Advertisement
ಹಳ್ಳಿಕಟ್ಟೆ, ಹೋಟೆಲ್‌ಗಳೇ ಆಯ್ಕೆ ತಾಣಗಳು: ಗ್ರಾಮದಲ್ಲಿರುವ ಹಳ್ಳಿಕಟ್ಟೆ ಹಾಗೂ ಹೋಟೆಲ್‌ಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ನಾಮಪತ್ರ ಸಲ್ಲಿಕೆಗೆ ದಿನ ಹತ್ತಿರವಾಗುತ್ತಿದ್ದಂತೆ ಆಕಾಂಕ್ಷಿತರಲ್ಲಿ ತಳ ಮಳ ತರಿಸಿದೆ. ಮೂರು ಪಕ್ಷಗಳ ನಾಯಕರು ಬೂತ್ ಮಟ್ಟದ ಮುಖಂಡರಿಗೆ ಅಭ್ಯರ್ಥಿಗಳ ಆಯ್ಕೆಗೆ ಸೂಚಿಸಿರು ವುದರಿಂದ ಯಾರಿಗೆ ಟಿಕೆಟ್ ನೀಡು ವುದು ಎಂಬ ಗೊಂದಲವೂ ಮುಂದು ವರೆದಿದೆ.
Related Articles
Advertisement
ಆಕಾಂಕ್ಷಿತರಿಂದಲೇ ಸಮಸ್ಯೆ ಪರಿಹರಿಸುವ ಯತ್ನ: ಹೆಚ್ಚಿನ ಸಂಖ್ಯೆಯಲ್ಲಿರುವಆಕಾಂಕ್ಷಿತರನ್ನು ಸಮಾಧಾನಗೊಳಿಸಲು ಬೂತ್ ಮಟ್ಟದ ರಾಜಕೀಯ ಮುಖಂಡರು ಆಕಾಂಕ್ಷಿತರನ್ನು ಒಂದೆಡೆ ಸೇರಿಸಿ, ಯಾರು ಚುನಾವಣೆಯಲ್ಲಿ ಗೆಲ್ಲಲು ಹಾಗೂ ಹಣ ಖರ್ಚು ಮಾಡುವ ಸಾಮರ್ಥ್ಯ ವಿರುವವರು ನೀವೇ ಚರ್ಚಿಸಿ, ನಿರ್ಧಾರ ಕೈಗೊಳ್ಳುವಂತೆ ಆಕಾಂಕ್ಷಿತರ ಹೆಗಲಿಗೆ ಜವಾಬ್ದಾರಿ ಹೊರಿಸುವ ಮೂಲಕ ಚುನಾವಣೆಯಲ್ಲಿ ಬಂಡಾಯ ಏಳದಂತೆ ಮಾಡುವ ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಿದೆ. ಇದಕ್ಕಾಗಿ ಒಂದೇ ಪಕ್ಷದ ಆಕಾಂಕ್ಷಿತರನ್ನು ಮತ್ತೂಬ್ಬ ಟಿಕೆಟ್ ಆಕಾಂಕ್ಷಿ ಚುನಾವಣೆಗೆ ಸ್ಪರ್ಧಿಸದಂತೆ ಸಮಾಧಾನಗೊಳಿಸಲು ರಾತ್ರಿಯ ಪಾನಗೋಷ್ಠಿಗಳು ಹೆಚ್ಚಾಗಿ ನಡೆಯುತ್ತಿವೆ.
ಜಿಲ್ಲೆಯ ಮೂರು ಪಕ್ಷ ಗಳಿಗೆ ಪ್ರತಿಷ್ಠೆಯ ಚುನಾವಣೆ : ಜಿಲ್ಲೆಯಲ್ಲಿ ಯಾವುದೇ ಚುನಾವಣೆ ಬಂದರೂ ಅತಿ ಹೆಚ್ಚು ಪೈಪೋಟಿ ಎದುರಾಗುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಮಾತ್ರ. ಆದರೆ, ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿ 3797 ಸದಸ್ಯ ಸ್ಥಾನಗಳಲ್ಲಿ ಸ್ಪರ್ಧಿಸುವ ಮೂಲಕ ಪೈಪೋಟಿ ನೀಡಲು ಮುಂದಾಗಿದೆ. ಇದರಿಂದ ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಈಗಾಗಲೇ ಬಿಜೆಪಿ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಉದ್ದೇಶದಿಂದ ಗ್ರಾಮ ಸ್ವರಾಜ್ಯ ಸಮಾವೇಶ ಮಾಡುತ್ತಿದೆ. ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚುನಾವಣೆಗೆ ಸಿದ್ಧತೆ ಮಾಡಿಕೊಂಡಿವೆ. ಕಳೆದ ಬಾರಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಜೆಡಿಎಸ್ 2ನೇ ಸ್ಥಾನದಲ್ಲಿತ್ತು.
ನಾಮಪತ್ರ ಸಲ್ಲಿಕೆಗೆ ಸಿದ್ಧತೆ : ಡಿ.11ರಿಂದ ಮೊದಲ ಹಂತದ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕು ವ್ಯಾಪ್ತಿಯ ಗ್ರಾಪಂಗಳಿಗೆ ಹಾಗೂ 2ನೇ ಹಂತದಲ್ಲಿ ಪಾಂಡವಪುರ,ಕೆ.ಆರ್.ಪೇಟೆ, ನಾಗಮಂಗಲ ಹಾಗೂ ಶ್ರೀರಂಗಪಟ್ಟಣ ತಾಲೂಕುಗಳಲ್ಲಿ ಡಿ.16ರಿಂದ ಉಮೇದುವಾರಿಕೆ ಸಲ್ಲಿಕೆ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಆಕಾಂಕ್ಷಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆಗೆ ಬೇಕಾದ ಅಗತ್ಯ ದಾಖಲೆಗಳ ಸಂಗ್ರಹಕ್ಕೆ ತಾಲೂಕು, ನಾಡ ಕಚೇರಿಗಳಿಗೆ ಎಡತಾಕುತ್ತಿದ್ದಾರೆ.
ಚಿಹ್ನೆಗಳ ಆಯ್ಕೆಗೆ ಜ್ಯೋತಿಷಿಗಳ ಮೋರೆ : ಗೆಲುವಿನ ನಿರ್ಧಾರವೂ ಸಹ ಚಿಹ್ನೆಗಳ ಮೇಲೆ ಅವಲಂಬಿತವಾಗುತ್ತದೆ ಎಂಬ ನಂಬಿಕೆ ಅಭ್ಯರ್ಥಿಗಳಲ್ಲಿರುವುದರಿಂದ ಯಾವ ಚಿಹ್ನೆ ಪಡೆದರೆ ಸೂಕ್ತಎಂಬ ನಿರ್ಧಾರಕ್ಕೆ ಜೋತಿಷಿ ಹಾಗೂ ಹಿರಿಯ ಮುಖಂಡರಸಲಹೆಗಳಿಗೆ ಮುಂದಾಗಿದ್ದಾರೆ.ಕಳೆದ ಬಾರಿ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಷ್ ಪಡೆದಿದ್ದ ಕಹಳೆ ಊದುವ ಮನುಷ್ಯನ ಚಿಹ್ನೆ ಹೆಚ್ಚು ಪ್ರಚಲಿತಗೊಂಡಿರುವ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಿದೆ. ಆದರೆ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಈ ಚಿಹ್ನೆ ಪಡೆಯಲು ಹಿಂದೇಟು ಹಾಕುತ್ತಿದ್ದರೆ,ಯಾವುದೇ ಪಕ್ಷಗಳ ಬೆಂಬಲ ಇಲ್ಲದೆ ನಿಲ್ಲುವ ಪಕ್ಷೇತರ ಅಭ್ಯರ್ಥಿಗಳು ಈ ಚಿಹ್ನೆ ಪಡೆಯಲು ಮುಂದಾಗಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿಕೇಳಿ ಬರುತ್ತಿದೆ.
– ಎಚ್.ಶಿವರಾಜು