ಹುಮನಾಬಾದ: ಮೊದಲನೇ ಹಂತದ ಗ್ರಾಪಂ ಚುನಾವಣೆ ಮಂಗಳವಾರ ನಡೆಯಿತು. ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ, 9ಗಂಟೆಯವರೆಗೆ ತಾಲೂಕಿನಲ್ಲಿ 6.75ರಷ್ಟು ಮತದಾನ ನಡೆದಿತ್ತು. ನಂತರ 11 ಗಂಟೆಯವರೆಗೆ 18.54 ರಷ್ಟು, ಮಧ್ಯಾಹ್ನ 1 ಗಂಟೆಯವರೆಗೆ 34.73, ಮಧ್ಯಾಹ್ನ 3 ಗಂಟೆಯವರೆಗೆ 50.63 ರಷ್ಟು ಮತದಾನ ನಡೆದಿತ್ತು. ಸಂಜೆ ಹೊತ್ತಿಗೆ ಬಹುತೇಕ ಗ್ರಾಮಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿ ಕಂಡು ಬಂತು.
ಅದೇ ರೀತಿ ಚಿಟಗುಪ್ಪ ತಾಲೂಕಿನಲ್ಲಿ ಕೂಡ ಉತ್ತಮ ಮತದಾನ ನಡೆದಿದ್ದು, ಬೆಳಗ್ಗೆ 9 ಗಂಟೆವರೆಗೆ 7.41ರಷ್ಟು, 11 ಗಂಟೆವರೆಗೆ18.61ರಷ್ಟು, 1 ಗಂಟೆವರೆಗೆ 32.20ರಷ್ಟು, ಮಧ್ಯಾಹ್ನ 3 ಗಂಟೆಗೆ 41.13ರಷ್ಟು ಮತದಾನ ನಡೆದಿತ್ತು.
ಅಧಿಕಾರಿಗಳ ಭೇಟಿ: ಜಿಲ್ಲಾಧಿಕಾರಿ ರಾಮಚಂದ್ರನ್. ಆರ್ ಮತ್ತು ಎಸ್‌ಪಿ ನಾಗೇಶ ಡಿ.ಎಲ್.ಮಂಗಳವಾರ ಹುಮನಾಬಾದ ಹಾಗೂ ಚಿಟಗುಪ್ಪ ತಾಲೂಕಿನ ವಿವಿಧ ಮತ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಯಾ ಮತಗಟ್ಟೆಗಳಲ್ಲಿನ ನಾನಾ ವ್ಯವಸ್ಥೆಯ ವೀಕ್ಷಣೆ ನಡೆಸಿದರು.
ತಾಲೂಕಿನಲ್ಲಿ ಸಿಪಿಐ ಮಲ್ಲಿಕಾರ್ಜುನ ಯಾತನೂರ್, ಪಿಎಸ್‌ಐ ರವಿಕುಮಾರ, ಹಳ್ಳಿಖೇಡ ಬಿ ಪಿಎಸ್‌ಐ ಲಿಂಗಪ್ಪ ಮಣ್ಣೂರ್, ಚಿಟಗುಪ್ಪ ವ್ಯಾಪ್ತಿಯಲ್ಲಿ ಸಿಪಿಐಶರಣಬಸವೇಶ್ವರ ಭಜಂತ್ರಿ, ಪಿಎಸ್‌ಐ ಮಹಾಂತೇಶಲೂಂಬಿ ಎಲ್ಲಾ ಕಡೆಗಳಲ್ಲಿ ಸಂಚರಿಸಿ ಯಾವುದೇಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸಿದರು.
ಹುಮನಾಬಾದ ಹಾಗೂ ಚಿಟಗುಪ್ಪ ತಾಲೂಕಿಗಳ ಬಹುತೇಕ ಮತಗಟ್ಟೆಗಳಲ್ಲಿ ಸಂಜೆ 5 ಗಂಟೆಯ ನಂತರ ಕೂಡ ಮತದಾನ ನಡೆದಿದೆ. ಚಿಟಗುಪ್ಪದಲ್ಲಿ ಒಟ್ಟಾರೆ73.58 ರಷ್ಟು ಮತದಾನ ನಡೆದಿದೆ. 5 ಗಂಟೆವರೆಗೆಮತಕೇಂದ್ರಕ್ಕೆ ಬಂದ ಜನರಿಗೆ ಅಧಿಕಾರಿಗಳು ಚೀಟಿನೀಡುವ ವ್ಯವಸ್ಥೆ ಮಾಡಿದ್ದು, ಸಮಯಕ್ಕೆ ಸರಿಯಾಗಿಬಂದವರಿಗೆ ಮತದಾನದ ಹಕ್ಕು ಚಲಾಯಿಸಲು ಚುನಾವಣಾ ಧಿಕಾರಿಗಳು ಅನುವುಮಾಡಿಕೊಟ್ಟರು. ತಾಲೂಕಿನ ದುಬಲಗುಂಡಿ, ಮೋಳಕೇರಾ, ಹುಡಗಿ, ಬೇನಚಿಂಚೋಳಿ, ಕಬಿರಾಬಾದ, ಬೇಮಳಖೇಡಾ ಸೇರಿದಂತೆ ಬಹುತೇಕ ಕಡೆಗಳಲ್ಲಿ ಹೆಚ್ಚಿನ ಸಮಯದ ವರೆಗೆ ಮತದಾನ ನಡೆದಿದೆ.