2021 ಫೆ.8 ರಿಂದ 12ರವರೆಗೂ ಜಿಲ್ಲೆಯ 157 ಗ್ರಾಪಂ ಪೈಕಿ 152 ಗ್ರಾಪಂಗೆ ಚುನಾವಣೆ ಮೂಲಕ ಆಯ್ಕೆಗೊಂಡಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಮೊದಲ 30 ತಿಂಗಳ ಅಧಿಕಾರ ಅವಧಿ ಮುಂದಿನ ಆಗಸ್ಟ್ ತಿಂಗಳಿಗೆ ಅಂತ್ಯ ಕಾಣಲಿದೆ. ಹೀಗಾಗಿ ಜಿಲ್ಲಾಡಳಿತ ಮುಂದಿನ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಲಾಟರಿ ಮೂಲಕ ಮೀಸಲು ನಿಗದಿಪಡಿಸಿದೆ.
Related Articles
Advertisement
ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆ : ಜಿಲ್ಲೆಯಲ್ಲಿ ಮುಂಬರುವ ಲೋಕಸಭೆ, ಜಿಪಂ ಹಾಗೂ ತಾಪಂ ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳಿಗೆ ತಮ್ಮ ಬೆಂಬಲಿಗರ ಮೂಲಕ ಗ್ರಾಪಂಗಳಲ್ಲಿ ಅಧಿಕಾರ ಹಿಡಿಯುವುದು ಪ್ರತಿಷ್ಠೆಯಾಗಿದೆ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಚುಕ್ಕಾಣಿ ಹಿಡಿದಿದೆ. ಅದೇ ರೀತಿ ಜಿಲ್ಲೆಯ ಶಿಡ್ಲಘಟ್ಟ, ಚಿಂತಾಮಣಿ, ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರದಲ್ಲಿ ಶಾಸಕರು ಬದಲಾಗಿದ್ದಾರೆ. ಹೀಗಾಗಿ ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಜಿಲ್ಲೆಯಲ್ಲಿ ಹೊಸ ರಾಜಕೀಯ ಚಿತ್ರಣಕ್ಕೆ ಸಾಕ್ಷಿಯಾಗಲಿದೆ. ಈಗಾಗಲೇ ವಿರೋಧ ಪಕ್ಷಗಳಲ್ಲಿದ್ದ ಸದಸ್ಯರು, ಈಗ ಆಡಳಿತ ಪಕ್ಷಕ್ಕೆ ಜಿಗಿಯುತ್ತಿದ್ದಾರೆ. ಆಡಳಿತ ಪಕ್ಷದಲ್ಲಿ ಇದ್ದವರು ವಿರೋಧ ಪಕ್ಷಗಳಿಗೆ ಜಿಗಿಯುತ್ತಿದ್ದಾರೆ. ಹೀಗಾಗಿ ಮುಂಬರುವ ತಾಪಂ, ಜಿಪಂ ಹಾಗೂ ಲೋಕಸಭಾ ಚುನಾವಣೆ ವೇಳೆಗೆ ಹಳ್ಳಿ ರಾಜಕೀಯ ಚಿತ್ರಣವೇ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗಳಿಂದ ಬದಲಾಗಲಿದೆ.
ಗೋವಾ, ಧಾರ್ಮಿಕ ಕೇಂದ್ರಗಳತ್ತ ಪ್ರವಾಸ!: ಜಿಲ್ಲಾಡಳಿತ ಗ್ರಾಪಂಗಳ ಮುಂದಿನ 30 ತಿಂಗಳ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಅಂತಿಮ ಗೊಳಿಸಿ ಪ್ರಕಟಿಸಿದ ಬೆನ್ನಲ್ಲೇ ಗ್ರಾಪಂ ಸದಸ್ಯರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಪ್ರವಾಸ ಭಾಗ್ಯ ಏರ್ಪ ಡಿಸಿದ್ದಾರೆ. ಸದಸ್ಯರನ್ನು ತಮ್ಮ ಕಡೆ ಒಲಿಸಿಕೊಳ್ಳಲು ಗ್ರಾಪಂ ಸದಸ್ಯರಿಗೆ ಗೋವಾ ಮತ್ತಿತರ ರಾಜ್ಯಗಳಿಗೆ ಪ್ರವಾಸ ಏರ್ಪಡಿಸುವುದರ ಜತೆಗೆ ಧರ್ಮಸ್ಥಳ, ತಿರುಪತಿ, ಶಿರಡಿ ಸಾಯಿಬಾಬಾ, ಕುಕ್ಕೆ ಸುಬ್ರಹ್ಮಣ್ಯ ಹೀಗೆ ಹಲವು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೂ ಗ್ರಾಪಂ ಸದಸ್ಯರನ್ನು ಕರೆದೊಯ್ಯುತ್ತಿದ್ದಾರೆ. ಆ ಮೂಲಕ ಧಾರ್ಮಿಕ ಕೇಂದ್ರಗಳಲ್ಲಿ ತಮ್ಮ ಪರ ನಿಲ್ಲುವಂತೆ ಆಣೆ, ಪ್ರಮಾಣ ಮಾಡಿಸಲು ಆಕಾಂಕ್ಷಿಗಳು ಮುಂದಾಗಿದ್ದಾರೆ.
– ಕಾಗತಿ ನಾಗರಾಜಪ್ಪ