Advertisement
ಹಳ್ಳಿಗಳ ನೈರ್ಮಲ್ಯ ಹಾಳು ಮಾಡುತ್ತಿರುವ “ಹೊರಗಿನ ಕಸ ಮಾಫಿಯಾ’ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಧಿಕಾರ ನೀಡುವ ಸಂಬಂಧ “ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ-1993’ರ ಪ್ರಕರಣ 75ಕ್ಕೆ ತಿದ್ದುಪಡಿ ತರಲು ಗ್ರಾಮೀಣಾ ಭಿವೃದ್ಧಿ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿಫಾರಸಿನ ಮೇರೆಗೆ ಈ ತಿದ್ದುಪಡಿ ತರಲಾಗುತ್ತಿದ್ದು, ಪ್ರಸ್ತಾವನೆಗೆ ಗ್ರಾಮೀಣಾಭಿವೃದ್ಧಿ ಸಚಿವರ ಅನುಮೋದನೆ ಸಿಕ್ಕಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ-1993’ರ ಪ್ರಕರಣ 75ಲ್ಲಿ ಗ್ರಾಮದ ಅನೈರ್ಮಲ್ಯಕ್ಕೆ ಕಾರಣವಾಗುವ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸಾರ್ವಜನಿಕರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲು ಗ್ರಾ.ಪಂ.ಗೆ ಅವಕಾಶವಿತ್ತು. ಆದರೆ, ಈಗ ತಿದ್ದುಪಡಿ ನಿಯಮ ಜಾರಿಗೆ ಬಂದರೆ ಹೊರಗಿನಿಂದ ಕಸ ತಂದು ಹಳ್ಳಿಗಳಲ್ಲಿ ಸುರಿದವರ ಮೇಲೆ ದಂಡ ವಿಧಿಸುವ ಹಾಗೂ ತಪ್ಪಿತಸ್ಥರ ವಿರುದ್ಧ ಪೊಲೀಸ್ ದೂರು ದಾಖಲಿಸುವ ಕಾನೂನು ಅಧಿಕಾರ ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ಸಿಗಲಿದೆ.
ಅಭಿಯಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ “ಘನತಾಜ್ಯ ವಿಲೇವಾರಿ ನಿಯಮಾವಳಿ-2016’ರಲ್ಲಿ ಗ್ರಾಮೀಣ ಪ್ರದೇಶಕ್ಕೆ ಅನ್ವಯವಾಗುವಂತೆ ನಿಯಮಾವಳಿಗಳು ಇರಲಿಲ್ಲ. ಇದರ ನೆರವು ಪಡೆದುಕೊಂಡ ಕೆಲವರು ಬೇರೆ ಕಡೆಯಿಂದ ವಾಹನಗಳಲ್ಲಿ ಕಸ ತಂದು ಗ್ರಾ.ಪಂ. ವ್ಯಾಪ್ತಿಗೆ ಬರುವ ಹೆದ್ದಾರಿಗಳಲ್ಲಿ ಸುರಿದು ಹೋಗುತ್ತಿದ್ದರು. ಹಾಗಾಗಿ, ಕೇಂದ್ರ ಸರ್ಕಾರದ ಘನ ತ್ಯಾಜ್ಯ ನಿಯಾಮವಳಿಗಳು ಗ್ರಾಮೀಣ ಪ್ರದೇಶಕ್ಕೆ ಅನ್ವಯವಾಗುವಂತೆ ಮತ್ತು ಬೇರೆ ಕಡೆಗಳಿಂದ ಕಸ ತಂದು ಗ್ರಾ.ಪಂ. ಬಳಿ ಹಾದು
ಹೋಗುವ ಹೆದ್ದಾರಿಗಳಲ್ಲಿ ಸುರಿದವರ ಮೇಲೆ ದಂಡ ವಿಧಿಸಿ, ತಪ್ಪಿತಸ್ಥರ ವಿರುದ್ಧ ಪೊಲೀಸ್ ದೂರು ದಾಖಲು ಮಾಡುವ ಅಧಿಕಾರವನ್ನು ಸಂಬಂಧಪಟ್ಟ ಗ್ರಾ.ಪಂ.ಗೆ ಕೊಡಲು ಅನುಕೂಲವಾಗುವಂತೆ ಸೂಕ್ತ ತಿದ್ದುಪಡಿ ತರಲು ಕೋರಲಾಗಿತ್ತು. ಅದರಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.
Related Articles
Advertisement