Advertisement
ಬುಧವಾರ ಬೆಳಗ್ಗೆ ಮತಎಣಿಕೆ ಆರಂಭವಾಗಿದ್ದು, ತಡರಾತ್ರಿಯ ವರೆಗೂ ಮುಂದುವರಿಯಿತು. ರಾಜಕೀಯ ಪಕ್ಷಗಳಿಗೆ ಗ್ರಾಮ ಪಂಚಾಯತ್ ಚುನಾವಣೆಗಳು ಭದ್ರ ನೆಲೆಗಳಾಗಿದ್ದು, ಪಕ್ಷಗಳನ್ನು ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಗಟ್ಟಿಗೊಳಿಸಲು ಪಕ್ಷಗಳ ಪ್ರಮಖರು ಪ್ರಯತ್ನ ಪಟ್ಟಿದ್ದಾರೆ. ಈ ಬಾರಿ ಚುನಾವಣೆಗೆ ಆರು ತಿಂಗಳು ಮುನ್ನವೇ ಬಿಜೆಪಿಯು ಪಂಚತಂತ್ರ ಯೋಜನೆ ಮೂಲಕ ಪಕ್ಷ ಸಂಘಟನೆಗೆ ಒತ್ತುಕೊಟ್ಟಿತ್ತು. ಇದು ಚುನಾವಣೆಯಲ್ಲಿ ಪ್ರತಿಫಲ ನೀಡಿದಂತೆ ಕಾಣುತ್ತಿದೆ. ಗ್ರಾಮೀಣ ಮತದಾರರು ಕೈಬಿಡುವುದಿಲ್ಲ ಎಂಬ ಅತಿ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಫಲಿತಾಂಶ ಕೊಂಚ ಹಿನ್ನಡೆ ಉಂಟುಮಾಡಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಮತ ಎಣಿಕೆ ಕೇಂದ್ರಗಳಲ್ಲಿ ಎಣಿಕೆ ಬಹಳ ವಿಳಂಬವಾಗಿ ಸಾಗಿದ್ದು, ತಡರಾತ್ರಿಯ ವರೆಗೆ ನಡೆಯಿತು. ಇದರಿಂದ ಶೇ. 40ರಿಂದ ಶೇ. 50ರಷ್ಟು ಮಾತ್ರ ಸ್ಪಷ್ಟ ಫಲಿತಾಂಶ ಲಭ್ಯವಾಗಿತ್ತು.
Related Articles
ಉಡುಪಿ ಜಿಲ್ಲೆಯಲ್ಲಿ 5,055 ಅಭ್ಯರ್ಥಿ ಗಳಲ್ಲಿ ಬುಧವಾರ 2,225 ಮಂದಿಯ ಆಯ್ಕೆ ಘೋಷಿಸಲಾಗಿದೆ. ಒಟ್ಟು 2,365 ಸ್ಥಾನಗಳ ಪೈಕಿ 128 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಬ್ರಹ್ಮಾವರ ತಾಲೂಕಿನ 12 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಒಟ್ಟು 153ರ ಪೈಕಿ ಶೇ.75 ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ ಎಂದು ಬಿಜೆಪಿ ಹೇಳಿದೆ. ಇನ್ನೊಂದೆಡೆ, ಬುಧವಾರ ರಾತ್ರಿಯ ವರೆಗೆ 700 ಅಭ್ಯರ್ಥಿಗಳ ಆಯ್ಕೆಯನ್ನು ಮಾತ್ರ ಘೋಷಿಸಿದ್ದು, ಇವರಲ್ಲಿ ಶೇ. 50ರಷ್ಟು ಮಂದಿ ಕಾಂಗ್ರೆಸ್ ಬೆಂಬಲಿತರು ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
Advertisement
ಬೆಂಬಲಿತರ ನಡುವೆ ತೀವ್ರ ಪೈಪೋಟಿಮಂಗಳೂರು: ದಕ್ಷಿಣ ಕನ್ನಡದಲ್ಲಿಯೂ ಮತ ಎಣಿಕೆ ಬುಧವಾರ ತಡರಾತ್ರಿಯ ವರೆಗೆ ನಡೆದಿದ್ದು, ಬಿಜೆಪಿ-ಕಾಂಗ್ರೆಸ್ ಬೆಂಬಲಿತರ ನಡುವೆ ಭಾರೀ ಹಣಾಹಣಿ ಕಂಡುಬಂದಿತ್ತು. ರಾತ್ರಿ 10ರ ವರೆಗಿನ ಮಾಹಿತಿಯಂತೆ ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬಗಳಲ್ಲಿ ಬಿಜೆಪಿ ಬೆಂಬಲಿತರು ಮುನ್ನಡೆಯಲ್ಲಿದ್ದರೆ, ಮಂಗಳೂರು, ಬಂಟ್ವಾಳ, ಮೂಡುಬಿದಿರೆ ತಾಲೂಕುಗಳಲ್ಲಿ ತೀವ್ರ ಪೈಪೋಟಿ ಇತ್ತು. ಜಿಲ್ಲೆಯಲ್ಲಿ 91 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಒಟ್ಟು 3,131 ಗ್ರಾ.ಪಂ. ಸ್ಥಾನಗಳಿಗೆ ಎಲ್ಲ ಕಡೆಯೂ ತೀವ್ರ ಸ್ಪರ್ಧೆ ಇತ್ತು. ಯುವ ಗ್ರಾಮ ಪಂಚಾಯತ್
ಕೊರೊನಾ ಆತಂಕದ ನಡುವೆಯೂ ಸುಶಿಕ್ಷಿತ ಯುವಕರು ಹೆಚ್ಚು ಸಂಖ್ಯೆಯಲ್ಲಿ ಈ ಬಾರಿ ಚುನಾವಣ ಕಣದಲ್ಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವುದು ಗ್ರಾ.ಪಂ.ಗಳಿಗೆ “ಯುವ ಚೈತನ್ಯ’ವನ್ನು ನೀಡುವಂತೆ ಭಾಸವಾಗುತ್ತಿದೆ. ಯುವಕರು ಗೆದ್ದು ಪಕ್ಷ ರಾಜಕಾರಣವನ್ನು ಬಿಟ್ಟು ಗ್ರಾಮಗಳ ಅಭಿವೃದ್ಧಿಗೆ ಕಂಕಣ ತೊಟ್ಟರೆ ಗ್ರಾಮವಿಕಾಸವಾಗುವುದು ಖಚಿತ. ಮತದಾರ ಬಂಧುಗಳು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿರುವುದು ನಮ್ಮ ಮುಂದಿರುವ ಗ್ರಾ.ಪಂ. ಫಲಿತಾಂಶದಿಂದ ಸ್ಪಷ್ಟವಾಗಿದೆ. ಗ್ರಾಮದ ವಿಕಾಸಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಸೂಕ್ತ ಎಂದು ಜನರು ನಿರ್ಧರಿಸಿದ್ದಾರೆ.
-ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ ಗೆಲುವಿನ ಪರಂಪರೆ ಈ ಬಾರಿಯೂ ಮುಂದುವರಿಯಲಿದೆ. ಬಿಜೆಪಿಯ ರೈತ ವಿರೋಧಿ ಮತ್ತು ಬಡವರ ವಿರೋಧಿ ನೀತಿಯಿಂದ ರೋಸಿಹೋದ ಗ್ರಾಮೀಣ ಜನತೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವಿನ ಹಾದಿಯಲ್ಲಿರುವ ವರದಿಗಳು ಬರುತ್ತಿವೆ.
– ಸಿದ್ದರಾಮಯ್ಯ, ವಿಪಕ್ಷ ನಾಯಕ ಗ್ರಾ.ಪಂ. ಚುನಾವಣೆಯ ಘೋಷಿತ ಫಲಿತಾಂಶದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಬಹುತೇಕ ಕಡೆ ಗೆಲುವು ಸಾಧಿಸಿದ್ದಾರೆ. ಪೂರ್ಣ ಫಲಿತಾಂಶ ಬಂದ ಅನಂತರ ಸ್ಪಷ್ಟ ಚಿತ್ರಣ ಸಿಗಲಿದೆ.
– ಎಚ್.ಕೆ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ