ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಗ್ರಾಮ ಒನ್ ಯೋಜನೆಯನ್ನು ಫೆಬ್ರವರಿ ಅಂತ್ಯದೊಳಗೆ ರಾಜ್ಯಾದ್ಯಂತ ವಿಸ್ತರಿಸಲು ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಮೊಮ್ಮಾಯಿ ಸೂಚಿಸಿದ್ದಾರೆ.
ಈ ಕುರಿತು ಇ-ಆಡಳಿತ, ಆರ್‌ಡಿಪಿಆರ್, ಕಂದಾಯ ಇಲಾಖೆಗಳ ಅಧಿಕಾರಿಗಳು ಹಾಗೂ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಯವರು ಪತ್ರ ಬರೆದಿದ್ದಾರೆ. ಅಲ್ಲದೆ, ಗ್ರಾಮ ಒನ್ ಪರಿಶೀಲನೆಗೆ ವಾರಕ್ಕೊಮ್ಮೆ ಖುದ್ದು ಗ್ರಾಮ ಒನ್ ಆಪರೇಟರ್‌ಗಳು, ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಪರಿಶೀಲನ ಸಭೆಗಳನ್ನು ನಡೆಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಅದೇ ರೀತಿ ಗ್ರಾಮ ಒನ್ ಅನುಷ್ಠಾನಕ್ಕಾಗಿ ಇ-ಆಡಳಿತ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಯವರು ಕನಿಷ್ಠ ಮುಂದಿನ 2 ತಿಂಗಳವರೆಗೆ ಪ್ರತಿ ವಾರ ಸಭೆಯನ್ನು ನಡೆಸಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ:ಬಾವಿಗೆ ಬಿದ್ದ ಮೊಬೈಲ್ ತೆಗೆಯಲು ಹೋಗಿ ಸಿಲುಕಿಕೊಂಡ ಯುವಕ : ಮೇಲೆತ್ತಲು ರಕ್ಷಣಾ ತಂಡ ಹರಸಾಹಸ
ಗ್ರಾಮ ಒನ್‌ನಿಂದ ಸ್ವೀಕರಿಸಿದ ಅರ್ಜಿಗಳ ಶೀಘ್ರ ವಿಲೇವಾರಿ, ಅರ್ಜಿಗಳ ತಿರಸ್ಕಾರಕ್ಕೆ ಕಾರಣಗಳನ್ನು ಎಲ್ಲ ಇಲಾಖೆಗಳ ಡ್ರಾಪ್ ಡೌನ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಜಿಲ್ಲಾಧಿಕಾರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ತಿರಸ್ಕೃತ ಅರ್ಜಿಗಳನ್ನು ಪರಿಶೀಲಿಸಿ, ಸಕಾರಣವಿಲ್ಲದೆ ತಿರಸ್ಕರಿಸುತ್ತಿರುವ ಅಧಿಕಾರಿ/ಸಿಬಂದಿ ವಿರುದ್ಧ ಶಿಸ್ತು ಕ್ರಮ ವಹಿಸಬೇಕು ಹಾಗು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಯುವ ಎಂಪಿಕ್ ಮತ್ತು ಕೆಡಿಪಿ ಸಭೆಯಲ್ಲಿ ಪರಿಶೀಲಿಸಬೇಕು ಎಂದು ಸೂಚಿಸಿದ್ದಾರೆ.
ಎಲ್ಲ ಗ್ರಾಮ ಒನ್ ಆಪರೇಟರ್‌ಗಳಿಗೆ ಅನ್ವಯಿಸುವಂತೆ ಇ-ಆಡಳಿತ ಇಲಾಖೆಯಿಂದ ನೀತಿ ಸಂಹಿತೆ ಪ್ರಕಟಿಸಿ, ಇದರ ಕಡ್ಡಾಯ ಪಾಲನೆಯನ್ನು ಜಿಲ್ಲಾಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಗ್ರಾಮ ಒನ್ ಆಪರೇಟರ್‌ಗಳಿಗೆ ಅಗತ್ಯ ತರಬೇತಿ ನೀಡಬೇಕು ಎಂದು ಮುಖ್ಯಮಂತ್ರಿಯ ಸೂಚಿಸಿದ್ದಾರೆ.