ಉಡುಪಿ : ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯು ಮೊದಲ ಹಂತದಲ್ಲಿ ನಡೆಯುತ್ತಿದ್ದು ಉಡುಪಿ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆಯುತ್ತಿದೆ.
ಉಡುಪಿ ಜಿಲ್ಲೆಯ ಉಡುಪಿ, ಬೈಂದೂರು, ಬ್ರಹ್ಮಾವರ ಮತ್ತು ಹೆಬ್ರಿ ತಾಲೂಕುಗಳ 67 ಗ್ರಾಮ ಪಂಚಾಯತ್ ಗಳ 1,047 ಸ್ಥಾನಗಳಿಗೆ ಮಂಗಳವಾರ ಮತದಾನ ನಡೆಯುತ್ತಿದೆ.
ಬೆಳಿಗ್ಗೆಯಿಂದಲೇ ಮತಗಟ್ಟೆಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ನಡೆಸಿದರು.
ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಉಡುಪಿಯಲ್ಲಿ 15.87%, ಹೆಬ್ರಿ 15.47%, ಹಾಗೂ ಬ್ರಹ್ಮಾವರ 16.49% ಮತದಾನ ನಡೆದಿದ್ದು ಜಿಲ್ಲೆಯಾದ್ಯಂತ ಸುಮಾರು 14.37% ಮತದಾನವಾಗಿದೆ.
ಜಿಲ್ಲೆಯ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲಿಸಿದರು.
ಮತಗಟ್ಟೆಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಕಡ್ಡಾಯ ಮಾಸ್ಕ್ ಧರಿಸುವಿಕೆ, ಥರ್ಮಲ್ ಸ್ಕ್ಯಾನಿಂಗ್ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.
ಇದನ್ನೂ ಓದಿ:ಮತಗಟ್ಟೆಯಲ್ಲಿ ಚುನಾವಣಾ ಅಧಿಕಾರಿ ಬಳಿ ಲೋಡೆಡ್ ರಿವಾಲ್ವರ್ ಪತ್ತೆ!
ಯಾವುದೇ ಅಹಿತಕರ ಘಟನೆ ನಡೆಯದಂತೆ ಉಪ್ಪುಂದ ಪೇಟೆಯಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು, ಅಂತೆಯೇ ನಕ್ಸಲ್ ಬಾಧಿತ ಪ್ರದೇಶಗಳಲ್ಲಿಯೂ ಪೊಲೀಸ್ ಭದ್ರತೆಯೊಂದಿಗೆ ಮತದಾನ ನಡೆಯಿತು, ಉದ್ಯಾವರ , ಕಟಪಾಡಿ, ಅತ್ರಾಡಿ ,ಹೆಬ್ರಿ, ಬ್ರಹ್ಮಾವರ,ಕಿರಿಮಂಜೇಶ್ವರ, ಬಿಜೂರು, ಗೋಳಿಹೊಳೆ, ಉಪ್ಪುಂದ, ಕೆರ್ಗಾಲ್, ಮುಂತಾದ ಪ್ರದೇಶಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.