Advertisement

ಗ್ರಾ.ಪಂ.: ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆ ಮುಕ್ತಾಯ

12:07 AM Dec 12, 2020 | mahesh |

ಬೆಂಗಳೂರು: ಕಸ್ತೂರಿ ರಂಗನ್‌ ವರದಿ ಜಾರಿ ವಿರೋಧಿಸಿ ಕೆಲವು ಗ್ರಾಮಗಳ ಚುನಾವಣ ಬಹಿಷ್ಕಾರದ ನಡುವೆಯೇ ಮೊದಲ ಹಂತದ ಗ್ರಾ.ಪಂ. ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯವಾಗಿದೆ. ಮೊದಲ ಹಂತಕ್ಕೆ ಶುಕ್ರವಾರ ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡಿದ್ದು, ಪರಿಶೀಲನೆ ಮತ್ತು ವಾಪಸಾತಿ ಬಾಕಿ ಉಳಿದಿದೆ. 2ನೇ ಹಂತದ ಚುನಾವಣೆಗೆ ಶುಕ್ರವಾರ ಅಧಿಸೂಚನೆ ಹೊರಬಿದ್ದಿದ್ದು, ನಾಮಪತ್ರ ಸಲ್ಲಿಕೆ ಚಟುವಟಿಕೆ ಬಿರುಸು ಪಡೆದಿದೆ.

Advertisement

ಇಂದು ಪರಿಶೀಲನೆ
ಮೊದಲ ಹಂತದ ನಾಮಪತ್ರ ಪರಿಶೀಲನೆ ಶನಿವಾರ ನಡೆಯಲಿದ್ದು, ಉಮೇದುವಾರಿಕೆ ವಾಪಸ್‌ ಪಡೆದು ಕೊಳ್ಳಲು ಡಿ. 14 ಕೊನೇ ದಿನ. ಇದರ ಬಳಿಕ ಕಣದಲ್ಲಿ ಅಂತಿಮವಾಗಿ ಉಳಿಯುವ ಅಭ್ಯರ್ಥಿಗಳ ಲೆಕ್ಕ ಸಿಗಲಿದೆ. ಡಿ. 22ರಂದು ಮತದಾನ ನಡೆಯಲಿದೆ.

79 ಸಾವಿರ ನಾಮಪತ್ರ
ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ 117 ತಾಲೂಕುಗಳ 3,042 ಗ್ರಾ. ಪಂ.ಗಳಲ್ಲಿ ಡಿ. 10ರ ವರೆಗೆ ಅಂದಾಜು 79 ಸಾವಿರ ನಾಮಪತ್ರಗಳು ಸಲ್ಲಿಕೆಯಾಗಿವೆ.

2,710 ಗ್ರಾ.ಪಂ.ಗಳಿಗೆ ಚುನಾವಣೆ

ಎರಡನೇ ಹಂತದಲ್ಲಿ 109 ತಾಲೂಕುಗಳ 2,710 ಗ್ರಾ.ಪಂ.ಗಳಿಗೆ ಡಿ. 27ರಂದು ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ ಚುನಾವಣೆ ನಡೆಯಬೇಕಿದ್ದ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ತಾಲೂಕುಗಳ 112 ಗ್ರಾ.ಪಂ.ಗಳಿಗೆ ಮೊದಲ ಹಂತದಲ್ಲೇ ಮತದಾನ ನಡೆಸಲು ಚುನಾವಣ ಆಯೋಗ ನಿರ್ಧರಿಸಿದೆ.

ಚುನಾವಣೆ ಬಹಿಷ್ಕಾರ
ಕಸ್ತೂರಿರಂಗನ್‌ ವರದಿ ಜಾರಿ ವಿರೋಧಿಸಿ ಸಕಲೇಶಪುರದ ಹೆತ್ತೂರು, ಹೊಂಗಡಹಳ್ಳ, ಹೆಗ್ಗದ್ದೆ ಗ್ರಾ.ಪಂ.ಗಳ ಗ್ರಾಮಸ್ಥರು ಚುನಾವಣೆಯನ್ನೇ ಬಹಿ ಷ್ಕರಿಸಿದ್ದು, ಒಂದೇ ಒಂದು ನಾಮಪತ್ರವೂ ಸಲ್ಲಿಕೆಯಾಗಿಲ್ಲ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾ.ಪಂ.ನಲ್ಲೂ ಪ.ಪಂ. ಮಾಡಬೇಕು ಎಂದು ಆಗ್ರಹಿಸಿ ಚುನಾವಣೆ ಬಹಿಷ್ಕರಿಸಲಾಗಿದೆ. ಇಲ್ಲೂ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿಲ್ಲ. ಬಾಗಲಕೋಟೆ ಜಿಲ್ಲೆಯ ಸಾವಳಗಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಒಂದೇ ಒಂದು ನಾಮಪತ್ರವನ್ನು ಸಲ್ಲಿಕೆ ಮಾಡಿಲ್ಲ.

5ರಿಂದ 25 ಲಕ್ಷ ರೂ.ಗೆ ಹರಾಜು
ಚುನಾವಣ ಆಯೋಗದ ಎಚ್ಚರಿಕೆ ನಡುವೆಯೂ ಹಾಸನ ಜಿಲ್ಲೆಯ ಕೆಲವು ಗ್ರಾ.ಪಂ.ಗಳಲ್ಲಿ ಶುಕ್ರವಾರವೂ ಗ್ರಾ.ಪಂ. ಸ್ಥಾನಗಳ ಹರಾಜು ನಡೆದಿದೆ. ಕೆಲವು ಕಡೆಗಳಲ್ಲಿ 5 ಲಕ್ಷದಿಂದ 25 ಲಕ್ಷ ರೂ.ಗಳ ವರೆಗೆ ಹರಾಜು ಕೂಗಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next