Advertisement

ಸದಸ್ಯರ ಚಿತ್ತ ಈಗ ಅಧ್ಯಕ್ಷ ಗದ್ದುಗೆಯತ್ತ! ತೆರೆ ಹಿಂದೆ ಪ್ರಯತ್ನ ಆರಂಭ

04:41 PM Dec 31, 2020 | Team Udayavani |

ಬೀದರ್: ಜಿದ್ದಾಜಿದ್ದಿನ ಸ್ಪರ್ಧೆಗೆ ಹೆಸರಾಗಿರುವ “ಹಳ್ಳಿ ಫೈಟ್‌’ ಹಣಾಹಣಿ ಬುಧವಾರ ಫಲಿತಾಂಶ ಪ್ರಕಟಣೆಯೊಂದಿಗೆ ಅಂತ್ಯಗೊಂಡಿದ್ದು, ಈಗ ಎಲ್ಲರ ಕಣ್ಣು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಮೇಲೆ ನೆಟ್ಟಿದೆ. ಭಾರಿ ಪೈಪೋಟಿ ಮೂಲಕ
ಸದಸ್ಯರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಈಗೇನಿದ್ದರೂ ಅಧ್ಯಕ್ಷಗಿರಿಗಾಗಿ ತೆರೆಯ ಹಿಂದೆ ಪ್ರಯತ್ನ ಆರಂಭಿಸಲಿದ್ದಾರೆ.

Advertisement

ಗ್ರಾಪಂ ಚುನಾವಣೆ ಎಂದರೇನೇ ಪಕ್ಕಾ ಹಳ್ಳಿ ಚುನಾವಣೆ. ಅಲ್ಲಿ ಪರಸ್ಪರ ಜಿದ್ದಾಜಿದ್ದು, ಪೈಪೋಟಿ ಎದುರಾಗುವುದು ಸಹಜ. ಅಧಿಸೂಚನೆ ಹೊರಬೀಳುತ್ತಿದ್ದಂತೆ  ಸದಸ್ಯ ಸ್ಥಾನಕ್ಕೆ ಭರ್ಜರಿ ತಯ್ನಾರಿ ನಡೆಸಿ, ಗೆಲುವಿನ ನಗೆ ಬೀರಿರುವ ಸದಸ್ಯರು ಈಗ ಪಂಚಾಯತನ ಮುಖ್ಯಸ್ಥನಾಗುವ ಅಧ್ಯಕ್ಷ ಸ್ಥಾನದ ಮೇಲೆ ನಿಗಾ ಇಟ್ಟಿದ್ದಾರೆ. ಮತ್ತೂಂದೆಡೆ ಕಡಿಮೆ ಅಂತರದಲ್ಲಿ ಸೋಲುಂಡಿರುವ ಸದಸ್ಯರು ತಾವು ಎಡವಿದ್ದು ಎಲ್ಲಿ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇನ್ನೂ ಗೆದ್ದವರಲ್ಲಿ ಯುವಕರೇ
ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ.

ಇದನ್ನೂ ಓದಿ;ಸಿಡ್ನಿ ಟೆಸ್ಟ್‌: ಉಮೇಶ್ ಬದಲಿಗೆ ಶಾರ್ದೂಲ್ ಠಾಕೂರ್‌ಗೆ ಹೆಚ್ಚಿನ ಅವಕಾಶ

178 ಗ್ರಾಪಂ 2912 ಸದಸ್ಯ ಸ್ಥಾನ: ಜಿಲ್ಲೆಯ 178 ಗ್ರಾಪಂನ 2912 ಸದಸ್ಯ ಸ್ಥಾನಕ್ಕೆ ಎರಡು ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆದಿತ್ತು. ಮತದಾರ ಪ್ರಭುಗಳು ಮತ ಯಂತ್ರದಲ್ಲಿ ತಮ್ಮ ಹಕ್ಕಿನ ಮೂಲಕ ಒಟ್ಟು 8675 ಜನ ಅಭ್ಯರ್ಥಿಗಳ ಭವಿಷ್ಯ ಬರೆದಿದ್ದರು. ಬುಧವಾರ ಏಣಿಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಮತ ಏಣಿಕೆಯತ್ತ ಇತ್ತು. ಹೀಗಾಗಿ ಸ್ಪರ್ಧೆಯಲ್ಲಿರುವ
ಅಭ್ಯರ್ಥಿಗಳಲ್ಲಿ ತಳಮಳ ಶುರುವಾಗಿತ್ತು. ಈಗ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದ್ದ ಭವಿಷ್ಯ ಹೊರಬಿದ್ದಿದೆ. ಪ್ರತಿ ಬಾರಿಗಿಂತ ಪಂಚಾಯತ ಚುನಾವಣೆ ಅಬ್ಬರ ತುಸು ಜೋರಾಗಿಯೇ ಇತ್ತು. ಪಂಚಾಯತಗಳಿಗೆ ಹರಿದು ಬರುತ್ತಿರುವ ಅನುದಾನದ ಜತೆಗೆ ಗ್ರಾಪಂ ಮೂಲಕ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಆಶಯ ಇದಕ್ಕೆ ಕಾರಣ. ಇದರಿಂದಾಗಿ ಎಲ್ಲರ ಕಣ್ಣು ಈಗ ಪಂಚಾಯತ ಮೇಲೆ ಬಿದ್ದಿರುವುದರಿಂದ ಚುನಾವಣೆಗೆ ಸ್ಪ ರ್ಧಿಸುವವರ ಸಂಖ್ಯೆಯೂ ದಾಟಿತ್ತು. ಪ್ರತಿ ಹಿಂದೆಂದಿಗಿಂತಲೂ ಹಣ-ಹೆಂಡದ ಹೊಳೆ ಜಾಸ್ತಿಯೇ ಹರಿದಿತ್ತು.

ಕೊರೊನಾಂತಕ ನಡುವೆ ಜನ ಜಾತ್ರೆ: ಕೊರೊನಾ ಆತಂಕದ ನಡುವೆಯೂ ಬೀದರ ತಾಲೂಕಿನ ಗ್ರಾಪಂಗಳ ಮತ ಎಣಿಕೆ ಪ್ರಕ್ರಿಯೆ ನಡೆದ ನಗರದ ಬಿವ್ಹಿಬಿ ಕಾಲೇಜು ಎದುರು ಜನ ಜಾತ್ರೆಯೇ ಸೇರಿತ್ತು. ಫಲಿತಾಂಶಕ್ಕಾಗಿ ಅಭ್ಯರ್ಥಿಗಳು ಮತ್ತು ಏಜೆಂಟ್‌ಗಳು ಎಣಿಕೆ ಕೇಂದ್ರದಲ್ಲಿ ಬಿಡುಬಿಟ್ಟು ಆತಂಕದಲ್ಲಿದ್ದರೆ, ಇತ್ತ ಹೊರಗೆ ಅವರಿಗಾಗಿ ಕಾಯುತ್ತಿದ್ದ ಬೆಂಬಲಿಗರಲ್ಲಿ
ತಳಮಳ ಶುರುವಾಗಿತ್ತು. ಒಟ್ಟು 15 ಟೇಬಲ್‌ಗ‌ಳ ವ್ಯವಸ್ಥೆ ಮಾಡಲಾಗಿತ್ತು.

Advertisement

ಪ್ರತಿ ಸುತ್ತಿನಲ್ಲಿ 3 ಗ್ರಾಪಂಗಳಂತೆ ಎಣಿಕೆ ಮತ್ತು ಫಲಿತಾಂಶ ಪ್ರಕಟಣೆ ಕ್ರಮ ಕೈಗೊಂಡಿದ್ದ ಜಿಲ್ಲಾಡಳಿತ ಅದರಂತೆ ಕೇಂದ್ರದೊಳಗೆ ಏಜೆಂಟರ್‌ಗಳನ್ನು ಬಿಡಲಾಗುತ್ತಿತ್ತು. ಹೀಗಾಗಿ ಬಿವ್ಹಿಬಿ ಕಾಲೇಜು ಹೊರಭಾಗದಲ್ಲಿ ಏಜೆಂಟರಗಳು ಕೈಯಲ್ಲಿ ಪಾಸ್‌ ಹಿಡಿದುಕೊಂಡು ನಿಂತಿದ್ದ ದೊಡ್ಡ ಸಾಲು ಇತ್ತು. ಅಭ್ಯರ್ಥಿಗಳ ಬೆಂಬಲಿಗರು ಮತ್ತು ಗ್ರಾಮಸ್ಥರು ಕಾಲೇಜು ಹೊರಗೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು. ಅಭ್ಯರ್ಥಿಗಳ ಪರ ಘೋಷಣೆ, ಕಿರಿಚಾಟ ಮುಗಿಲು ಮುಟ್ಟಿತ್ತು. ಕಾಲೇಜು ಒಳಗೆ ನುಗ್ಗಲು ಯತ್ನಿಸಿದ ಬೆಂಬಲಿಗರನ್ನು ಚದುರಿಸಲು ಖಾಕಿ ಪಡೆ ಲಾಠಿ ರುಚಿ ತೋರಿಸಬೇಕಾಯಿತು.

ಫಲಿತಾಂಶ ಪ್ರಕಟವಾಗುವ ಬೆಳಿಗ್ಗೆ 8 ಗಂಟೆವರೆಗೂ ಜಿಲ್ಲೆಯಲ್ಲಿ ಬೆಟ್ಟಿಂಗ್‌ ಜೋರು ಪಡೆದಿತ್ತು. ಗೆಲ್ಲುವ ಕುದುರೆಗಳ ಪರ ಹಣ ಹೆಚ್ಚುತ್ತಿತ್ತು. ಫಲಿತಾಂಶ ಹೊರಬಿದ್ದ ಬಳಿಕ ಇದರಿಂದ ಕೆಲವರಿಗೆ ಖುಷಿಯಾದರೆ ಹಲವರಿಗೆ ನಿರಾಶೆಯಾಯಿತು. ಮತ್ತೂಂದೆಡೆ ಸೋತವರು ಮರದ ಕೆಳಗೆ ತಣ್ಣಗೆ ಕುಳಿತು ಗಂಭೀರ ಲೆಕ್ಕಾಚಾದಲ್ಲಿ ಮುಳುಗಿದ್ದು ಕಂಡುಬಂದಿತು.

– ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next