Advertisement

ಗಡುವು ಮುಗಿದರೂ ಆಗದ ಗ್ರಾಮ ವಿಕಾಸ !

09:54 AM Aug 03, 2018 | Karthik A |

ಮಂಗಳೂರು: ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರ ತನ್ನ ಕನಸಿನ ಗ್ರಾಮ ವಿಕಾಸಕ್ಕೆ ಪೂರ್ಣ ಅನುದಾನ ನೀಡದ ಕಾರಣ ಇಡೀ ಯೋಜನೆ ಹಳಿ ತಪ್ಪುವಂತಿದೆ. ಸಮಗ್ರ ಗ್ರಾಮಾಭಿವೃದ್ಧಿಯ ಉದ್ದೇಶದಿಂದ ಹಿಂದಿನ ಸ‌ರಕಾರ ಈ ಯೋಜನೆಯನ್ನು ಘೋಷಿಸಿತ್ತೇ ಹೊರತು ಅನುದಾನ ನೀಡಲಿಲ್ಲ. ಹಾಗಾಗಿ ಯೋಜನೆಯ ಗಡುವು ಪೂರ್ಣಗೊಂಡರೂ ಗ್ರಾಮಗಳು ವಿಕಾಸವಾಗಿಲ್ಲ. ಕರಾವಳಿಯ ಎರಡು ಜಿಲ್ಲೆಗಳಲ್ಲೂ 62 ಗ್ರಾಮಗಳು ಆಯ್ಕೆಯಾಗಿದ್ದು, ಅವುಗಳ ಸ್ಥಿತಿಯೂ ಭಿನ್ನವಾಗಿಲ್ಲ. ರಾಜ್ಯಾದ್ಯಂತ 2015-16ನೇ ಸಾಲಿನಲ್ಲಿ 189 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಒಟ್ಟು 939 ಗ್ರಾಮಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿತ್ತು. ಮೂರು ವರ್ಷದೊಳಗೆ 75 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ನಿರ್ಧರಿಸಲಾಗಿತ್ತು. ಆಯ್ಕೆಯಲ್ಲಿ ಉಂಟಾದ ವಿಳಂಬ ಹಾಗೂ ಬಳಿಕ ಕೆಲವು ಗ್ರಾಮಗಳ ಬದಲಾವಣೆಯಿಂದಾಗಿ ಯೋಜನೆ ಎಲ್ಲೂ ಸಮರ್ಪಕವಾಗಿ ಜಾರಿಯಾಗಿಲ್ಲ. ಜತೆಗೆ ಅನುಷ್ಠಾನದ ಹೊಣೆಯನ್ನು ಗ್ರಾ. ಪಂ.ಗಳಿಗೆ ವಹಿಸಿದ್ದರಿಂದ ಕ್ರಿಯಾಯೋಜನೆ ಅನುಮೋದನೆ ಮತ್ತು ಅನುದಾನ ಬಿಡುಗಡೆಯಲ್ಲಿ ವಿಳಂಬವಾಗಿದ್ದರಿಂದ ಯೋಜನೆ ಜಾರಿಯಾಗಲಿಲ್ಲ ಎಂಬುದು ಸರಕಾರಿ ಅಧಿಕಾರಿಗಳ ಮಾಹಿತಿ.

Advertisement

ಅನುದಾನ ನೀಡಲಿಲ್ಲ
ಯೋಜನೆಗೆ ಒಟ್ಟು 755.02 ಕೋ. ರೂ. ವೆಚ್ಚ ಲೆಕ್ಕ ಹಾಕಲಾಗಿತ್ತು. ಯೋಜನೆ ಬೇಗ ಮುಗಿಸುವಂತೆ ಸರಕಾರ ಸೂಚಿಸುತ್ತಿತ್ತೇ ಹೊರತು ಪೂರ್ಣ ಅನುದಾನ ಬಿಡುಗಡೆ ಮಾಡಲಿಲ್ಲ. ಈಗ ಸರಕಾರವೂ ಬದಲಾಗಿದ್ದು, ಇಡೀ ಯೋಜನೆಯೇ ಮೂಲೆಗೆ ಸೇರಿದೆ.

ಕರಾವಳಿಯಲ್ಲಿ 62
ಯೋಜನೆಯಡಿ ಬೆಳಗಾವಿಯ 78, ಉಡುಪಿಯಿಂದ 25, ದಕ್ಷಿಣ ಕನ್ನಡದಲ್ಲಿ 37 ಗ್ರಾಮಗಳನ್ನು ಆಯ್ಕೆ ಮಾಡಲಾಗಿತ್ತು. ಕೊಡಗಿನ 10 ಗ್ರಾಮಗಳು ಆಯ್ಕೆಯಾಗಿದ್ದವು.

ರಸ್ತೆ ಅಭಿವೃದ್ಧಿಯೇ ಗ್ರಾಮವಿಕಾಸ?
ಆಯ್ಕೆಯಾದ ಗ್ರಾಮಗಳಲ್ಲಿ ಮುಖ್ಯಮಂತ್ರಿಗಳ 21 ಅಂಶಗಳ ಕಾರ್ಯಕ್ರಮ ಅನುಷ್ಠಾನಗೊಳ್ಳಬೇಕು. ಆದರೆ ರಸ್ತೆ ಅಭಿವೃದ್ಧಿಯನ್ನೇ ಗ್ರಾಮ ವಿಕಾಸ ಯೋಜನೆ ಕಾರ್ಯಕ್ರಮ ಎಂದು ಬಿಂಬಿಸಲಾಗುತ್ತಿದೆ. ಕನಿಷ್ಠ 20 ರೈತರ ಭೂ ಅಭಿವೃದ್ಧಿ, ಕನಿಷ್ಠ 20 ಕಿ.ಮೀ. ಹೊಲಕ್ಕೆ ಹೋಗುವ ಮಣ್ಣಿನ ರಸ್ತೆ ನಿರ್ಮಾಣ, ಕಣ, ಕುರಿ/ದನದ ದೊಡ್ಡಿ ನಿರ್ಮಾಣ, ಕನಿಷ್ಠ 2 ಕೆರೆಗಳ ಪುನಶ್ಚೇತನ, ಎಲ್ಲ ಮನೆಗಳಿಗೆ ಶೌಚಾಲಯ, ಕನಿಷ್ಠ 2 ಆಟದ ಮೈದಾನ ನಿರ್ಮಾಣ, ಒಂದಕ್ಕೆ ಹೊನಲು ಬೆಳಕು ಅಳವಡಿಕೆ, ಒಂದು ಸ್ಮಶಾನಾಭಿವೃದ್ಧಿ, ಅಂತರ್ಜಲ ಮರುಪೂರಣ ಕಾಮಗಾರಿ, ರಾಜೀವ್‌ಗಾಂಧಿ ಸೇವಾ ಕೇಂದ್ರ ನಿರ್ಮಾಣ, ಕೃಷಿಕ ಮಹಿಳಾ ಗುಂಪುಗಳಿಗೆ ಪ್ರೋತ್ಸಾಹ, ತಲಾ 50 ಜನರಿಗೆ ಸ್ವ ಉದ್ಯೋಗ, ಉದ್ಯೋಗಾವಕಾಶ ಹಾಗೂ ಕೌಶಲಾಭಿವೃದ್ದಿ ತರಬೇತಿ, ಕನಿಷ್ಠ 1 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, 100 ಮಹಿಳೆಯರಿಗೆ ಶೇ.4ರ ಬಡ್ಡಿದರದಲ್ಲಿ ಸಹಾಯಧನ, 2ರಿಂದ 5 ಕಾಲುಸಂಕ ನಿರ್ಮಾಣ, ಗ್ರಾಮೀಣ ಗೋದಾಮು ನಿರ್ಮಾಣ, ಅಗತ್ಯ ಅನುಸರಿಸಿ ಉದ್ಯಾನವನ ಹಾಗೂ ಕನಿಷ್ಠ 1,000 ಸಸಿ ನೆಡುವುದು, ಆವಶ್ಯಕತೆಗೆ ಅನುಸಾರ ಸೈಬರ್‌/ಕಂಪ್ಯೂಟರ್‌ ಕೇಂದ್ರ ಸ್ಥಾಪನೆ, ಕನಿಷ್ಠ 1 ಸಾಂಸ್ಕೃತಿಕ ಕೇಂದ್ರ ಸ್ಥಾಪನೆಗೆ ಆದ್ಯತೆ ನೀಡಬೇಕಿತ್ತು.

2015-16ನೇ ಗ್ರಾಮ ವಿಕಾಸ ಯೋಜನೆಗೆ ಆಯ್ಕೆ ಮಾಡಿರುವ ಗ್ರಾಮಗಳು ದಕ್ಷಿಣ ಕನ್ನಡದ 7 ವಿಧಾನ ಸಭಾ ಕ್ಷೇತ್ರದ  37 ಗ್ರಾಮಗಳು:
ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಮಳವೂರು, ನೆಲ್ಲಿಕಾರು, ಐಕಳ, ಪಣಪಿಲ,ಹೊಸಬೆಟ್ಟು, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ನೂಜಿ ಬಾಳ್ತಿಲ, ಬಿಳಿನೆಲೆ, ಪೆರುವಾಜೆ, ಐವರ್ನಾಡು, ಕಲ್ಮಡ್ಕ, ಕೌಕ್ರಾಡಿ, ನೆಲ್ಲೂರು ಕೆಮ್ರಾಜೆ, ಬಳ್ಪ, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಅಜ್ಜಿಬೆಟ್ಟು, ಬಡಗ ಬೆಳ್ಳೊರು, ಕಾವಳ ಮುಡೂರು, ಸಾಲೆತ್ತೂರು, ಕೊಯಿಲ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ  ವಿಟ್ಲ ಮುಟ್ನೂರು, ಬಿಳಿಯೂರು, ಕೆದಂಬಾಡಿ, ಸರ್ವೆ, ಬಲ್ನಾಡು, ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಅಡ್ಯಾರು, ಅಡ್ಡೂರು, ನೀರುಮಾರ್ಗ, ಪಡುಪೆರಾರ್‌, ಮಲ್ಲೂರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕೂರು, ಮಾಲಾಡಿ, ಹೊಸಂಗಡಿ, ಗರ್ಡಾಡಿ, ಕಣಿಯೂರು, ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಮಂಜನಾಡಿ, ಬೆಳ್ಮ, ಪುದು, ಕೈರಂಗಳ ಗ್ರಾಮ ಪಂಚಾಯತ್‌ ಗಳು ಆಯ್ಕೆಯಾಗಿವೆ.

Advertisement

ಶೀಘ್ರ ಮುಕ್ತಾಯ
ಜಿಲ್ಲೆಯಲ್ಲಿ ಗ್ರಾಮವಿಕಾಸ ಯೋಜನೆಯಡಿ ಉದ್ದೇಶಿತ 789 ಕಾಮಗಾರಿಗಳ ಪೈಕಿ 593 ಪೂರ್ಣಗೊಂಡಿವೆ. ಕೆಲವು ತಾಂತ್ರಿಕ, ಬದಲಿ ಪ್ರಸ್ತಾವನೆ ಹಾಗೂ ಇನ್ನಿತರ ಕಾರಣದಿಂದ ತಡವಾಗಿದ್ದು, ಶೀಘ್ರ ಮುಕ್ತಾಯ ಕಾಣಲಿವೆ.
– ಡಾ| ಎಂ.ಆರ್‌. ರವಿ, ಸಿಇಒ, ದ.ಕ.ಜಿ.ಪಂ.

ಅಭಿವೃದ್ಧಿಯಾಗಲಿ
ಗ್ರಾಮ ವಿಕಾಸ ಯೋಜನೆ ಅಂದರೆ ರಸ್ತೆ ಅಭಿವೃದ್ಧಿ ಮಾತ್ರ ಎಂಬಂತೆ ಬಹುತೇಕ ಜಿಲ್ಲೆಗಳಲ್ಲಿ ಒತ್ತು ನೀಡಲಾಗುತ್ತಿದೆ. ಯೋಜನೆಯ ಮೂಲ ಉದ್ದೇಶ ಈಡೇರುತ್ತಿಲ್ಲ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ್ದೇನೆ. ಸರಕಾರ ಸ್ಪಂದಿಸುವ ಭರವಸೆ ನೀಡಿದೆ. 
– ಐವನ್‌ ಡಿ’ಸೋಜ, ವಿಧಾನ ಪರಿಷತ್‌ ಮುಖ್ಯ ಸಚೇತಕ

— ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next