Advertisement

ಗ್ರಾಮ ಪಂಚಾಯತ್‌ನ ಸ್ವಂತ ನಿಧಿ ಬಳಸಿ ಅಡಿಕೆ ಕೃಷಿ

05:37 PM Feb 07, 2022 | Team Udayavani |

ವೇಣೂರು: ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನುದಾನಗಳನ್ನು ಕಾಯುತ್ತಿರುವ ಗ್ರಾಮ ಪಂಚಾಯತ್‌ಗಳು ಒಂದೆಡೆಯಾದರೆ ಕೆಲವು ಪಂಚಾಯತ್‌ಗಲ್ಲಿ ತಿಂಗಳಾಂತ್ಯಕ್ಕೆ ಸಿಬಂದಿಗೆ ವೇತನ ನೀಡಲು ಪರದಾಡುವ ಸ್ಥಿತಿಯೂ ಇದೆ.

Advertisement

ಆದರೆ ಪಡಂಗಡಿ ಗ್ರಾ.ಪಂ. ಸುಮಾರು 700 ಅಡಿಕೆ ಸಸಿಗಳನ್ನು ನೆಟ್ಟು ಆದಾಯಕ್ಕೊಂದು ಉಪಾಯ ಕಂಡು ಕೊಳ್ಳುವ ಮೂಲಕ ಗಮನ ಸೆಳೆದಿದೆ.

ರುದ್ರಭೂಮಿ ಜಾಗದಲ್ಲಿ
ಅಡಿಕೆ ಸಸಿ ನಾಟಿ
ಪಡಂಗಡಿ ಗ್ರಾ.ಪಂ.ನ ಗುತ್ತಿಗುಡ್ಡೆಯಲ್ಲಿ ಹಿಂದೂ ರುದ್ರಭೂಮಿ ಇದ್ದು ಇದರಲ್ಲಿ 3.75 ಎಕ್ರೆ ಜಾಗವಿದೆ. ಉಳಿಕೆ ಜಾಗವನ್ನು ಅಡಿಕೆ ನಾಟಿಗೆ ಬಳಸಿಕೊಳ್ಳಲಾಗಿದೆ. ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರ ಸಹಕಾರದಲ್ಲಿ ಗ್ರಾ.ಪಂ.ನ ಸ್ವಂತ ಅನುದಾನ 3.50 ಲಕ್ಷ ರೂ. ವನ್ನು ಬಳಕೆ ಮಾಡಿ ಜಾಗವನ್ನು ಸಮತಟ್ಟು ಮಾಡಿ, ಗುಂಡಿ ತೆಗೆದು, ಮಂಗಳ ಜಾತಿಯ ಅಡಿಕೆ ಸಸಿಯನ್ನು ನೆಡಲಾಗಿದೆ. ತೋಟದಲ್ಲಿ ಕೊಳವೆ ಬಾವಿ ಇದ್ದು, ಸ್ಪ್ರಿಂಕ್ಲೇರ್‌ ಮೂಲಕ ಸಸಿಗಳಿಗೆ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಇದರ ಜವಾಬ್ದಾರಿಯನ್ನು ಪಂಚಾಯತ್‌ನ ಪಂಪ್‌ ಚಾಲಕ ಚಂದ್ರಕಾಂತ್‌ ಮಲ್ಲಿಪ್ಪಾಡಿ ನಿರ್ವಹಿಸುತ್ತಿದ್ದಾರೆ.

ಗ್ರಾ. ಪಂ.ನಿಂದಲೇ ನಿರ್ವಹಣೆ
ನಾಟಿ ಮಾಡಿರುವ ಅಡಿಕೆ ಸಸಿಗಳಿಗೆ ಗೊಬ್ಬರ, ನೀರು ಹೀಗೆ ಪೂರ್ಣ ನಿರ್ವಹಣೆಯನ್ನು ಪಂಚಾಯತ್‌ನಿಂದಲೇ ನಿರ್ವಹಿಸಲಾಗುತ್ತಿದೆ. ಎರಡು ವರ್ಷಗಳ ಹಿಂದೆ ಪಂಚಾಯತ್‌ ಉಪಾಧ್ಯಕ್ಷರಾಗಿದ್ದ ಸಂತೋಷ್‌ ಕುಮಾರ್‌ ಜೈನ್‌ ಅವರಿಂದ ಈ ಯೋಜನೆ ರೂಪಿತಗೊಂಡಿತ್ತು.

ಗ್ರಾ.ಪಂ.ಗೆ ಆದಾಯ
ನೆಟ್ಟಿರುವ 700 ಸಸಿಗಳಲ್ಲಿ ಮುಂದಿನ ವರ್ಷಗಳಲ್ಲಿ ಆದಾಯ ಬರುವ ನಿರೀಕ್ಷೆಯನ್ನು ಗ್ರಾ. ಪಂ.ಇಟ್ಟು ಕೊಂಡಿದೆ. ಆರಂಭದಲ್ಲಿ ಅಲ್ಪ ಪ್ರಮಾಣದ ಆದಾಯ ಗಳಿಸಿದರೂ ಬಳಿಕ ಪ್ರತೀ ವರ್ಷ 15 ಕ್ವಿಂಟಾಲಿನಷ್ಟು ಅಡಿಕೆಯ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಒಟ್ಟು 2000 ಅಡಿಕೆ ಸಸಿಗಳನ್ನು ಬೆಳೆಸುವ ಇರಾದೆಯನ್ನು ಪಂಚಾಯತ್‌ ಹೊಂದಿದೆ.

Advertisement

ಯೋಜನೆ ರೂಪಿಸಲಿದ್ದೇವೆ
ರುದ್ರಭೂಮಿಯಲ್ಲಿನ ಹೆಚ್ಚುವರಿ ಖಾಲಿ ಜಾಗವನ್ನು ಸದ್ಬಳಕೆ ಮತ್ತು ಪಂಚಾಯತ್‌ಗೆ ಆದಾಯ ತರುವ ನಿಟ್ಟಿನಲ್ಲಿ ಅಡಿಕೆ ಸಸಿ ನೆಟ್ಟು ಪೊàಷಿಸುತ್ತಿದ್ದೇವೆ. ಮುಂದೆ ಇದರಲ್ಲಿ ಬರುವ ಆದಾಯವನ್ನು ಗ್ರಾ.ಪಂ. ವ್ಯಾಪ್ತಿಯ ಬಡ ಫಲಾನುಭವಿಗಳಿಗೆ ವಿನಿಯೋಗಿಸುವ ಬಗ್ಗೆ ಯೋಜನೆ ರೂಪಿಸಲಿದ್ದೇವೆ.
-ಮೀನಾಕ್ಷಿ ಶೆಟ್ಟಿ, ಅಧ್ಯಕ್ಷರು ಗ್ರಾ.ಪಂ. ಪಡಂಗಡಿ

Advertisement

Udayavani is now on Telegram. Click here to join our channel and stay updated with the latest news.

Next