Advertisement

ಗ್ರಾ.ಪಂ.ಚುನಾವಣೆ ಘೋಷಣೆ; ಸುರಕ್ಷತೆಯ ಪಾಲನೆ ಮುಖ್ಯ

11:45 PM Dec 01, 2020 | mahesh |

ಗ್ರಾಮ ಪಂಚಾಯತ್‌ ಚುನಾವಣೆ ನಡೆಯುತ್ತದೋ ಇಲ್ಲವೋ ಎನ್ನುವ ಚರ್ಚೆ-ಗೊಂದಲ ನಡೆದೇ ಇತ್ತು. ಕೊನೆಗೂ ಈ ಗೊಂದಲಗಳಿಗೆಲ್ಲ ತೆರೆಬಿದ್ದಿದ್ದು, ಡಿ. 22 ಹಾಗೂ ಡಿ. 27ರಂದು 30 ಜಿಲ್ಲೆಗಳ 5,762 ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆಯ ವೇಳಾಪಟ್ಟಿ ಘೋಷಿಸಿದೆ ರಾಜ್ಯ ಚುನಾವಣ ಆಯೋಗ. ಮತದಾನದ ಸಮಯದಲ್ಲಿ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮತಗಟ್ಟೆ ಪ್ರವೇಶಿಸುವ ಮುನ್ನ ಸ್ಯಾನಿಟೈಸರ್‌ ಬಳಸಬೇಕು ಎಂಬ ಮುನ್ನೆಚ್ಚರಿಕೆಯ ಕ್ರಮಗಳೂ ಇರಲಿವೆ.

Advertisement

ಆದಾಗ್ಯೂ ಕೋವಿಡ್‌ನ‌ ಈ ಸಮಯದಲ್ಲಿ ಚುನಾವಣೆಗಳನ್ನು ನಡೆಸುವ ವಿಚಾರ ಹಲವು ಆತಂಕಗಳನ್ನು ಹುಟ್ಟುಹಾಕುವುದು ಸಹಜವೇ. ಇದರ ನಡುವೆಯೇ ದೇಶಾದ್ಯಂತ ಹಲವು ಚುನಾವಣೆಗಳು ನಡೆದಿವೆ. ಬಿಹಾರದಲ್ಲಿ ವಿಧಾನಸಭಾ ಚುನಾವಣೆ, ದೇಶಾದ್ಯಂತ ಕೆಲವು ರಾಜ್ಯಗಳಲ್ಲಿ ಲೋಕಸಭಾ ಉಪಚುನಾವಣೆ ಹಾಗೂ ಕರ್ನಾಟಕದಲ್ಲಿ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳೂ ನಡೆದವು.

ಚುನಾವಣ ಆಯೋಗ ಈ ಚುನಾವಣೆಗಳ ಸಮಯದಲ್ಲೂ ಸುರಕ್ಷತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಆದರೆ ಪ್ರಚಾರ ಸಂದರ್ಭಗಳಲ್ಲಿ ಅಭ್ಯರ್ಥಿಗಳು, ರಾಜಕೀಯ ಕಾರ್ಯಕರ್ತರು ಬಹುತೇಕ ನಿಯಮಗಳನ್ನು ಉಲ್ಲಂ ಸಿರುವುದನ್ನು ನೋಡಿದ್ದೇವೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವೆನ್ನುವುದು ನೆಪಮಾತ್ರಕ್ಕೆ ಎನ್ನುವಂತಾಗಿತ್ತು. ಇನ್ನು ಗೆದ್ದ ಅಭ್ಯರ್ಥಿಗಳ ಬೆಂಬಲಿಗರೂ ಸಾಮಾಜಿಕ ಅಂತರ ಪರಿಪಾಲನೆಯನ್ನು ಮರೆತು ವಿಜೃಂಭಿಸಿದ್ದು ಕೂಡ ವರದಿಯಾಗಿತ್ತು.

ಚುನಾವಣ ಆಯೋಗವು ಮತಗಟ್ಟೆಯಲ್ಲಿ ಅಪಾಯಕ್ಕೆಡೆಯಾಗದಂತೆ ಸುರಕ್ಷತ ಕ್ರಮಗಳನ್ನು ಖಂಡಿತ ಜಾರಿಮಾಡುತ್ತದೆ. ಆದರೆ ಅದರ ಆಚೆಗೂ ಸುರಕ್ಷತ ಕ್ರಮಗಳ ಪಾಲನೆಯ ಜವಾಬ್ದಾರಿ ಎಲ್ಲರ ಮೇಲೂ ಇರುತ್ತದೆ. ಈಗ ಗ್ರಾಮ ಪಂಚಾಯತ್‌ ಚುನಾವಣೆಯ ಸಮಯದಲ್ಲೂ ಸುರಕ್ಷತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ಪ್ರತಿಯೊಂದು ಮತಗಟ್ಟೆಗಳಲ್ಲೂ ಮತದಾರರ ಗರಿಷ್ಠ ಸಂಖ್ಯೆಯನ್ನೂ ಮಿತಿಗೊಳಿಸಲಾಗಿದೆ. ಕೋವಿಡ್‌ ಸಾಂಕ್ರಾಮಿಕವು ಈಗ ನಗರ ಪ್ರದೇಶಗಳಿಗೆ ಸೀಮಿತವಾಗಿ ಉಳಿದಿಲ್ಲ. ಅದು ಗ್ರಾಮೀಣ ಭಾಗದಲ್ಲೂ ತನ್ನ ಬಾಹುಗಳನ್ನು ಚಾಚಿ ಬಿಟ್ಟಿದೆ. ಸಾಂಕ್ರಾಮಿಕದ ಸ್ವರೂಪ ಏಕತೆರನಾಗಿ ಇರುವುದಿಲ್ಲ. ಕೆಲವರಿಗೆ ಲಕ್ಷಣಗಳು ಸ್ಪಷ್ಟವಾಗಿದ್ದರೆ, ರೋಗಲಕ್ಷಣವಿಲ್ಲದೇ ಇರುವವರೂ ಅನೇಕರಿರುತ್ತಾರೆ. ಈ ಕಾರಣಕ್ಕಾಗಿಯೇ ಮತದಾನದ ಸಮಯದಲ್ಲಿ ಸೋಂಕು ಹರಡದಂತೆ ಸೂಕ್ತ ಎಚ್ಚರಿಕೆಗಳನ್ನು ಪಾಲಿಸುವುದು ಎಲ್ಲರ ಜವಾಬ್ದಾರಿ.

ಚುನಾವಣ ಸಮಯದಲ್ಲಿ ಹಣ ಹಾಗೂ ಇತರ ಆಮಿಷಗಳನ್ನು ಒಡ್ಡುವ ಅಡ್ಡ ಮಾರ್ಗಗಳೂ ಎಷ್ಟೇ ಪ್ರಯತ್ನಗಳ ಅನಂತರವೂ ಇನ್ನೂ ನಿಂತಿಲ್ಲ. ಎಲ್ಲಿಯವರೆಗೂ ಮತದಾರರು ಇಂಥ ಆಮಿಷಗಳಿಗೆ ಬಲಿಯಾಗುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ಬದಲಾವಣೆ ಸಾಧ್ಯವೂ ಇಲ್ಲ. ಈ ನಿಟ್ಟಿನಲ್ಲಿ ಪ್ರಾಮಾಣಿಕತೆಯೇ ಎಲ್ಲರ ಮೂಲಮಂತ್ರವಾಗಬೇಕು. ಇನ್ನು ಗ್ರಾಮ ಪಂಚಾಯತ್‌ ಚುನಾವಣೆಗಳು ಹಳ್ಳಿಯ ಅಖಾಡವಾಗಿದ್ದರೂ ಗ್ರಾಮಾಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸುವ ಅವಕಾಶಗಳು ಎನ್ನುವುದನ್ನು ಮತದಾರರು ಮರೆಯಬಾರದು.

Advertisement
Advertisement

Udayavani is now on Telegram. Click here to join our channel and stay updated with the latest news.

Next