Advertisement

ಗ್ರಾ.ಪಂ. ಸಿಬಂದಿಗೆ 3 ತಿಂಗಳಿಗೊಮ್ಮೆ ಸಂಬಳ !

02:49 AM Jun 05, 2019 | sudhir |

ಮಂಗಳೂರು: ತಿಂಗಳು ಪೂರ್ತಿ ಕೆಲಸ ಮಾಡಿ ಕೊನೆಯಲ್ಲಿ ವೇತನ ಪಡೆಯುವ ಕ್ರಮ ಎಲ್ಲರಿಗೂ ಗೊತ್ತಿದೆ. ಆದರೆ ಗ್ರಾಮ ಪಂಚಾಯತ್‌ಗಳ ಕೆಲವು ಸಿಬಂದಿಗೆ ಇದು ಅನ್ವಯಿಸುವುದಿಲ್ಲ. ತಿಂಗಳು ಪೂರ್ಣ ನಿಷ್ಠೆಯಿಂದ ದುಡಿದರೂ ಅವರಿಗೆ ಸಂಬಳ ಸಿಗುವುದು ಮಾತ್ರ ಮೂರು ತಿಂಗಳ ಅನಂತರ!

Advertisement

ರಾಜ್ಯದ 40,144ಕ್ಕೂ ಅಧಿಕ ಗ್ರಾ.ಪಂ. ಸಿಬಂದಿಯ ಪೈಕಿ ಬಹುತೇಕ ಮಂದಿಗೆ ಮಾರ್ಚ್‌ನಿಂದ ಸಂಬಳ ಸಿಕ್ಕಿಲ್ಲ. ಏಕೆಂದರೆ ಸರಕಾರದ ನಿಧಿಯಿಂದ ವೇತನ ಇನ್ನೂ ಬಿಡುಗಡೆಯಾಗಿಲ್ಲ. ಪರಿಣಾಮವಾಗಿ ಹಲವು ಪಂಚಾಯತ್‌ಗಳ ಡಾಟಾ ಎಂಟ್ರಿ ಆಪರೇಟರ್‌/ಗುಮಾಸ್ತರು, ಬಿಲ್ ಕಲೆಕ್ಟರ್‌, ಪಂಪ್‌ ಚಾಲಕರು, ಅಟೆಂಡರ್‌, ಅನುಮೋದನೆಗೊಳ್ಳದ ಡಾಟಾ ಎಂಟ್ರಿ ಆಪರೇಟರ್‌ಗಳು ಸಮಸ್ಯೆ ಎದುರಿಸುವಂತಾಗಿದೆ.

ಅನ್ಯರೆದುರು ಕೈಯೊಡ್ಡುವ ಸ್ಥಿತಿ

3 ತಿಂಗಳಿಂದ ವೇತನವಿಲ್ಲದೆ ಗ್ರಾ.ಪಂ. ಸಿಬಂದಿಗೆ ಕುಟುಂಬ ನಿರ್ವಹಣೆಯೇ ಕಷ್ಟವಾಗಿದೆ. ಶೈಕ್ಷಣಿಕ ಚಟುವಟಿಕೆಯ ಕಾಲವಾಗಿರುವ ಈ ಸಂದರ್ಭದಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಲು ಕೂಡ ಹಣವಿಲ್ಲದೆ ಸಾಲ ಪಡೆಯುವ ಪರಿಸ್ಥಿತಿ ಎದುರಾಗಿದೆ.

ಈ ಹಿಂದೆ ಆಯಾ ಗ್ರಾ.ಪಂ.ಗಳೇ ನೇರವಾಗಿ ತಮ್ಮ ಸಿಬಂದಿಗೆ ಸಂಬಳ ನೀಡುತ್ತಿದ್ದವು. ಆದರೆ ಬಳಿಕ ಸರಕಾರವೇ ನೇರವಾಗಿ ಜಿ.ಪಂ. ಮೂಲಕ ವೇತನ ಬಿಡುಗಡೆ ಮಾಡುತ್ತಿತ್ತು. ಕಳೆದ ಕೆಲವು ತಿಂಗಳಿನಿಂದ ಈ ವ್ಯವಸ್ಥೆಯಲ್ಲಿಯೂ ಲೋಪಗಳಾಗಿವೆ.

Advertisement

ಗ್ರಾ.ಪಂ.ಗಳ ಅಸಹಾಯಕತೆ

ಉತ್ತಮ ಆದಾಯ ಇರುವ ಪಂ.ಗಳು ತಮ್ಮ ಗ್ರಾ.ಪಂ. ನಿಧಿಯಿಂದಲೇ ಸಿಬಂದಿಗೆ ವೇತನ ನೀಡಿ,ಸರಕಾರದ ವೇತನ ಬಿಡುಗಡೆ ಆದ ಬಳಿಕ ಹೊಂದಾ ಣಿಕೆ ಮಾಡುವ ಸೂತ್ರ ಅನುಸರಿಸಿವೆ. ಆದರೆ ಬಹುತೇಕ ಗ್ರಾ.ಪಂ.ಗಳು ಉತ್ತಮ ಆದಾಯ ಹೊಂದಿರದ ಹಿನ್ನೆಲೆಯಲ್ಲಿ ಅಸಹಾಯಕವಾಗಿವೆ.

ಈ ಮಧ್ಯೆ ಗ್ರಾ.ಪಂ. ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬಂದಿಗೆ ಸರಕಾರದ ನಿಧಿಯಿಂದ ವೇತನ ನೀಡುವ ಹಿನ್ನೆಲೆಯಲ್ಲಿ ತಂತ್ರಾಂಶದಲ್ಲಿ ಅಳವಡಿಸಲು ಸರಕಾರ ಈ ಹಿಂದೆ ಸೂಚಿಸಿತ್ತು. ಆದರೆ ಸಾವಿರಾರು ಸಿಬಂದಿ ಇಎಫ್‌ಎಂಎಸ್‌ ಮೂಲಕ ಅನುಮೋದನೆಗೆ ತಾಂತ್ರಿಕ ಕಾರಣಗಳಿಂದ ಬಾಕಿಇದೆ. ಇವರು ಸಂಬಳ ಸಿಗದೆ ಮತ್ತೂಂದು ಸಮಸ್ಯೆಎದುರಿಸುತ್ತಿದ್ದಾರೆ. ಹೀಗಾಗಿ ಗ್ರಾ.ಪಂ. ಸಿಬಂದಿಯ ಹೆಸರು ಕೈಬಿಟ್ಟುಹೋಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯೂ ಈಗ ಸರಕಾರದ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next