ಜೇವರ್ಗಿ: ಬಿರುಕುಬಿಟ್ಟ ಗೋಡೆಗಳು, ಉದುರಿ ಬೀಳುವ ಸಿಮೆಂಟ್ ಪದರು, ಮಾಸಿದ ಬಣ್ಣ, ಜೋರಾದ ಮಳೆಗೆ ಸೋರುವ ಕಟ್ಟಡ. ಇದು ಜೇವರ್ಗಿ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಸೊನ್ನ ಗ್ರಾಮ ಪಂಚಾಯಿತಿ ಕಟ್ಟಡದ ದುಸ್ಥಿತಿ. ಕಳೆದ ಅನೇಕ ದಿನಗಳ ಹಿಂದೆಯೇ ಸೊನ್ನ ಗ್ರಾಪಂ ಕಟ್ಟಡ ಶಿಥಿಲಗೊಂಡಿದೆ. ಸಾಮಾನ್ಯ ಸಭೆ ನಡೆಸಲು ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ.
ಕಟ್ಟಡದ ಛಾವಣಿ ಅಲ್ಲಲ್ಲಿ ಕುಸಿದಿದ್ದು, ಆತಂಕ ಮನೆ ಮಾಡಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡೆತಡೆಯಾಗಿದೆ. ಗ್ರಾಪಂ ಕಟ್ಟಡದಲ್ಲಿ ಗ್ರಂಥಾಲಯ, ಸಭಾಭವನ ಹಾಗೂ ಸಿಬ್ಬಂದಿ ಕೋಣೆಗಳಿವೆ. ಆದರೆ ಇಲ್ಲಿ ಮೂಲ ಸೌಕರ್ಯದ ಕೊರತೆಯೂ ಇದೆ.
ಈ ಪಂಚಾಯಿತಿ ವ್ಯಾಪ್ತಿಗೆ ಕೇವಲ ಸೊನ್ನ ಗ್ರಾಮ ಮಾತ್ರ ಬರುತ್ತದೆ. ಈ ಗ್ರಾಮದಲ್ಲಿ ಕನಿಷ್ಟ 7600 ಜನಸಂಖ್ಯೆ ಇದೆ. ಈ ಕಟ್ಟಡ ನಿರ್ವಹಣೆ ಕೊರತೆಯಿಂದ ಬೀಳುವ ಹಂತಕ್ಕೆ ತಲುಪಿದೆ. ಹೀಗಾಗಿ ವಿವಿಧ ಕೆಲಸಗಳಿಗಾಗಿ ಗ್ರಾಪಂ ಕಚೇರಿಗೆ ಭೇಟಿ ನೀಡುವ ಗ್ರಾಮಸ್ಥರು ಆತಂಕಪಡುತ್ತಿದ್ದಾರೆ.
ಅಭಿವೃದ್ಧಿಯೂ ಗೌಣ: ಗ್ರಾಮದಲ್ಲಿ ಮಹಿಳಾ ಶೌಚಾಲಯದ ಕೊರತೆ ಬಾಧಿ ಸುತ್ತಿದೆ. ಇದರಿಂದ ಮಹಿಳೆಯರು ಬಹಿರ್ದೆಸೆಗೆ ಹೋಗಲು ಪರದಾಡುವಂತಾಗಿದೆ. ಸಿಸಿ ರಸ್ತೆ, ಚರಂಡಿ ನಿರ್ಮಾಣ, ನೈರ್ಮಲ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಈ ಬಗ್ಗೆ ಕಾಳಜಿ ತೋರಬೇಕಾದ ಆಡಳಿತ ಮಂಡಳಿ ನಿಷ್ಕಾಳಜಿ ವಹಿಸಿದೆ. ಅಭಿವೃದ್ಧಿ ಗೌಣವಾಗಿದೆ ಎಂದು ಪ್ರಜ್ಞಾವಂತ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯಿತಿ ಕಟ್ಟಡ ಹಲವು ದಿನಗಳ ಹಿಂದೆಯೇ ಶಿಥಿಲವಾಗಿದೆ. ದುರಸ್ತಿಗೆ ಮೇಲಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ. ಪಂಚಾಯಿತಿ ಕಟ್ಟಡದ ಪರಿಸ್ಥಿತಿಯೇ ಹೀಗಾದರೆ ಗ್ರಾಮದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಶಿವಲಿಂಗ ಹಳ್ಳಿ ಸೊನ್ನ ಪ್ರಶ್ನಿಸಿದರು.
*ವಿಜಯಕುಮಾರ ಎಸ್.ಕಲ್ಲಾ