Advertisement

ಅಧಿಕ ಸ್ಥಾನ ಗೆಲ್ಲಲು ಪಕ್ಷಗಳ ರಣತಂತ್ರ

07:21 PM Dec 19, 2020 | Suhan S |

ಮಂಡ್ಯ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಹೆಚ್ಚು ಸ್ಥಾನ ಗಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಮೂರು ಪಕ್ಷಗಳ ಹಾಲಿ, ಮಾಜಿ ಶಾಸಕರು ಹಾಗೂ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

Advertisement

ಜಿಲ್ಲೆಯ ವಿವಿಧೆಡೆ ಸದಸ್ಯ ಸ್ಥಾನಗಳನ್ನು ಹರಾಜು ಹಾಕುವ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ಹರಾಜು ನಡೆಸಿದವರ ಮೇಲೆ ಪ್ರಕರಣ ದಾಖಲಿಸಿದ್ದು, ಎಚ್ಚರಿಕೆ ನೀಡಿದೆ. ಆದರೂ ಕೆಲವು ಗ್ರಾಮಗಳಲ್ಲಿ ದೇಗುಲ ಅಭಿವೃದ್ಧಿಗೆ ಹಣ ನೀಡುವ ಭರವಸೆ, ಪ್ರತಿಸ್ಪರ್ಧಿಗಳಿಗೆ ಹಣ, ಆಮಿಷ ನೀಡುವ ಮೂಲಕ ಗೌಪ್ಯವಾಗಿ ಅವಿರೋಧ ಆಯ್ಕೆಗಳು ನಡೆದಿವೆ.

ಕಣದಿಂದ ನಿವೃತ್ತಿ ಘೋಷಿಸಲು ಹರಸಾಹಸ: ಇನ್ನೂ ಕೆಲವು ಗ್ರಾಮಗಳಲ್ಲಿ ನಾಮ ಕೇ ವಾಸ್ತೆಗೆ ನಾಮಪತ್ರ ಸಲ್ಲಿಸಿ, ನಂತರ ವಾಪಸ್‌ ಪಡೆದಿದ್ದಾರೆ. ಮತ್ತೆ ಕೆಲವು ಗ್ರಾಮಗಳಲ್ಲಿ ಪ್ರತಿಸ್ಪರ್ಧಿಗೆ ಬೆಂಬಲ ಹೆಚ್ಚಾಗಿದ್ದರೆ, ಆತನನ್ನು ಹಣ ಹಾಗೂ ಇನ್ನಿತರೆ ಆಮಿಷವೊಡ್ಡುವ ಮೂಲಕ ಕಣದಿಂದ ನಿವೃತ್ತಿ ಹೊಂದುವಂತೆ ಮಾಡಲಾಗುತ್ತಿದೆ. ಇದಕ್ಕೆ ಮೂರು ರಾಜಕೀಯ ಪಕ್ಷಗಳ ನಾಯಕರು ಮಧ್ಯಸ್ಥಿಕೆ ವಹಿಸಿದ್ದು, ಸಂಧಾನದ ಮಾತುಕತೆ ನಡೆಯುತ್ತಿದೆ.

364 ಅವಿರೋಧ ಆಯ್ಕೆ: ಮೊದಲ ಹಂತದಲ್ಲಿ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕುಗಳ ಗ್ರಾಪಂಗಳಲ್ಲಿ ಈಗಾಗಲೇ 364 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ. ಮಂಡ್ಯ 116, ಮದ್ದೂರು 147 ಹಾಗೂ ಮಳವಳ್ಳಿ ತಾಲೂಕಿನಲ್ಲಿ 101 ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಇದರಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಎರಡನೇ ಹಂತದಲ್ಲಿ ಪಾಂಡವಪುರ, ನಾಗಮಂಗಲ, ಕೆ.ಆರ್‌.ಪೇಟೆ ಹಾಗೂ ಶ್ರೀರಂಗ ಪಟ್ಟಣತಾಲೂಕುಗಳ ಗ್ರಾಪಂಗಳಲ್ಲಿ ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡಿದ್ದು, ಪರಿಶೀಲನೆಯೂ ನಡೆದಿದೆ.

388 ಉಮೇದುವಾರಿಕೆ ತಿರಸ್ಕೃತ: ಎರಡನೇ ಹಂತದಲ್ಲಿ ನಡೆಯುತ್ತಿರುವ ಪಾಂಡವಪುರ, ಶ್ರೀರಂಗಪಟ್ಟಣ, ನಾಗಮಂಗಲ ಹಾಗೂ ಕೆ.ಆರ್‌ .ಪೇಟೆ ತಾಲೂಕುಗಳ 104 ಗ್ರಾಮ ಪಂಚಾಯಿತಿಗಳಪೈಕಿ 1,786 ಸ್ಥಾನಗಳಿಗೆ ಒಟ್ಟು 5,632 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಪಾಂಡವಪುರ 1,258, ಶ್ರೀರಂಗಪಟ್ಟಣ 1,279, ನಾಗಮಂಗಲ 1,293 ಹಾಗೂ ಕೆ.ಆರ್‌.ಪೇಟೆಯ 1,802 ನಾಮಪತ್ರಗಳು ಸಲ್ಲಿಕೆಯಾಗಿವೆ. ಪಾಂಡವಪುರ 18, ಶ್ರೀರಂಗಪಟ್ಟಣ 108, ನಾಗಮಂಗಲ 209 ಹಾಗೂ ಕೆ.ಆರ್‌.ಪೇಟೆ 53 ನಾಮಪತ್ರಗಳು ತಿರಸ್ಕೃತಗೊಂಡಿವೆ. ಒಟ್ಟು 5095 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ನಾಮಪತ್ರ ವಾಪಸ್‌ ಪಡೆವ ಕೊನೆ ದಿನ ಶುಕ್ರವಾರ ಮುಗಿದಿದ್ದು, ಎಷ್ಟು ಮಂದಿ ಕಣದಲ್ಲಿದ್ದಾರೆ ಎಂಬುದು ತಿಳಿಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next