ಚಿಕ್ಕಬಳ್ಳಾಪುರ: ಜಿಲ್ಲೆಯ ಮೂರು ತಾಲೂಕುಗಳಲ್ಲಿ ಮಂಗಳವಾರ ನಡೆದ ಗ್ರಾಪಂ ಚುನಾವಣೆ ಸಣ್ಣ ಪುಟ್ಟ ಘಟನೆಗಳು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ.89.42 ಮತದಾನವಾಗಿದೆ.
ಶಿಡ್ಲಘಟ್ಟ, ಬಾಗೇಪಲ್ಲಿ ಹಾಗೂ ಚಿಂತಾಮಣಿ ತಾಲೂಕುಗಳಲ್ಲಿ 84 ಗ್ರಾಪಂಗಳ 1,288 ಸ್ಥಾನಗಳಿಗೆ ನಡೆದ ಚುನಾವಣೆಗೆ 720 ಮತಗಟ್ಟೆ ತೆರೆಯಲಾಗಿತ್ತು. ಬೆಳಗ್ಗೆ 7ರಿಂದ ಮತದಾನ ಆರಂಭಗೊಂಡು ಸಂಜೆ 5ಗಂಟೆ ವರೆಗೆ ಮತದಾನ ಮಾಡಿದರು.
ಗ್ರಾಪಂ ಚುನಾವಣೆಗೆ ಯಾವುದೇ ರೀತಿಯ ರಾಜಕೀಯ ಚೆನ್ಹೆ ಇಲ್ಲದಿದ್ದರೂ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು.
ಥರ್ಮಲ್ ಸ್ಕ್ರೀನಿಂಗ್: ಕೆಲವರು ಆಟೋ ಮತ್ತು ಕಾರು ಗಳ ಮೂಲಕ ಮತದಾರರನ್ನು ಕರೆತಂದು ಮತದಾನ ಮಾಡುತ್ತಿದ್ದ ದೃಶ್ಯಗಳು ಕಂಡುಬಂದಿತು. ಮತಗಟ್ಟೆ ಕೇಂದ್ರಗಳ ಬಳಿ ಆಶಾ ಕಾರ್ಯಕರ್ತರು ಮತದಾರರಿಗೆ ಥರ್ಮಲ್ ಸ್ಕ್ಯಾನರ್ ಮೂಲಕ ಆರೋಗ್ಯ ತಪಾಸಣೆಮಾಡಿ ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸುವ ಮೂಲಕ ಮತದಾನ ಮಾಡಲು ಅವಕಾಶ ಮಾಡಿಕೊಟ್ಟರು. ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ 25 ಗ್ರಾಪಂಗಳ380 ಸ್ಥಾನ, ಶಿಡ್ಲಘಟ್ಟ ತಾ.24 ಗ್ರಾಪಂಗಳ 352 ಸ್ಥಾನ, ಚಿಂತಾಮಣಿ ತಾ.35 ಗ್ರಾಪಂಗಳ 556 ಸ್ಥಾನಗಳಿಗೆ ಶಾಂತಿಯುತವಾಗಿ ಚುನಾವಣೆ ನಡೆದಿದೆ.
ಹಾಲಿ-ಮಾಜಿ ಶಾಸಕರಿಂದ ಮತದಾನ: ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಅವರು ತಮ್ಮ ಪತ್ನಿರತ್ನಮ್ಮ ಅವರೊಂದಿಗೆ ಸ್ವಗ್ರಾಮ ಹಂಡಿಗನಾಳ ಮತಗಟ್ಟೆ ಕೇಂದ್ರದಲ್ಲಿ ಮತ ಚಲಾಯಿಸಿದರು. ಅದೇ ರೀತಿ ಮಾಜಿ ಶಾಸಕ ಎಂ.ರಾಜಣ್ಣ ಅವರು ಅವರ ಪತ್ನಿ ಶಿವಲೀಲಾ ಮತ್ತು ಪುತ್ರಿಯೊಂದಿಗೆ ಸ್ವಗ್ರಾಮ ಎಲ್.ಮುತ್ತುಕದಹಳ್ಳಿ ಮತಗಟ್ಟೆಕೇಂದ್ರದಲ್ಲಿ ಮತದಾನ ಮಾಡಿದರು.
ಶತಾಯುಷಿಗಳಿಂದ ಮತದಾನ: ಬೆಳಗ್ಗೆ 7 ರಿಂದ 9ರ ತನಕ ಆಮೆಗತಿಯಲ್ಲಿ ನಡೆದರೂ ಸಹ ತದನಂತರ ಉತ್ಸಾಹದಿಂದ ಮತದಾನ ಮಾಡಿದರು.ಶಿಡ್ಲಘಟ್ಟ ತಾ.ಆನೂರು ಗ್ರಾಪಂನ ಬೆಳ್ಳೂಟಿ ಗ್ರಾಮದಲ್ಲಿಶತಾಯುಷಿ ನಂಜಮ್ಮ ಹಾಗೂ ಮುನಿಶಾಮಪ್ಪಕುಟುಂಬ ಸದಸ್ಯರೊಂದಿಗೆ ಬಂದು ಹಕ್ಕು ಚಲಾಯಿಸಿದರು. ಬೆಳ್ಳೂಟಿ ಗ್ರಾಮದಲ್ಲಿ ಮತದಾನ ಮಾಡಲು ಬಂದ ಮತದಾರರಿಗೆ ಮಾಸ್ಕ್, ಎಲೆ, ಅಡಕೆ ನೀಡಿ ಗಮನ ಸೆಳೆದರು.