ಮಾದನಹಿಪ್ಪರಗಿ: ಪ್ರತಿಷ್ಠೆ ಕಣವಾಗಿರುವ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿಈ ಬಾರಿ ಹಿಂದೆಂದೂ ಕಾಣದಷ್ಟು ಅಭ್ಯರ್ಥಿಗಳು ಕಣದಲ್ಲಿದ್ದು, ಜಿದ್ದಿನಿಂದಪ್ರಚಾರ ಕೈಗೊಳ್ಳುತ್ತಿದ್ದಾರೆ. ಜತೆಗೆ ಸಾಕಷ್ಟು ಖರ್ಚು ಮಾಡುತ್ತಿದ್ದಾರೆ.
ಹಿಂದಿನ ಬಾರಿ ಆಯ್ಕೆಯಾದ ಸದಸ್ಯರು ಹಾಗೂ ಹೊಸದಾಗಿ ಚುನಾವಣೆಗೆ ನಿಂತ ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ತಾಲೂಕಿನಲ್ಲಿ ಹೆಚ್ಚು ಅಂದರೆ 24ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತಿ ಇದಾಗಿದ್ದು, 60 ಅಭ್ಯರ್ಥಿಗಳುಸ್ಪರ್ಧೆಯಲ್ಲಿದ್ದಾರೆ. ಈ ಬಾರಿ ಆಭ್ಯರ್ಥಿಗಳುಸಾಮಾಜಿಕ ಜಾಲತಾಣವಾದ ಫೇಸ್‌ಬುಕ್, ವಾಟ್ಸ್ ಆ್ಯಪ್‌ನಲ್ಲಿ ಆಶ್ವಾಸನೆಗಳನ್ನು ನೀಡಿ ಮತಯಾಚಿಸುತ್ತಿದ್ದಾರೆ. ದೂರದ ಪುಣೆ, ಮುಂಬೈ, ಈಚಲಕರಂಜಿಗೆ ವಲಸೆ ಹೋಗಿದ್ದವರನ್ನು ಕರೆಯಿಸಿಕೊಳ್ಳುತ್ತಿದ್ದಾರೆ.
ಈ ಬಾರಿ ಗ್ರಾಮದ ಪ್ರತಿ ವಾರ್ಡ್‌ಗಳಲ್ಲಿಯೂ ಉಪ್ಪಿಟ್ಟು ವಾಸನೆ ಜೋರಾಗಿದೆ. ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ನಿತ್ಯವೂ ಮತದಾರರ ಮನೆ-ಮನೆಗೆ ತೆರಳಿ ಮತಯಾಚಿಸುವುದರ ಜೊತೆಗೆ ಉಪ್ಪಿಟ್ಟು ತಿನ್ನಲು ಬನ್ನಿ ಎಂದು ಆಹ್ವಾನಿಸುತ್ತಿದ್ದಾರೆ.ಕೆಲವರು ಸಿಗರೇಟ್, ಚಹಾ, ಡಾಬಾಗಳಲ್ಲಿ ಬೀಯರ್, ಬ್ರಾಂಡಿ, ಬಾಡೂಟ ಸವಿಯಲು ಆಸಕ್ತಿ ತೋರಿಸುತ್ತಿದ್ದಾರೆ. ಕೆಲವು ವಾರ್ಡ್ಗಳಲ್ಲಿ ಮೇಕೆ ಮಾಂಸದ ಅಡುಗೆಯನ್ನು ಮಾಡಿ ಬಡಿಸಲಾಗುತ್ತಿದೆ. ಇದರಿಂದಾಗಿ ಪ್ರತಿ ಅಭ್ಯರ್ಥಿಯಿಂದ ಅಂದಾಜು 25 ಸಾವಿರ ರೂ. ಪ್ರತಿನಿತ್ಯ ಖರ್ಚಾಗುತ್ತಿದೆ ಎನ್ನಲಾಗಿದೆ.
ಬೆಂಬಲಿಗರನ್ನು, ಮತದಾರರನ್ನು ದಾಬಾ, ಹೋಟೆಲ್‌ಗಳಿಗೆ ಕರೆದುಕೊಂಡು ಹೋಗುವ ಸಂಸ್ಕೃತಿ ಎಲ್ಲೆಡೆ ಬೆಳೆದಿದೆ. ಯುವಕರು ತಪ್ಪು ದಾರಿ ತುಳಿಯುತ್ತಿದ್ದಾರೆ. ಈ ರೀತಿ ಖರ್ಚು ಮಾಡಿ ಆರಿಸಿ ಬಂದವರು ಮುಂದೆ ಗ್ರಾಮ ಅಭಿವೃದ್ಧಿ ಮಾಡುತ್ತಾರೆ ಎನ್ನುವುದು ಸುಳ್ಳು. ಅವರು ತಾವು ಮಾಡಿದಖರ್ಚು ತೆಗೆಯಲು ಹೆಣಗಾಡುತ್ತಾರೆ. ಇಂತಹ ಸಂಸ್ಕೃತಿಗೆಚುನಾವಣೆ ಆಯೋಗ ಕಡಿವಾಣ ಹಾಕಬೇಕು. ಮತದಾರರು ಕ್ಷಣಿಕ ಆಸೆಗೆ ಮಾರು ಹೋಗದೇ ಎಚ್ಚೆತ್ತುಕೊಂಡು ಕೆಲಸ ಮಾಡುವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು.
– ಪರಮೇಶ್ವರ ಗೂರಪ್ಪ ಮಾಶಾಳಕರ, ಮಾಜಿ ಉಪಾಧ್ಯಕ್ಷ, ಗ್ರಾಪಂ
ರಾಜಕೀಯ ಪಕ್ಷಗಳಂತೆ ಗಾಮಪಂಚಾಯತಿ ಚುನಾವಣೆ ಖರ್ಚು- ವೆಚ್ಚಗಳ ಮೇಲೆ ಚುನಾವಣೆಆಯೋಗ ನಿಗಾ ಇಡುವುದಿಲ್ಲ. ಆದರೆ ಹಣ, ಹೆಂಡ ಹಂಚಿಕೆ ನಡೆದರೆ ಚುನಾವಣೆ ನೀತಿ ಸಂಹಿತೆ ತಂಡ (ಎಂಸಿಸಿ) ನಿಗಾ ಇಡಲಿದೆ. ಅಂತಹ ಪ್ರಕರಣ ಕಂಡು ಬಂದರೆ ಚುನಾವಣೆ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಆಗ ಎಂಸಿಸಿ ತಂಡ ಅಲ್ಲಿಗೆ ತೆರಳಿ ಪರಿಶೀಲಿಸುತ್ತದೆ.
– ಸಂತೋಷರಾಣಿ, ತಹಶೀಲ್ದಾರ್, ಆಳಂದ
-ಪರಮೇಶ್ವರ ಭೂಸನೂರ