Advertisement

ಕುಮಾರಧಾರಾ ನದಿ ಪಕ್ಕದಲ್ಲೇ ಕಸ ಸುರಿದ ಗ್ರಾಮ ಪಂಚಾಯತ್‌

10:16 PM Jun 06, 2019 | Team Udayavani |

ಉಪ್ಪಿನಂಗಡಿ: ಇಲ್ಲಿನ ನೆಲ- ಜಲ ಸಂರಕ್ಷಣ ಸಮಿತಿ ಇತರ ಸಂಘಟನೆಗಳ ಸಹಭಾಗಿತ್ವದೊಂದಿಗೆ
ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಾಲಯ ಬಳಿ ನೇತ್ರಾವತಿ ನದಿಯನ್ನು ಸ್ವಚ್ಛಗೊಳಿಸಿತ್ತು. ಆದರೆ ಅಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಗ್ರಾ.ಪಂ. ಕುಮಾರಧಾರಾ ನದಿಯ ಬಳಿ ಎಸೆದಿದ್ದು, ಅದು ಮಳೆಗಾಲದಲ್ಲಿ ಮತ್ತೆ ನದಿಯನ್ನು ಸೇರುವ ಆತಂಕ ಎದುರಾಗಿದೆ.

Advertisement

ನದಿಗಳನ್ನು ತ್ಯಾಜ್ಯ ಮುಕ್ತಗೊಳಿಸಿ, ಪ್ರಾಕೃತಿಕ ಸಂಪತ್ತಾಗಿರುವ ನದಿಗಳಲ್ಲಿ ಶುದ್ಧ ನೀರು ಹರಿಯುವಂತೆ ಮಾಡಿ, ಮನುಷ್ಯನ ಸಹಿತ ಸಕಲ ಜೀವ ರಾಶಿಗಳಿಗೆ ಜಲಮೂಲವಾಗಿರುವ ನದಿಗಳ ಪಾವಿತ್ರ್ಯ ಉಳಿಸುವುದು ನಾಗರಿಕ ಸಮಾಜದ ಆದ್ಯ ಕರ್ತವ್ಯ ಎಂಬ ಸಂದೇಶದೊಂದಿಗೆ ಸ್ಕೌಟ್ಸ್‌ ಗೈಡ್ಸ್‌ ಸ್ಥಳೀಯ ಸಂಸ್ಥೆಯ ಅಧೀನದ ನೆಲ-ಜಲ ಸಂರಕ್ಷಣ ಸಮಿತಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಕಳೆದ ಶನಿವಾರ ಉಪ್ಪಿನಂಗಡಿಯಲ್ಲಿ ಸ್ವತ್ಛತಾ ಅಭಿಯಾನ ನಡೆಸಿತ್ತು. ಬಳಿಕ ದೇವಾಲಯದ ಬಳಿ ನದಿಯಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ಸ್ವತ್ಛಗೊಳಿಸಿತ್ತು. ಸಂಘಟನೆಗಳೊಂದಿಗೆ ವಿದ್ಯಾರ್ಥಿಗಳೂ ಕೈಜೋಡಿಸಿದ್ದರು. 2-3 ಗಂಟೆಗಳ ಕಾಲ ಬಿಸಿಲನ್ನೂ ಲೆಕ್ಕಿಸದೆ ಸ್ವತ್ಛತಾ ಕಾರ್ಯ ನಡೆದಿತ್ತು. ನದಿಯಲ್ಲಿ ಎಸೆದಿದ್ದ ಬಟ್ಟೆ ಬರೆ, ಪ್ಲಾಸ್ಟಿಕ್‌ ವಸ್ತುಗಳು ಇತ್ಯಾದಿಗಳನ್ನು ಹೆಕ್ಕಿ, ದೊಡ್ಡ ದೊಡ್ಡ ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿಸಿಡಲಾಗಿತ್ತು.

ಈ ತ್ಯಾಜ್ಯವನ್ನು ವಿಲೇವಾರಿ ಮಾಡುವ ಹೊಣೆಯನ್ನು ಗ್ರಾ.ಪಂ. ವಹಿಸಿಕೊಂಡಿತ್ತು. ನೇತ್ರಾವತಿ ನದಿಯಲ್ಲಿ ಸಂಗ್ರಹಿಸಿದ ತ್ಯಾಜ್ಯವನ್ನು ಗ್ರಾ.ಪಂ. ಪಿಕಪ್‌ ವಾಹನದಲ್ಲಿ ಸಾಗಿಸಿ, ಕುರಮಾರಧಾರಾ ಹೊಸ ಸೇತುವೆ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯ ಜಾಗದಲ್ಲಿ ಎಸೆದಿದೆ. ಇಲ್ಲಿಂದ ಕುಮಾರಧಾರಾ ನದಿಗೆ ಕೇವಲ 100 ಮೀ. ಅಂತರವಿದೆ. ಜೋರು ಮಳೆಯಾದರೆ ತ್ಯಾಜ್ಯ ಚರಂಡಿಯ ಮೂಲಕ ಮತ್ತೆ ನದಿಯನ್ನು ಸೇರಲಿದೆ.

ಜೇಸಿಐ ನೆಕ್ಕಿಲಾಡಿ ಘಟಕದ ಅಧ್ಯಕ್ಷ ವಿನೀತ್‌ ಶಗ್ರಿತ್ತಾಯ ಮಾತನಾಡಿ, ನೆಲ- ಜಲ ಸಂರಕ್ಷಣ ಸಮಿತಿ, ಜೇಸಿಐ ಸಹಿತ ಹಲವು ಸಂಘಟನೆಗಳ ಸಹಯೋಗದಲ್ಲಿ ನಾವು ಸ್ವತ್ಛತಾ ಶ್ರಮದಾನ ನಡೆಸಿದ್ದೆವು. ಅಲ್ಲಿ ಸಂಗ್ರಹವಾದ ತ್ಯಾಜ್ಯ ವಿಲೇವಾರಿಯ ಹೊಣೆಯನ್ನು ಉಪ್ಪಿನಂಗಡಿ ಗ್ರಾ.ಪಂ. ವಹಿಸಿಕೊಂಡಿತ್ತು. ಅವರು ಕುಮಾರಧಾರಾ ನದಿಯ ಬಳಿ ವಿಲೇವಾರಿ ಮಾಡಿದ್ದಾರೆ. ಮಳೆ ಬಂದರೆ ಅದು ಮತ್ತೆ ನದಿ ಸೇರುತ್ತದೆ. ಆದ್ದರಿಂದ, ನದಿಯನ್ನು ತ್ಯಾಜ್ಯಮುಕ್ತಗೊಳಿಸುವ ಸಂಕಲ್ಪ ಈಡೇರಿದಂತಾಗಿಲ್ಲ ಎಂಬ ನೋವು ಇದೆ. ಈ ಬಗ್ಗೆ ಗ್ರಾ.ಪಂ. ಕಾರ್ಯದರ್ಶಿ ಅವರಲ್ಲಿ ಪ್ರಸ್ತಾವಿಸಿದಾಗ, ನಮಗಿನ್ನೂ ತ್ಯಾಜ್ಯ ಘಟಕಕ್ಕೆ ಸ್ಥಳ ದೊರಕಿಲ್ಲ. ಇದಲ್ಲದೆ ಬೇರೆ ವಿಧಿಯಿಲ್ಲ ಎಂಬ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಗ್ರಾ.ಪಂ. ಅತೀ ಶೀಘ್ರವಾಗಿ ತ್ಯಾಜ್ಯ ಘಟಕ ಸ್ಥಾಪಿಸಲಿ. ನದಿ ಬದಿ ತ್ಯಾಜ್ಯ ರಾಶಿ ಹಾಕುವುದನ್ನು ನಿಲ್ಲಿಸಲಿ ಎಂದು ಆಗ್ರಹಿಸಿದ್ದಾರೆ.

ಸೂಕ್ತ ಜಾಗ ಸಿಕ್ಕಿಲ್ಲ
ವೇಗವಾಗಿ ಬೆಳೆಯುತ್ತಿರುವ ಉಪ್ಪಿನಂಗಡಿ ಪೇಟೆಯಲ್ಲಿ ತ್ಯಾಜ್ಯವೂ ಅಧಿಕ ಪ್ರಮಾಣದಲ್ಲಿ ಸಂಗ್ರಹಗೊಳ್ಳುತ್ತಿದೆ. ಇಲ್ಲಿನ ಗ್ರಾ.ಪಂ.ಗೆ ಕಸ ವಿಲೇವಾರಿಯೇ ದೊಡ್ಡ ಸಮಸ್ಯೆ. ಕೆಲವು ಕಡೆ ಜಾಗ ನೋಡಿದ್ದರೂ ಸ್ಥಳೀಯರು ನ್ಯಾಯಾಲಯದ ಮೂಲಕ ತಡೆಯಾಜ್ಞೆ ತರುತ್ತಿದ್ದು, ಇತರ ಹಲವು ಸಮಸ್ಯೆಗಳೂ ಎದುರಾಗುತ್ತಿವೆ. ಈ ವರೆಗೂ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗ ದೊರಕಿಲ್ಲ. ಹೀಗಾಗಿ, ಹೆದ್ದಾರಿ ಪಕ್ಕದ ಜಾಗದಲ್ಲೇ ಸುರಿಯುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next