ಬಜಪೆ : ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಅವರಣದಲ್ಲಿರುವ ನಿರುಪಯುಕ್ತ ಓವರ್ ಹೆಡ್ ಟ್ಯಾಂಕ್ ಅನ್ನು ಕೆಡವಲು ಬಜಪೆ ಗ್ರಾಮ ಪಂಚಾಯತ್ ನಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಮನವಿ ಮಾಡಲಾಗಿದೆ.
ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಈ ಟ್ಯಾಂಕ್ ಅನ್ನು ಕೆಡವಲು ಗ್ರಾ. ಪಂ.ಗೆ ಮನವಿ ಬಂದಿದ್ದು, ಇದಕ್ಕೆ ಸ್ಪಂದಿಸಿದ ಗ್ರಾ.ಪಂ. ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಟ್ಯಾಂಕ್ ಕೆಡವಲು ಬೇಕಾಗುವ ಮೊತ್ತದ ಅಂದಾಜು ಪಟ್ಟಿ ತಯಾರಿಸಲು ಮನವಿ ಮಾಡಿದೆ.
ಸುಮಾರು 30 ವರ್ಷಗಳ ಹಿಂದೆ ಜಿಲ್ಲಾ ಪರಿಷತ್ ಅನುದಾನದಿಂದ ಇಲ್ಲಿ 50,000 ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿತ್ತು. ಬಜಪೆ ಪೇಟೆ ಪ್ರದೇಶಗಳಿಗೆ ಈ ಟ್ಯಾಂಕ್‌ನಿಂದಲೇ ಕುಡಿಯುವ ನೀರು ಸರಬರಾಜು ಆಗುತ್ತಿತ್ತು. ಬಳಿಕ ಸೋರಿಕೆ ಉಂಟಾಗಿತ್ತು.
20 ವರ್ಷಗಳ ಹಿಂದೆ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಆ ಟ್ಯಾಂಕ್ ಸಮೀಪದಲ್ಲೇ ಇನ್ನೊಂದು 50,000 ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಿ ಸಿದ್ದು, ಈ ಹೊಸ ಟ್ಯಾಂಕ್ ಮೂಲಕವೇ ಈಗ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
ವರದಿ ಬಂದ ಬಳಿಕ ಕ್ರಮ
ಈ ಟ್ಯಾಂಕ್‌ನ ಬಗ್ಗೆ ಮೂರನೇ ತಂಡದ ಸಿವಿಲ್ ಎಂಜಿನಿಯರ್ ವಿಭಾಗದ ತಂತ್ರಜ್ಞರನ್ನು ಕರೆಸಿ, ಟ್ಯಾಂಕ್ ಅನ್ನು ಪರೀಕ್ಷಿಸಿ, ನೀರು ತುಂಬಿಸಲು ಯೋಗ್ಯವೋ, ಇಲ್ಲವೋ ಎಂದು ನೋಡಲಾಗುತ್ತದೆ. ಅವರ ವರದಿ ಮೇಲೆ ಇದು ನಿರ್ಧಾರವಾಗುತ್ತದೆ.
-ಪ್ರಭಾಕರ
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ